
ಪ್ರಗತಿವಾಹಿನಿ ಸುದ್ದಿ, ದಾವಣಗೆರೆ: ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ ನಿವಾಸದ ಎದುರು ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಮಂಗಳವಾರ ಈ ಘಟನೆ ನಡೆದಿದ್ದು, ಆತ್ಮಹತ್ಯೆಗೆ ಯತ್ನಿಸಿದ ರೈತನನ್ನು ಹೊನ್ನಾಳಿ ತಾಲೂಕಿನ ಮಾದೇನಹಳ್ಳಿ ಗ್ರಾಮದ ರೈತ ಪರಮೇಶ್ವರಪ್ಪ ಎಂದು ಗುರುತಿಸಲಾಗಿದೆ. ಪರಮೇಶ್ವರಪ್ಪ ಅವರು ಕಳೆದ ಹಲವು ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದ ಜಮೀನನ್ನು ಬೇರೊಬ್ಬರು ಅತಿಕ್ರಮಿಸಿ ತಾವು ಬೆಳೆದ ತಾಳೆ ತೋಟವನ್ನು ನಾಶಪಡಿಸಿದ್ದು, ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿದರೂ ನ್ಯಾಯ ಒದಗಿಸಿಕೊಟ್ಟಿಲ್ಲ ಎಂಬ ಕಾರಣಕ್ಕೆ ಖಿನ್ನತೆಗೆ ಒಳಗಾಗಿ ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.
ಶಾಸಕರ ನಿವಾಸದ ಬಳಿ ಬಂದು ತಮಗೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸುತ್ತ ವಿಷ ಸೇವಿಸಿದರು. ಗಾಬರಿಗೊಂಡ ಸ್ಥಳದಲ್ಲಿದ್ದವರು ಪರಮೇಶ್ವರಪ್ಪ ಅವರಿಗೆ ತಕ್ಷಣ ಹೊನ್ನಾಳಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.