Kannada NewsLatest

ಜುಲೈ 10 ರಂದು ರೈತರ ಪ್ರತಿಭಟನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಎಪಿಎಂಸಿಗಳಲ್ಲಿ ನಡೆಯುತ್ತಿರುವ ರೈತರ ಆರ್ಥಿಕ ಶೋಷಣೆಯನ್ನು ತಡೆಗಟ್ಟುವ ಮೂಲಕ ಪಾರದರ್ಶಕ ಆಡಳಿತ ಜಾರಿಗೆ ತರುವಂತೆ ಆಗ್ರಹಿಸಿ ಎಪಿಎಂಸಿ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ದ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ತಿಳಿಸಿದ್ದಾರೆ.
ಶನಿವಾರದಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಸಾಮಾಜಿಕ ಹೋರಾಟಗಾರ ಶಿವಾಜಿ ಕಾಗಣೀಕರ ಅವರ ಮುಂದಾಳತ್ವದಲ್ಲಿ ಜುಲೈ 10 ರಂದು ಬೆಳಿಗ್ಗೆ 10.30 ಕ್ಕೆ ನಗರದ ಚನ್ನಮ್ಮ ವೃತ್ತದಿಂದ ಎಪಿಎಂಸಿ ಮಾರುಕಟ್ಟೆಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗುವದು. ಮೆರವಣಿಗೆಯ ನಂತರ ಎಪಿಎಂಸಿ ಕಚೇರಿಯ ಮುಂದೆ ಧರಣಿ ನಡೆಸಲಾಗುವದು ಎಂದು ಅವರು ವಿವರಿಸಿದರು.
ರೈತರ ಸ್ವಾಭಿಮಾನದ ಬದುಕಿಗಾಗಿ ಮಾರುಕಟ್ಟೆಗಳಲ್ಲಿ ನಡೆಯುತ್ತಿರುವ ಆರ್ಥಿಕ ಶೋಷಣೆ ನಿಲ್ಲಬೇಕಾಗಿದೆ. ಎಪಿಎಂಸಿಗಳಲ್ಲಿ ಈಗಿರುವ ಬಿಳಿ ಚೀಟಿ ಪದ್ದತಿಯನ್ನು ರದ್ದು ಪಡಿಸಬೇಕು. ಅಧಿಕೃತ ವ್ಯಾಪಾರಿಗಳು ಅಧಿಕೃತ ರಸೀದಿಗಳನ್ನು ನೀಡಬೇಕು. ರೈತರ ಸಮ್ಮುಖದಲ್ಲಿಯೇ ಧಾರಣೆ ನಿರ್ಧರಿಸಬೇಕು. ನಕಲಿ ಕಂಪನಿಗಳ ಹಾವಳಿ ತಡೆಯಬೇಕು. ತೂಕದಲ್ಲಿ ಆಗುತ್ತಿರುವ ಮೋಸ ತಡೆಗಟ್ಟಬೇಕು. ರೈತರಿಂದ ಕಮಿಷನ್ ಪಡೆಯುವದನ್ನು ನಿಲ್ಲಿಸಬೇಕು. ಪಾರದರ್ಶಕ ಆಡಳಿತ ಜಾರಿಗೆ ತರಬೇಕು. ಮಾರುಕಟ್ಟೆ ಪ್ರಾಂಗಣದಲ್ಲಿ ಮೂಲ ಸೌಕರ್ಯ ಒದಗಿಸಬೇಕು ಹಾಗೂ ಜಾನುವಾರುಗಳಿಗೆ ನೆರಳು, ನೀರು, ಮೇವು ಒದಗಿಸಬೇಕು ಎಂದು ಆಗ್ರಹಿಸಿ, ಈ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಮಾರುಕಟ್ಟೆಗಳಲ್ಲಿ ನಡೆಯುತ್ತಿರುವ ಮೋಸಗಳಿಗೆ ಕಡಿವಾಣ ಹಾಕುವ ಮೂಲಕ ರೈತರ ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಲೆ ದೊರೆತರೆ ರೈತರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಆತ್ಮಹತ್ಯೆಗಳು ಕಡಿಮೆಯಾಗುತ್ತವೆ. ರೈತರಿಗೆ ಸ್ವಾಭಿಮನದ ಬದುಕು ಕಲ್ಪಿಸುವದು ರಾಜ್ಯ ಸರಕಾರದ ಹೊಣೆಯಾಗಿದೆ ಎಂದ ಅವರು, ಪ್ರತಿಭಟನೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಬಸವ ಭೀಮ ಸೇನೆ. ಗಡಿನಾಡು ಹಿತರಕ್ಷಣಾ ವೇದಿಕೆ. ಕರ್ನಾಟಕ ಹಿತರಕ್ಷಣಾ ವೇದಿಕೆ. ಭ್ರಷ್ಠಾಚಾರ ನಿರ್ಮೂಲನಾ ವೇದಿಕೆ. ಜಿಲ್ಲಾ ಕಟ್ಟಡ ಹಾಗೂ ಇತರೆ ಕಾರ್ಮಿಕ ಸಂಘಟನೆ. ಭಾರತೀಯ ಮಹಿಳಾ ಒಕ್ಕೂಟ. ನಾಗರಿಕ ಹಿತರಕ್ಷಣಾ ವೇದಿಕೆ. ದಲಿತ ಸಂಘರ್ಷ ಸಮಿತಿ. ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಸೇರಿದಂತೆ ಅನೇಕ ಸಂಘಟನೆಗಳು ಹಾಗೂ ಹೋರಾಟಗಾರರು ಬೆಂಬಲ ವ್ಯಕ್ತ ಪಡಿಸಿದ್ದಾರೆ ಎಂದು ಅವರು ತಿಳಿಸಿದರು.
ಶಿವಾಜಿ ಕಾಗಣೀಕರ, ಆರ್.ಎಸ್.ದರ್ಗೆ, ಜಯಪ್ಪ ಬಸರಕೋಡ, ಸೋಮಲಿಂಗ ಕಮತಗಿ, ಈರಪ್ಪ ಲಕಮೋಜಿ, ಚಾಳು ತುಪ್ಪುರವಾಡಿ ಮುಂತಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button