*ತಮಿಳುನಾಡಿಗೆ ಕಾವೇರಿ ನೀರು; ತೀವ್ರಗೊಂಡ ಪ್ರತಿಭಟನೆ; ಹಲವು ರೈತರು ಪೊಲೀಸ್ ವಶಕ್ಕೆ*

ಪ್ರಗತಿವಾಹಿನಿ ಸುದ್ದಿ; ಮಂಡ್ಯ: ಕೆ.ಆರ್.ಎಸ್ ಡ್ಯಾಂ ನಿಂದ ತಮಿಳುನಾಡಿಗೆ ನೀರು ಹರಿಸಿರುವ ರಾಜ್ಯದ ಕ್ರಮ ಖಂಡಿಸಿ ರೈತರು ಪ್ರತಿಭಟನೆ ತೀವ್ರಗೊಳಿಸಿದ್ದು, ಹಲವು ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಡ್ಯ ತಾಲೂಕಿನ ಇಂಡವಾಳು ಬಳಿ ರೈತರು ಬೃಹತ್ ಪ್ರತಿಭಟನೆ ನಡೆಸಿದ್ದು, ಜಾನುವಾರುಗಳು, ಎತ್ತಿನಗಾಡಿ ಸಮೇತ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ರಾಜ್ಯದಲ್ಲಿ ಮಳೆ ಕೊರೆತೆಯಿದ್ದು, ನಮಗೆ ನೀರಿನ ಸಮಸ್ಯೆ ಎದುರಾಗಿದೆ. ಕೆ.ಆರ್. ಜಲಾಶಯದಲ್ಲಿಯೂ ನೀರಿನ ಮಟ್ಟ ಕುಸಿದಿದೆ. ಇಂತಹ ಸಂದರ್ಭದಲ್ಲಿ ಇಲ್ಲಿನ ರೈತರ ಬೆಳೆ, ಕುಡಿಯುವ ನೀರಿನ ಬಗ್ಗೆ ಚಿಂತಿಸದೇ ತಮಿಳುನಾಡಿಗೆ ಸರ್ಕಾರ ಕಾವೇರಿ ನೀರು ಹರಿಸಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ರೈತರು ಎತ್ತಿನಗಾಡಿ ಸಮೇತ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ತಡೆಯಲು ಮುಂದಾಗಿದ್ದು, ಪೊಲೀಸರು ತಡೆದಿದ್ದಾರೆ. ಪರಿಸ್ಥಿತಿ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಪ್ರತಿಭಟನಾ ನಿರತ ಹಲವು ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ