Belagavi NewsBelgaum NewsKannada NewsKarnataka NewsLatest

*ಬೆಳಗಾವಿಯಲ್ಲಿ ಮತ್ತೆ ಭುಗಿಲೆದ್ದ ಮಾಸ್ತಿಹೊಳಿ ರೈತರ ಆಕ್ರೋಶ*

ನೀರಾವರಿ ಕಚೇರಿಗೆ ಜಾನುವಾರುಗಳ ಸಮೇತರಾಗಿ ಬಂದ ರೈತರು

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯಲ್ಲಿ ಹಿಡಕಲ್ ಡ್ಯಾಮ್ ಹಿನ್ನೀರಿಗೆ ಜಮೀನು ಕಳೆದುಕೊಂಡ ಮಾಸ್ತಿಹೊಳಿ ರೈತರಿಗೆ ನೀರಾವರಿ ಇಲಾಖೆಯಿಂದ ಪರಿಹಾರ ಕೊಡುವಂತೆ ಆಗ್ರಹಿಸಿ ಇಲ್ಲಿನ ಮಾಸ್ತಿಹೊಳಿ ಗ್ರಾಮದ ನೂರಾರು ರೈತರು ಸೋಮವಾರ ಚನ್ನಮ್ಮ‌ ವೃತ್ತದಲ್ಲಿ ಜಾನುವಾರುಗಳ ಸಮೇತರಾಗಿ ಬಂದು ನೀರಾವರಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಆಹೋರಾತ್ರಿ ಧರಣಿಗೆ ಮುಂದಾಗಿದ್ದಾರೆ.

Home add -Advt

ಇದಕ್ಕೂ ಮೊದಲು ಚನ್ನಮ್ಮನ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಮಾಸ್ತಿಹೊಳಿ ರೈತರು 2 ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು. ನಂತರ ಅಲ್ಲಿಂದ ನೀರಾವರಿ ಇಲಾಖೆ ಕಚೇರಿವರಗೂ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು ಸಿವಿಲ್ ಮುಖ್ಯ ಇಂಜಿನಿಯರ್ ಬಿ. ಆರ್. ರಾಠೋಡ್ ಕಚೇರಿಗೆ ಮುತ್ತಿಗೆ ಹಾಕಿ ಹರಿಹಾಯ್ದರು. ಅಲ್ಲದೇ ಭ್ರಷ್ಟ ಅಧಿಕಾರಿಗಳಾದ ಚೀಪ್ ಇಂಜಿನಿಯರ್ ಬಿ.ಆರ್. ರಾಠೋಡ, ಸಿ.ಎ.ಓ ಔದ್ರಾಮ, ನೀರಾವರಿ ನಿಗಮ ಎಂಡಿ ರಾಜೇಶ್ ಅಮೀನಬಾವಿ, ರವೀಂದ್ರ ತಾಳೂರ, ಎಸ್.ಎಂ.ಮಡಿವಾಲೆ, ಎಸ್ . ಆರ್ ಕಾಮತ ಅವರನ್ನು ಶೀಘ್ರವೇ ಅಮಾನತು ಮಾಡುವಂತೆ ರೈತರು ಪಟ್ಟು ಹಿಡಿದರು.

ನೀರಾವರಿ ಇಲಾಖೆ ಕಚೇರಿಗೆ ಜಾನುವಾರು ತಂದ ರೈತರು: ಜಾನವಾರುಗಳನ್ನು ಹಿಡಿದುಕೊಂಡು ಕಾಲ್ನಡಿಗೆಯ ಮುಖಾಂತರ ಬಿಸಿಲು ಲೆಕ್ಕಿಸದೇ ನೀರಾವರಿ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿದ ರೈತರು ತಮ್ಮ ಜೊತೆ ತಮ್ಮ ಜಾನುವಾರುಗಳನ್ನು ಸಹ ತಂದು ಅಲ್ಲೇ ಆವರಣದಲ್ಲೇ ಕಟ್ಟಿ ಮೇವು ಹಾಕಿ ಸಾಲಾಗಿ ಸಾಲಾಗಿ ಕುಳಿತು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ರೈತರ ಪ್ರತಿಭಟನೆಯಿಂದ ನೀರಾವರಿ ಕಚೇರಿ ರಸ್ತೆ ಮುಂದೆ ಕೆಲ ಕಾಲ ಸಂಚಾರ ಹಲವು ಗಂಟೆಗಳ ಕಾಲ ಅಸ್ತವ್ಯಸ್ತಗೊಂಡಿತು. ಅಲ್ಲೇ ಇದ್ದ ಪೊಲೀಸರು ದಟ್ಟವಾಗಿದ್ದ ವಾಹನ ಸಂಚಾರ ತಿಳಿ ಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು.

ಕಚೇರಿಯ ಆವರಣದಲ್ಲೇ ಅಡುಗೆ ಮಾಡಿದ ರೈತರು: ಬೇಕೇ, ಬೇಕು, ನ್ಯಾಯ ಬೇಕು, ನೀರಾವರಿ ಇಲಾಖೆ ಐದು ಭ್ರಷ್ಟ ಅಧಿಕಾರಿಗಳ ವಿರುದ್ಧ ಧಿಕ್ಕಾರ’ ಎಂಬ ಘೋಷಣೆ ಕೂಗಿದರು. ಚನ್ನಮ್ಮ ವೃತ್ತದ ಸನೀಹವಿರುವ ನೀರಾವರಿ ಇಲಾಖೆ ಕಚೇರಿ ಮುತ್ತಿಗೆ ಹಾಕಿದ ರೈತರು ತಾವು ತಂದ ಆಹಾರ ಸಾಮಗ್ರಗಳನ್ನು ತೆರದು ಅಲ್ಲೇ ಅಡುಗೆ ತಯಾರಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು. ಕಚೇರಿ ಆವರಣದಲ್ಲೇ ಶಾಮಿಯಾನ ಹಾಕಿ ತರಕಾರಿ ಕತ್ತರಿಸಿ, ಒಲೆಯನ್ನಿಟ್ಟು ಅಡುಗೆ ಸಿದ್ಧಪಡಿಸಿದರು.

ಈ ವೇಳೆ ರೈತ ಮುಖಂಡ ಬಾಳೇಶ ಮಾವನೂರಿ ಮಾತನಾಡಿದ, ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಮಾಸ್ತಿಹೊಳಿ, ಗುಡನಟ್ಟಿ ಬೀರಹೊಳ್ಳಿ ಗ್ರಾಮದ ರೈತರು ಹಲವಾರು ಬಾರಿ ಹೋರಾಟ ಮಾಡಿದರೂ ನೀರಾವರಿ ಇಲಾಖೆ ಪರಿಹಾರ ಕೊಟ್ಟಿಲ್ಲ. 396 ಎಕರೆ ಜಮೀನಿಗೆ ಪರಿಹಾರ ನೀಡುವಂತೆ ಕಚೇರಿಯಿಂದ ಕಚೇರಿಗೆ ಅಲೆದಾಡಿದರೂ ಎರಡು ವರ್ಷಗಳ ಹಿಂದೆಯೇ ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶ ನೀಡಿದರೂ ಇಲ್ಲಿಯವರೆಗೂ ಪರಿಹಾರ ನೀಡಿಲ್ಲ ಎಂದು ಹಿಡಕಲ್ ಡ್ಯಾಮ್ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ವಿರುದ್ಧ ಹರಿಹಾಯ್ದರು.

1980ರಲ್ಲಿ ಹಿಡಕಲ್ ಅಣೆಕಟ್ಟು ಯೋಜನೆಗೆ ಭೂಮಿ ಕಳೆದುಕೊಂಡ ಹುಕ್ಕೇರಿ ತಾಲೂಕಿನ ಮಾಸ್ತಿಹೊಳಿ ಗ್ರಾಮದ ಕುಟುಂಬಗಳಿಗೆ ಪರಿಹಾರ ನೀಡುವಂತೆ 44 ವರ್ಷಗಳ ಬಳಿಕ ಸರಕಾರ ನಿರ್ಧರಿಸಿದ್ದು , ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹಲವು ಕುಟುಂಬಗಳು ಅನಿರ್ದಿಷ್ಟಾವಧಿ ಧರಣಿ ನಡೆಸಿದವು. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಭರವಸೆ ಮೇರೆಗೆ ಧರಣಿ ಹಿಂಪಡೆಯಲಾಗಿತ್ತು. ಆದರೆ ನೀರಾವರಿ ಇಲಾಖೆ ಅಧಿಕಾರಿಗಳು ಡಿಸಿ ಹಾಗೂ ಸಚಿವರ ಮಾತುಗಳಿಗೆ ಬೆಲೆ ಕೊಡದೆ ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಆರೋಪಿಸಿದರು.

ಸಚಿವರ ಹೆಸರು ಕೆಡೆಸಲು ಅಧಿಕಾರಿಗಳ ಹುನ್ನಾರ: ಹಿಡಕಲ್ ಡ್ಯಾಮ್ ಹಿನ್ನೀರಿಗೆ ಜಮೀನು ಕಳೆದುಕೊಂಡ ಮಾಸ್ತಹೊಳಿ ರೈತರಿಗೆ ನೀರಾವರಿ ಇಲಾಖೆಯಿಂದ ಪರಿಹಾರ ಕೊಡುವಂತೆ ಆಗ್ರಹಿಸಿ ಅನೇಕ ಭಾರಿ ಪ್ರತಿಭಟನೆ ನಡೆಸಿ ಡಿಸಿ ಹಾಗೂ ಸಚಿವರಿಗೆ ಮನವಿ ಸಲ್ಲಿಸಿದೇವೆ. ಆದರೆ ನೀರಾವರಿ ಇಲಾಖೆ ಅಧಿಕಾರಿಗಳು ಅಸಲಿ ಆದೇಶ ಪತ್ರವನ್ನು ನಕಲಿ ದಾಖಲಾತಿ ಸೃಷ್ಟಿಸಿ ಸಚಿವರ ಹೆಸರು ಕಡಿಸಲು ಮುಂದಾಗಿದ್ದಾರೆ. ನಮಗೆ ಕಾಂಗ್ರೆಸ್‌ ಸರ್ಕಾರ ಹಾಗೂ ಸಚಿವ ಸತೀಶ್‌ ಜಾರಕಿಹೊಳಿ ಅವರ ಮೇಲೆ ಯಾವುದೇ ರೀತಿ ಅನುಮಾನವಿಲ್ಲ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿರುವ ಕಾಂಗ್ರೆಸ್‌ ಸರ್ಕಾರ ನಮಗೆ ಸಾಕಷ್ಟು ಅನುಕೂಲ ಮಾಡಿದೆ. ನಮ್ಮದು ಎನೇ ಇದ್ದರೂ ಈ ಭ್ರಷ್ಟ ನೀರಾವರಿ ಅಧಿಕಾರಿಗಳ ವಿರುದ್ಧ ನಮ್ಮ ಆಕ್ರೋಶ ಎಂದು ಆರೋಪಿಸಿದರು.

ನಮಗೆ ಯಾವುದೇ ರೀತಿ ತೊಂದರೆಯಾದರೆ ಅಧಿಕಾರಿಗಳೇ ನೇರ ಹೊಣೆ: ಜನ ಜನಾವಾರುಗಳೊಂದಿಗೆ ನಮಗೆ ನ್ಯಾಯ ನೀಡಬೇಕೆಂದು ಇಂದು ಆಹೋರಾತ್ರಿ ಧರಣಿಗೆ ಮುಂದಾಗಿದ್ದೇವೆ. ಒಂದು ವೇಳೆ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ ರೈತರಿಗೆ ಹಾಗೂ ಮಹಿಳೆಯರಿಗೆ ಯಾವುದೇ ರೀತಿ ತೊಂದರೆಯಾದರೆ ಅದಕ್ಕೆ ಈ ನೀರಾವರಿ ಇಲಾಖೆಯಲ್ಲಿರುವ ಅಧಿಕಾರಿಗಳೇ ನೇರ ಹೊಣೆ ಎಂದು ಆರೋಪಿಸಿದ ಅವರು, ನಮಗೆ ನ್ಯಾಯ ಸಿಗುವವರೆಗೂ ಈ ಜಾಗದಿಂದ ಕದಲುವುದಿಲ್ಲ. ಯಾರೇ ಬಂದು ಆಶ್ವಾಸನೆ ನೀಡಿದರೂ ನಾವು ಜಗ್ಗುವುದಿಲ್ಲ. ಇಟ್ಟಾರೆಯಾಗಿ ಹಿಡಕಲ್ ಡ್ಯಾಮ್ ಹಿನ್ನೀರಿಗೆ ಜಮೀನು ಕಳೆದುಕೊಂಡ ರೈತರಿಗೆ ನೀರಾವರಿ ಇಲಾಖೆಯಿಂದ ಪರಿಹಾರ ನೀಡಬೇಕು. ನಿರಂತರ ರೈತರನ್ನು ಸತಾಯಿಸಿದ ಭ್ರಷ್ಟ ನೀರಾವರಿ ಐದು ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಮಾಸ್ತಿಹೊಳಿ, ಗುಡನಟ್ಟಿ ಬೀರಹೊಳ್ಳಿ ಗ್ರಾಮದ ರೈತರು ನೂರಾರು ರೈತರು ಹಾಗೂ ಮಹಿಳೆಯರು ಭಾಗವಹಿಸಿದ್ದರು.

ರೈತರ ಪ್ರತಿಭಟನಾ ಸ್ಥಳಕ್ಕೆ ಡಿಸಿ ಭೇಟಿ: ಬೆಳಗಾವಿಯಲ್ಲಿ ಹಿಡಕಲ್ ಡ್ಯಾಮ್ ಹಿನ್ನೀರಿಗೆ ಜಮೀನು ಕಳೆದುಕೊಂಡ ಮಾಸ್ತಿಹೊಳಿ ರೈತರಿಗೆ ನೀರಾವರಿ ಇಲಾಖೆಯಿಂದ ಪರಿಹಾರ ಕೊಡುವಂತೆ ಆಗ್ರಹಿಸಿ ನೀರಾವರಿ ಇಲಾಖೆ ಕಚೇರಿ ಎದುರು ನಡೆಸುತ್ತಿರುವ ರೈತರ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ನಿತಿಶ್‌ ಪಾಟೀಲ ಭೇಟಿ ನೀಡಿ ನೀರಾವರಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಸಂಜೆ 4 ಘಂಟೆಗೆ ನೀರಾವರಿ ಇಲಾಖೆ ಕಚೇರಿಗೆ ಆಗಮಿಸಿದ ಡಿಸಿ, ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ರೈತ ಮುಖಂಡರ ಸಮಕ್ಷೇಮ ಪರಿಹಾರ ನೀಡುವ ಕುರಿತು ಚರ್ಚೆ ನಡೆಸಿದರು. ನಂತರ ಶೀಘ್ರವೇ ರೈತರಿಗಾದ ಸಮಸ್ಯೆಗಳನ್ನು ಇತ್ಯರ್ಥಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಆದರೆ ರೈತರ ಮಾತ್ರ ನಮಗೆ ನ್ಯಾಯ ಸಿಗುವವರೆಗೂ ಯಾವುದೇ ಕಾರಣಕ್ಕೂ ಈ ಸ್ಥಳದಿಂದ ನಾವು ಜಾಗ ಕಾಲಿ ಮಾಡುವದಿಲ್ಲ ಎಂದು ಪಟ್ಟು ಹಿಡಿದಿದ್ದು, ರೈತರ ಪ್ರತಿಭಟನೆ ಹಾಗೇ ಮುಂದುವರೆದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button