
ಪ್ರಗತಿವಾಹಿನಿ ಸುದ್ದಿ: ಮಗಳನ್ನು ರಕ್ಷಿಸಬೇಕಾದ ತಂದೆಯೇ ಹೆತ್ತ ಮಗಳನ್ನು ವೇಶ್ಯಾವಾಟಿಕೆಗೆ ತಳ್ಳಿರುವ ಅಮಾನವೀಯ ಘಟನೆ ನಡೆದಿದೆ.
ಅಪ್ರಾಪ್ತ ಮಗಳನ್ನು ಹಣದಾಸೆಗಾಗಿ ತಂದೆಯೇ ವೇಶ್ಯಾವಾಟಿಕೆ ದಂಧೆಗೆ ನೂಕಿದ್ದು, ತಪ್ಪಿಸಿಕೊಂಡು ಬಂದ ಮಗಳು ಪೊಲೀಸರಿಗೆ ದೂರು ನೀಡಿದ್ದಾಳೆ. ಚಿಕ್ಕಮಗಳೂರು ಜಿಲ್ಲೆಯ ಬೀರೂರಿನಲ್ಲಿ ಈ ಘಟನೆ ನಡೆದಿದೆ.
ತಾಯಿಯನ್ನು ಕಳೆದುಕೊಂಡು ಸಂಬಂಧಿಕರ ಮನೆಯಲ್ಲಿದ್ದ ಅಪ್ರಾಪ್ತೆ ಪಿಯುಸಿ ಮುಗಿಸಿ ತಂದೆಯ ಮನೆಗೆ ಹೋಗಿದ್ದಳು. ಈ ವೇಳೆ ಕಳೆದ ತಿಂಗಳು ಡಿಸೆಂಬರ್ ನಲ್ಲಿ ತಂದೆಯ ಜೊತೆ ಎರಡು ದಿನ ಅಜ್ಜಿ ಮನೆಗೆಂದು ಹೋಗಿ ಬಂದಿದ್ದಳು. ಈ ವೇಳೆ ಮತ್ತೊಮ್ಮೆ ಅಜ್ಜಿ ಬರುವಂತೆ ಹೇಳಿದ್ದಾಳೆ ಎಂದು ಅಜ್ಜಿ ಮನೆಗೆ ಹೋದ ಯುವತಿಗೆ ಸಂಕಷ್ಟ ಶುರುವಾಗಿತ್ತು. ಅಜ್ಜಿ ಮನೆಗೆ ಭರತ್ ಶೆಟ್ಟಿ ಎಂಬಾತ ಬಂದಿದ್ದ. ಆತ ಅಪ್ರಾಪ್ತೆಯ ತಂದೆಯೊಂದಿಗೆ ಸಲುಗೆ ಬೆಳೆಸಿದ್ದ. ಅಜ್ಜಿಯ ಜೊತೆಗೂ ತುಂಬಾ ಪರಿಚಿತ ಆತ್ಮೀಯನಂತೆ ವರ್ತಿಸಿದ್ದ. ಯಾವುದೋ ಸಹಾಯ ಮಾಡುವುದಾಗಿ ಹೇಳಿ ತಂದೆಯೊಂದಿಗೆ ಮಾತನಾಡಿದ್ದ. ಈ ವೇಳೆ ಮಂಗಳೂರಿಗೆ ತನ್ನ ಮನೆಗೆ ತಂದೆ-ಮಗಳು ಬರುವಂತೆ ಹೇಳಿದ್ದ. ಇದಕ್ಕೆ ಅಪ್ರಾಪ್ತೆಯ ತಂದೆ ಒಪ್ಪಿದ್ದ.
ಭರತ್ ನೊಂದಿಗೆ ತಂದೆ-ಮಗಳು ಇಬ್ಬರೂ ಮಂಗಳೂರಿಗೆ ಪ್ರಯಾಣಿಸಿದ್ದರು. ಯುವತಿ ಮಾರ್ಗ ಮಧ್ಯೆ ಮುಟ್ಟಾಗಿದ್ದಳು. ಈ ಬಗ್ಗೆ ಯುವತಿ ತನ್ನ ತಂದೆಗೆ ಹೇಳಿದ್ದಾಳೆ. ಭರತ್ ಮನೆಗೆ ಹೋದ ಮಾರನೆಯ ದಿನ ಯುವತಿಯ ಬಳಿ ಬಂದ ಭರತ್ ಶೆಟ್ಟಿ 4-5 ಜನ ಬರ್ತಾರೆ ಅವರೊಂದಿಗೆ ದೈಹಿಕ ಸಂಪರ್ಕ ಬೆಳೆಸಬೇಕು ಎಂದು ಹೇಳಿ ಹೋಗಿದ್ದಾನೆ. 4-5 ಜನರು ನುಗ್ಗಿ ಯುವತಿಯ ಮೇಲೆ ಅಟ್ಟಹಾಸ ಮೆರೆದಿದ್ದಾರೆ. ಮರುದಿನವೂ ಮತ್ತೆ ಬಂದಿದ್ದಾರೆ. ಯುವತಿ ತನ್ನನ್ನು ಬಿಟ್ಟು ಬಿಡುವಂತೆ ಕೇಳಿಕೊಂಡರೂ ಕಾಮುಕರು, ತಾವು ಭರತ್ ಶೆಟ್ಟಿಗೆ ಹಣ ಕೊಟ್ಟಿದ್ದೇವೆ ಎಂದು ಮತ್ತೆ ಅತ್ಯಾಚಾರವೆಸಗಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಇದೇ ರೀತಿ ಅಪ್ರಾಪ್ತೆ ಮೇಲೆ ನಿರಂತರವಾಗಿ ಅತ್ಯಾಚಾರ ನಡೆದಿದ್ದು, ಹೇಗೋ ತಪ್ಪಿಸಿಕೊಂಡು ಬಂದ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಂತ್ರಸ್ತೆಯ ತಂದೆ, ಅಜ್ಜಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮಾಂಸ ದಂಧೆಯ ಕಿಂಗ್ ಪಿನ್ ಭರತ್ ಶೆಟ್ಟಿ ಸೇರಿದಂತೆ 12 ಜನರನ್ನು ಬಂಧಿಸಿದ್ದಾರೆ. ಸಂತ್ರಸ್ತೆಯ ತಂದೆಗೆ ಭರತ್ ಶೆಟ್ಟಿ ದಿನಕ್ಕೆ 5 ಸಾವಿರ ರೂಪಾಯಿ ಹಣ ಕೊಡುವುದಾಗಿ ಹೇಳಿದ್ದನಂತೆ.
ಭರತ್ ಶೆಟ್ಟಿ ವಿರುದ್ಧ ಮಂಗಳೂರು, ಉಡುಪಿ ಜಿಲ್ಲೆಗಳಲ್ಲಿ ವೇಶ್ಯಾವಾಟಿಕೆ ಸಂಬಂಧ 8ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.




