CrimeKannada NewsKarnataka NewsLatest

*ಹೆಂಡತಿಯ ಮೇಲಿನ ಕೋಪಕ್ಕೆ ಮಗನನ್ನೇ ಕೊಂದ ತಂದೆ*: *ಶವದೊಂದಿಗೆ ಕುಳಿತು ಹೈಡ್ರಾಮಾ, ಗ್ರಾಮಸ್ಥರಿಂದ ಹಲ್ಲೆ*

ಪ್ರಗತಿವಾಹಿನಿ ಸುದ್ದಿ: ಹೆತ್ತ ಮಗನನ್ನೇ ತಂದೆ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ಬೆಚ್ಚಿಬೀಳಿಸಿದೆ. ಹೆಂಡತಿಯೊಂದಿಗೆ ನಡೆದ ಜಗಳಕ್ಕೆ ಮುಗ್ಧ ಮಗ ಬಲಿಯಾಗಿದ್ದಾನೆ. ಮಗನನ್ನು ಕೊಂದ ಬಳಿಕವೂ ತಂದೆಯ ವರ್ತನೆ ನಿಲ್ಲಲಿಲ್ಲ. ಮಗನ ಮೃತದೇಹದೊಂದಿಗೆ ಮನೆಯೊಳಗೆ ಕುಳಿತು ಹೈಡ್ರಾಮಾ ಸೃಷ್ಟಿಸಿದ್ದು, ಕೊನೆಗೆ ಪೊಲೀಸರು ಆತನನ್ನು ಹೊರಗೆ ಕರೆತಂದಾಗ ಗ್ರಾಮಸ್ಥರ ಆಕ್ರೋಶ ಸ್ಫೋಟಗೊಂಡಿದೆ.

ತುಮಕೂರಿನ ಕುಣಿಗಲ್ ತಾಲೂಕಿನ ಚೌಡನಾಯಕಪಾಳ್ಯದಲ್ಲಿ ಘಟನೆ ನಡೆದಿದೆ. ನಂಜಪ್ಪ ಎಂಬಾತ ತನ್ನ ಮಗ ಸುನೀಲ್‌ನನ್ನು ಹಾರೆಯಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಪತ್ನಿ ರಂಜಿತಾ ಜೊತೆಗಿನ ಜಗಳವೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.

ನಂಜಪ್ಪ ಮತ್ತು ರಂಜಿತಾ ನಡುವೆ ಆಗಾಗ ಜಗಳ ನಡೆದಿತ್ತು. ಈ ವೇಳೆ ಪತ್ನಿಯನ್ನು ಮನೆಯಿಂದ ಹೊರಹಾಕಿದ ನಂಜಪ್ಪ, ಮನೆಯ ಬಾಗಿಲಿಗೆ ಚಿಲಕ ಹಾಕಿಕೊಂಡಿದ್ದ. ಬೆಳಿಗ್ಗೆ ಬಾಗಿಲು ತೆರೆಯುವಂತೆ ಮಗ ಸುನೀಲ್ ಕೇಳಿದ್ದೇ ತಂದೆಯ ಆಕ್ರೋಶಕ್ಕೆ ಕಾರಣವಾಗಿದೆ. ಪತ್ನಿಯ ಮೇಲಿನ ಕೋಪವನ್ನು ಮಗನ ಮೇಲೆ ತೀರಿಸಿಕೊಂಡು ಆತನನ್ನು ಹತ್ಯೆ ಮಾಡಿದ್ದಾನೆ.

ಮಗನ ಶವದೊಂದಿಗೆ ಮನೆಯೊಳಗೆ ಹೈಡ್ರಾಮಾ

ಹತ್ಯೆಯ ಬಳಿಕ ಮಗನ ಮೃತದೇಹದೊಂದಿಗೆ ಮನೆಯೊಳಗೆ ಕುಳಿತ ನಂಜಪ್ಪ, ಹೊರಗಿನಿಂದ ಬಂದವರಿಗೆ ಬೆದರಿಕೆ ಹಾಕಿದ್ದಾನೆ. ಹೆಗಲ ಮೇಲೆ ಹಾರೆ ಹಿಡಿದು ಯಾರು ಬರುತ್ತಾರೋ ನೋಡುತ್ತೇನೆ ಎಂದು ಆವಾಜ್ ಹಾಕಿದ್ದಾನೆ. ಪೊಲೀಸರು ಸ್ಥಳಕ್ಕೆ ಬಂದರೂ ಬಾಗಿಲು ತೆರೆಯಲು ನಿರಾಕರಿಸಿದ್ದಾನೆ.

ಆರೋಪಿಯನ್ನು ಮನವೊಲಿಸಲು ಪೊಲೀಸರು ಸಾಕಷ್ಟು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಹಾರೆಯ ಸಹಾಯದಿಂದ ಹೊರಗಡೆಯಿಂದ ಬಾಗಿಲು ತೆರೆದು ಒಳನುಗ್ಗಿದ ಪೊಲೀಸರು ನಂಜಪ್ಪನನ್ನು ವಶಕ್ಕೆ ಪಡೆದು ಹೊರಗೆ ಕರೆತಂದಿದ್ದಾರೆ.

ಈ ವೇಳೆ ಸ್ಥಳದಲ್ಲಿ ಸೇರಿದ್ದ ಗ್ರಾಮಸ್ಥರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಪೊಲೀಸರು ಆರೋಪಿಯನ್ನು ಹೊಯ್ಸಳ ವಾಹನದೊಳಗೆ ಕೂರಿಸಿದರೂ ಜನರು ವಾಹನದೊಳಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಬಳಿಕ ನೆಲಕ್ಕೆ ತಳ್ಳಿ ತುಳಿದಾಡಿದ್ದಾರೆ. ಪೊಲೀಸರು ಹರಸಾಹಸಪಟ್ಟು ಪರಿಸ್ಥಿತಿ ನಿಯಂತ್ರಿಸಿದ್ದಾರೆ.

ಇತ್ತ ಮಗನನ್ನು ಕಳೆದುಕೊಂಡ ತಾಯಿ ರಂಜಿತಾ ಕಣ್ಣೀರು ಹಾಕಿದ್ದಾರೆ. ಈ ಹಿಂದೆ ಪತಿ ಹಲ್ಲೆ ನಡೆಸಿದ್ದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂಜಪ್ಪ ಬಂಧನವಾಗಿ ಬಿಡುಗಡೆಯಾದ ಬಳಿಕ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿತ್ತು. ನಂತರ ಇಬ್ಬರೂ ರಾಜಿ ಮಾಡಿಕೊಂಡು ಮತ್ತೆ ಒಟ್ಟಿಗೆ ಸಂಸಾರ ನಡೆಸುತ್ತಿದ್ದರು.

ಸೋಮವಾರ ನ್ಯಾಯಾಲಯದಲ್ಲಿ ರಾಜಿ ಮಾಡಿಕೊಳ್ಳುವ ಕುರಿತು ಚಿಂತನೆ ನಡೆದಿತ್ತು. ಆದರೆ ಅದಕ್ಕೂ ಮುನ್ನ ನಡೆದ ಜಗಳದಲ್ಲಿ ಮಗನ ಜೀವವೇ ಹೋಗಿದೆ.

ಸದ್ಯ ಕುಣಿಗಲ್ ಪೊಲೀಸರು ನಂಜಪ್ಪನನ್ನು ಬಂಧಿಸಿದ್ದಾರೆ. ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಗ್ರಾಮಸ್ಥರು ಹಾಗೂ ಮಗನನ್ನು ಕಳೆದುಕೊಂಡ ತಾಯಿ ಒತ್ತಾಯಿಸಿದ್ದಾರೆ.

Related Articles

Back to top button