
ಪ್ರಗತಿವಾಹಿನಿ ಸುದ್ದಿ; ಹಾಸನ: ಮಗಳ ತಿಂಗಳ ತಿಥಿಗೆಂದು ಬಂದ ತಂದೆ ಅಳಿಯನ ಮನೆ ಮುಂದೆಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಮಾಲೆಗೆರೆ ಗ್ರಾಮದಲ್ಲಿ ನಡೆದಿದೆ.
ನಾಗರಾಜ್ (55) ಆತ್ಮಹತ್ಯೆಗೆ ಶರಣಾದ ತಂದೆ. ನಾಗರಾಜ್ ಮಗಳು ಹೇಮಶ್ರೀ ಅ.30ರಂದು ಸಾವನ್ನಪ್ಪಿದ್ದರು. ಮಗಳ ತಿಥಿ ಕಾರ್ಯ ಮಾಡಲೆಂದು ತಂದೆ ನಾಗರಾಜ್ ಅಳಿಯನ ಮನೆಗೆ ಬಂದಿದ್ದರು. ಆದರೆ ಅಳಿಯ ಹಾಗೂ ಮನೆಯವರು ಮನೆಗೆ ಬೀಗ ಹಾಕಿ ನಾಪತ್ತೆಯಾಗಿದ್ದಾರೆ. ಎಷ್ಟುಹೊತ್ತಾದರೂ ಅಳಿಯ ಹಾಗೂ ಮನೆಯವರು ಮನೆಯತ್ತ ಸುಳಿಯದ್ದನ್ನು ಗಮನಿಸಿ ಬೇಸರಗೊಂಡ ನಾಗರಾಜ್ ಅಳಿಯನ ಮನೆ ಬಾಗಿಲ ಬಳಿಯೇ ಎಡೆಯಿಟ್ಟು ಅಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವರ್ಷದ ಹಿಂದೆ ನಾಗರಾಜ್ ಮಗಳು ಹೇಮಶ್ರೀ ಪ್ರವೀಣ್ ಎಂಬಾತನನ್ನು ವಿವಾಹವಾಗಿದ್ದಳು. ಹೇಮಶ್ರೀಗೆ ಪತಿ ಹಾಗೂ ಆತನ ಕುಟುಂಬದವರು ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಗರ್ಭಪಾತಕ್ಕೂ ಯತ್ನಿಸಿ, ಹಿಂಸಿಸಿದ್ದರು ಎನ್ನಲಾಗಿದೆ. ಮನೆಯವರ ಹಿಂಸೆಯಿಂದಾಗಿಯೇ ಮಗಳು ಹೇಮಶ್ರೀ ಸಾವನ್ನಪ್ಪಿದ್ದಾಳೆ ಎಂದು ನಾಗರಾಜ್ ಆರೋಪಿಸಿದ್ದರು.
ಇದೀಗ ಮಗಳ ತಿಥಿಕಾರ್ಯಕ್ಕೆ ಎಂದು ಬಂದು ಸೆಲ್ಫಿ ವಿಡಿಯೋ ಮಾಡಿ ಅಳಿಯನ ಮನೆ ಮುಂದೆಯೇ ಮಾವ ನಾಗರಾಜ್ ನೇಣಿಗೆ ಕೊರಳೊಡ್ಡಿದ್ದಾರೆ.ಬೇಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಜಿ ಸಚಿವ ಎಸ್.ಆರ್.ಮೋರೆ ಇನ್ನಿಲ್ಲ