
ಪ್ರಗತಿವಾಹಿನಿ ಸುದ್ದಿ: ಒಂದು ಪ್ರಕರಣಕ್ಕೆ ಸಂಭಂದಿಸಿದಂತೆ ಪದೇ ಪದೆ ಮನೆಗೆ ಪೊಲೀಸರು ಆಗಮಿಸಿ ನೋಟಿಸು ನೀಡುವುದು ಮತ್ತು ಬೆದರಿಕೆ ಹಾಕುವುದು ಮಾಡುತಿದ್ದರು. ಪತಿಯ ಬಂಧನವಾಗುವ ಭೀತಿಯಿಂದ ಮಹಿಳೆ ತನ್ನ ಒಂದೂವರೆ ವರ್ಷದ ಮಗುವನ್ನು ಹತ್ಯೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಉಡುಪಿ ಜಿಲ್ಲೆಯ ಬ್ರಹ್ಮಾವರದ ಹೆರಂಜೆ ಆರೂರಿನಲ್ಲಿ ಘಟನೆ ಸಂಭವಿಸಿದೆ. ಸುಶ್ಮಿತಾ (23) ಮತ್ತು ಮಗು ಶ್ರೇಷ್ಠಾ ಮೃತಪಟ್ಟವರು. ಮನೆಯ ಚಾವಡಿಯಲ್ಲಿ ಮೊದಲು ಮಗುವಿಗೆ ನೇಣು ಬಿಗಿದು ತಾನೂ ನೇಣು ಬಿಗಿದುಕೊಂಡಿದ್ದಾರೆ.
ಕಳೆದ 16 ವರ್ಷಗಳ ಹಿಂದೆ ಪಕ್ಕದ ಮನೆಯವರೊಂದಿಗೆ ಗಲಾಟೆ ನಡೆದಿದ್ದು ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ದಿನಗಳ ಹಿಂದೆ ಪತಿ ಸುಭಾಷ್ ನಾಯ್ಕ ಹಾಗೂ ಅವರ ಸಹೋದರ ಸಹಿತ 6 ಮಂದಿಯ ಬಂಧನಕ್ಕೆ ನ್ಯಾಯಾಲಯ ಆದೇಶಿಸಿತ್ತು.
2009ರಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿ ಪತಿ ಸುಭಾಷ್ ಹಾಗೂ ಮನೆಯವರು ತಪ್ಪಿತಸ್ಥರು ಎನ್ನುವುದಾಗಿ ಇತ್ತೀಚೆಗೆ ಹೈಕೋರ್ಟ್‌ನಲ್ಲಿ ದೃಢೀಕರಣಗೊಂಡಿದೆ. ಇದೇ ವಿಚಾರದಲ್ಲಿ ಬೇಸತ್ತು ಸುಶ್ಮಿತಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಮಾಹಿತಿ ಲಭ್ಯವಾಗಿದೆ.
ಘಟನೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ವಿಷಾದ ವ್ಯಕ್ತವಾಗಿದೆ. ಸ್ಥಳಕ್ಕೆ ಎಸ್‌ಪಿ ಹರಿರಾಂ ಶಂಕರ್, ಡಿವೈಎಸ್‌ಪಿ ಪ್ರಭು ಡಿ.ಟಿ. ವೃತ್ತ ನಿರೀಕ್ಷಕ ಗೋಪಿಕೃಷ್ಣ ಠಾಣಾಧಿಕಾರಿ ಅಶೋಕ್ ಭೇಟಿ ನೀಡಿದ್ದಾರೆ.