*ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಹಿಂಪಡೆಯದಿದ್ದರೆ ಉಗ್ರ ಪ್ರತಿಭಟನೆ: ಶಾಸಕಿ ಶಶಿಕಲಾ ಜೊಲ್ಲೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಎಲ್ಲ ವಸ್ತುಗಳ ಬೆಲೆ ಏರಿಕೆ ಮಾಡಿ ಜನಸಾಮಾನ್ಯರ ರಕ್ತ ಹಿಂಡಿ ಕುಡಿಯುವ ಕಾರ್ಯ ಮಾಡುತ್ತಿದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಬೆಲೆ ಏರಿಕೆಯನ್ನು ಹಿಂಪಡೆಯಬೇಕೆಂದು ಶಾಸಕಿ ಶಶಿಕಲಾ ಜೊಲ್ಲೆ ಅವರು ಇಂದು ತಹಸಿಲ್ದಾರ ಮುಫ್ಫರ್ ಬಳಿಗಾರ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಹಮ್ಮಿಕೊಂಡ ಪ್ರತಿಭಟನಾ ರ್ಯಾಲಿಯಲ್ಲಿ ಅವರು ಮಾತನಾಡಿದರು. ‘ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದು ಸುಮಾರು ಒಂದು ವರ್ಷ ಕಳೆದರೂ ಕ್ಷೇತ್ರ ಅಭಿವೃದ್ಧಿ ಪಡಿಸಲು ಇನ್ನೂವರೆಗೆ ಯಾವೊಬ್ಬ ಶಾಸಕರಿಗೆ ಅನುದಾನ ಬಂದಿಲ್ಲ. ಇದರಿಂದ ಕೆಲಸಗಳಾಗುತ್ತಿಲ್ಲ, ಅಭಿವೃದ್ಧಿಯಾಗುತ್ತಿಲ್ಲ, ಹೊರತಾಗಿ ರಾಜ್ಯದ ಜನತೆ ಮೇಲೆ ರಾಜ್ಯ ಸರ್ಕಾರವು ಹೆಚ್ಚುವರಿ ಶುಲ್ಕದ ಭಾರ ಹಾಕುತ್ತಿದೆ. ಈಚೆಗೆ ಹೊರಬಿದ್ದ ಲೋಕಸಭಾ ಚುನಾವಣಾ ಫಲಿತಾಂಶದ ನಂತರ ಪೆಟ್ರೋಲ್ ಮತ್ತು ಡೀಜೆಲ್ ದರ ಲೀಟರ್ ಗೆ ಅನುಕ್ರಮವಾಗಿ ರೂ.3 ಮತ್ತು ರೂ.3.50 ಹೆಚ್ಚಿಸಿ ಗಾಯದ ಮೇಲೆ ಬರೆ ಎಳೆಯಲಾಗಿದೆ’ ಎಂದು ಅವರು ಆರೋಪಿಸಿದರು.
‘ಕಾಂಗ್ರೆಸ್ ಸರ್ಕಾರವು ಕರ್ನಾಟಕ ಮಹರ್ಷಿ ವಾಲ್ಮಿಕಿ ಪರಿಶಿಷ್ಠ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ರೂ.187 ಕೋಟಿಗಳ ಭ್ರಷ್ಟಾಚಾರ ಮಾಡಿ, ಪರಿಶಿಷ್ಠ ಪಂಗಡದ ಮೇಲೆ ಅನ್ಯಾಯವೆಸಗಿದೆ. ನಿಗಮದ ಯೋಜನೆಗಳನ್ನು ಪಂಗಡದ ಅರ್ಹ ಫಲಾನುಭವಿಗಳಿಗೆ ತಲುಪಿಸಲು ವಿಫಲವಾಗಿದೆ. ರೈತರಿಗಾಗಿ ಕಿಸಾನ್ ಸಮ್ಮಾನ್ ಯೋಜನೆ, ರೈತ ವಿದ್ಯಾ ನಿಧಿ ಯೋಜನೆಗಳನ್ನು ಪುನರಾರಂಭಿಸಬೇಕು’ ಎಂದು ಒತ್ತಾಯಿಸಿದರು.
‘ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ಕಾಂಗ್ರೆಸ್ ಸರ್ಕಾರ ಸ್ಟ್ಯಾಂಪ್‍ಡ್ಯೂಟಿ, ವಿದ್ಯುತ್ ಬಿಲ್ ಹೆಚ್ಚಿಸಲಾಗಿದೆ. ರೈತರ ಪಂಪ್‍ಸೆಟ್‍ಗಳಿಗೆ ತಗಲುವ ವೆಚ್ಚವನ್ನು ಹೆಚ್ಚಿಸಿದ್ದಾರೆ. ವಿದ್ಯಾರ್ಥಿಗಳ ಸಿಇಟಿ ಪ್ರವೇಶ ಶುಲ್ಕವು ಹೆಚ್ಚಿಸಲಾಗಿದೆ. ಇಂತಹ ಹೊರೆಗಳು ಕಾಂಗ್ರೆಸ್ ಸರ್ಕಾರವು ಜನಸಾಮಾನ್ಯರ ಮೇಲೆ ಹೇರಿದೆ’ ಎಂದರು.
ಆರಂಭದಲ್ಲಿ ಸಾರ್ವಜಿಕರೊಂದಿಗೆ ಶಾಸಕಿ ಶಶಿಕಲಾ ಜೊಲ್ಲೆ ನಗರದ ಸಂಭಾಜಿ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಕೆಲಕಾಲ ರಸ್ತೆತಡೆ ಮಾಡಿ ಪ್ರತಿಭಟನೆ ನಡೆಸಿದರು. ನಂತರ ಪ್ರತಿಭಟನಾ ರ್ಯಾಲಿಯನ್ನು ನಗರದ ವಿವಿಧ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಾಲೂಕಾ ತಹಶೀಲ್ದಾರ ಕಛೇರಿಗೆ ತೆರಳಿತು. ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಬೆಲೆ ಏರಿಕೆಗಳನ್ನು ಹಿಂದಕ್ಕೆ ಪಡೆಯಬೇಕೆಂದು ತಹಸಿಲ್ದಾರ ಮುಜಫ್ಫರ್ ಬಳಿಗಾರ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸಿದ್ಧು ನರಾಟೆ, ಶ್ರೀಕಾಂತ ಬನ್ನೆ ಮಾತನಾಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಶ್ರೀ ಹಾಲಸಿದ್ಧನಾತ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲಗೊಂಡಾ ಪಾಟೀಲ, ಉಪಾಧ್ಯಕ್ಷ ಪವನ ಪಾಟೀಲ, ಸಂಚಾಲಕ ರಾಜೇಂದ್ರ ಗುಂದೇಶಾ, ಜಯವಂತ ಭಾಟಲೆ, ಬಾಳಾಸಾಹೇಬ ಕದಮ, ಸುನೀಲ ಪಾಟೀಲ, ಮೊದಲಾದವರು ಸೇರಿದಂತೆ ನಗರಸಭೆ ಸದಸ್ಯರು, ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ