ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ನಗರದ ಲಕ್ಷ್ಮೀ ಟೆಕಡಿಯಲ್ಲಿರುವ ಹುಕ್ಕೇರಿ ಹಿರೇಮಠದ ಐದನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಾಧಕರನ್ನು ಸತ್ಕರಿಸಲಾಯಿತು.
ಉದ್ಘಾಟಕರಾಗಿ ಆಗಮಿಸಿದ್ದ ಕುಡುಚಿ ಶಾಸಕ, ಕರ್ನಾಟಕ ರಾಜ್ಯ ತಾಂಡಾ ನಿಗಮದ ಅಧ್ಯಕ್ಷ ಪಿ.ರಾಜೀವ ಮಾತನಾಡಿ, ಮಠ ಮಾನ್ಯಗಳು ಇವತ್ತು ಜನಸಾಮಾನ್ಯರಲ್ಲಿ ತಮ್ಮದೆಯಾದ ಸೇವೆಯಿಂದ ವಿಶೇಷ ಕಾರ್ಯಗಳನ್ನು ಮಾಡುತ್ತಿವೆ. ಅದರಲ್ಲಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಎಲ್ಲಾ ಸಮುದಾಯದವರನ್ನು ಒಗ್ಗೂಡಿಸಿ ಕರುನಾಡಿನ ಬೆಳಕನ್ನು ದೇಶ ವಿದೇಶದಲ್ಲಿ ಚೆಲ್ಲುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದರು.
ಶ್ರೀಮಠದ ಎಲ್ಲ ಕಾರ್ಯಗಳಲ್ಲಿ ಸಾಧಕರು, ಕವಿಗಳು, ಕಲಾವಿದರನ್ನು ಗೌರವಿಸಿ ಸನ್ಮಾನಿಸುವುದರ ಮೂಲಕ ಇತರರಿಗೂ ಕೂಡ ಮಾದರಿಯಾಗಿದ್ದಾರೆ ಎಂದರು.
ಬೆಳಗಾವಿಯಲ್ಲಿ ಹುಕ್ಕೇರಿ ಹಿರೇಮಠದ ಶಾಖೆ ಆರಂಭವಾದಾಗಿನಿಂದ ಉತ್ತರ ಪ್ರದೇಶದ ಸಿಎಂ ಯೋಗಿ ಆಧಿತ್ಯನಾಥ ಅವರನ್ನೆ ಮೊದಲು ಮಾಡಿಕೊಂಡು ನೂರಾರು ಸ್ವಾಮೀಜಿ, ಹಲವಾರು ರಾಜಕಾರಣಿ, ಡಾ.ಚಂದ್ರಶೇಖರ ಕಂಬಾರ ಅವರಂಥ ಸಾಹಿತಿಗಳು ಬಂದು ಹೋಗಿರುವುದು ಮೆಚ್ಚುವಂತದ್ದು ಎಂದರು.
ಆಸ್ಟ್ರೇಲಿಯಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಂಗಾಧರ ಬೇವಿನ ಕೊಪ್ಪ ಹಾಗೂ ಪರಿಸರ ಪ್ರೇಮಿ ಶಿವಾಜಿ ಕಾಗಣಿಕರ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಕರ್ನಾಟಕ ಹೆಮ್ಮೆ ಪಡುವಂತ ರಾಜ್ಯ. ಈ ರಾಜ್ಯದಲ್ಲಿ ಇದ್ದುಕೊಂಡ ಎಲ್ಲರೂ ಭಾಷೆ, ನೆಲ,ಜಲದ ಬಗ್ಗೆ ಗೌರವ ಇಟ್ಟುಕೊಂಡು ಬಾಳುವುದು ಅವಶ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿರುವ ಕರ್ನಾಟಕ ರಾಜ್ಯ ವೀರಶೈವ, ಜಂಗಮ, ಪುರೋಹಿತ, ಅರ್ಚಕ ಸಂಘದ ರಾಜ್ಯಾಧ್ಯಕ್ಷ ವಿದ್ವಾನ ಚಂದ್ರಶೇಖರ ಶಾಸ್ತ್ರೀಗಳು ಮಾತನಾಡಿ, ಎಲ್ಲಾ ಊರುಗಳಲ್ಲಿ ಪುರೋಹಿತರು ಇರುತ್ತಾರೆ. ಇವರೆ ಪುರದ ಹಿತವನ್ನು ಬಯಸುವರು. ಇವರ ಹಿಂದೆ ನಿಜಕ್ಕೂ ಕೂಡ ಹುಕ್ಕೇರಿ ಹಿರೇಮಠ ಅಭಯ ಹಸ್ತವನ್ನು ಇಟ್ಟು ಪ್ರೋತ್ಸಾಹಿಸುತ್ತಿರುವುದು ಅಭಿಮಾನದ ಸಂಗತಿ ಎಂದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ನಗರಾಧ್ಯಕ್ಷ ರಾಜೇಂದ್ರ ಹರಕುಣಿ ಮಾತನಾಡಿ, ಶ್ರೀಮಠದ ಕಾರ್ಯವನ್ನು ಕೊಂಡಾಡಿದರು.
ಅಲ್ಪಸಂಖ್ಯಾತ ನಿಗಮದ ಅಧ್ಯಕ್ಷ ಮುಕ್ತಾರ ಪಠಾಣ ಸನ್ಮಾನ ಸ್ವೀಕರಿಸಿ ಮಾತನಾಡಿ, ಶ್ರೀಮಠದಲ್ಲೇ ಬೆಳೆದಿರುವ ನಾನು ಇಂದು ರಾಜ್ಯ ಗುರುತಿಸುವ ಮಟ್ಟಕ್ಕೆ ಬಂದಿರುವುದು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರ ಆಶೀರ್ವಾದದಿಂದ ಎಂದರು.
ಸಾನಿದ್ಯ ವಹಿಸಿ ಮಾತನಾಡಿದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬೆಳಗಾವಿ ಜನ ವಿಶೇಷವಾಗಿ ಶ್ರೀ ಮಠದ ಜತೆಗೆ ಸ್ಪಂದಿಸುತ್ತಿರುವುದು ಅಭಿಮಾನದ ಸಂಗತಿ. ಹೀಗೆ ಭಕ್ತರ ಸಹಕಾರ ಇದ್ದರೆ ಹೆಚ್ಚಿನ ಕಾರ್ಯ ಮಾಡಬಹುದು ಎಂದರು.
ಸ್ಮಾಟ್೯ ಸಿಟಿ ಎಂ.ಡಿ.ಶಶಿಧರ ಕುರೇರ ಮಾತನಾಡಿ, ಶ್ರೀಮಠದ ಬಗ್ಗೆ ನಮಗೆ ಅಪಾರವಾದ ಒಲವು ಇದೆ. ಕಾರಣ ಶ್ರೀಗಳು ಸಾಮಾಜಿಕ ಕಾರ್ಯದ ಬಗ್ಗೆ ಹೆಚ್ಚು ಒಲವು ಹೊಂದಿದ್ದಾರೆ ಎಂದರು.
ನಿರೂಪಣೆಯನ್ನು ವೀರುಪಾಕ್ಷಯ್ಯ ನೀರಲಗಿಮಠ ನೆರವೆರಿಸಿಕೊಟ್ಟರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ