Kannada NewsKarnataka NewsNationalPolitics

*ಸಿಎಂ ಹೆಸರಿಗೆ ಮಸಿ ಬಳಿದು ಸರ್ಕಾರ ಅಸ್ಥಿರಗೊಳಿಸುವ ಇಡಿ ಪ್ರಯತ್ನದ ವಿರುದ್ಧ ಹೋರಾಟ: ಡಿಸಿಎಂ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮದಲ್ಲಿ ಇಡಿ ಅಧಿಕಾರಿಗಳು ಬಲವಂತವಾಗಿ ಮುಖ್ಯಮಂತ್ರಿಗಳು ಹಾಗೂ ಸಚಿವರ ಹೆಸರು ಹೇಳುವಂತೆ ನಿಗಮದ ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ಆ ಮೂಲಕ ಮುಖ್ಯಮಂತ್ರಿಗಳ ಹೆಸರಿಗೆ ಮಸಿ ಬಳಿದು, ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನವನ್ನು ಖಂಡಿಸಿ ಹೋರಾಟ ಮಾಡುತ್ತಿದ್ದೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಇಡಿ ಅಧಿಕಾರಿಗಳ ವರ್ತನೆ ವಿರೋಧಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸರ್ಕಾರದ ಸಚಿವರುಗಳು ಹಾಗೂ ಕಾಂಗ್ರೆಸ್ ಶಾಸಕರುಗಳು ಮಂಗಳವಾರ ಪ್ರತಿಭಟನೆ ನಡೆಸಿದರು. 

ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಧಿಕಾರಿಗಳು ಅಕ್ರಮ ಎಸಗಿದ್ದಾರೆ ಎಂದು ತಿಳಿದ ತಕ್ಷಣ ನಮ್ಮ ಎಸ್‌ ಐಟಿ ರಚಿಸಿ, ಹಲವರನ್ನು ಬಂಧಿಸಿ, ಶೇ.50ಕ್ಕೂ ಹೆಚ್ಚಿನ ಹಣವನ್ನು ತೆಲಂಗಾಣದಿಂದ ಹಿಂಪಡೆಯಲಾಗಿದೆ. ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ನಮ್ಮ ಸಚಿವರು ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಿದ್ದಾರೆ. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ಇಡಿ ಮಧ್ಯಪ್ರವೇಶ ಮಾಡಿದೆ. ನಮ್ಮ ತನಿಖೆಯಲ್ಲಿ ಲೋಪವಿದ್ದಾಗ ಬರಬಹುದಿತ್ತು. ಆದರೆ ನಮ್ಮ ತನಿಖೆ ಮುಗಿಯುವ ಮುನ್ನವೇ ಮಧ್ಯಪ್ರವೇಶ ಮಾಡಿದ್ದಾರೆ” ಎಂದು ತಿಳಿಸಿದರು.

“ಇಡಿ ಅಧಿಕಾರಿಗಳು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ವ್ಯವಸ್ಥಾಪಕ ನಿರ್ದೇಶಕರಾದ ಕಲ್ಲೇಶ್ ಅವರಿಗೆ ಬೆದರಿಕೆ ಹಾಕಿ, ಈ ಪ್ರಕರಣದಲ್ಲಿ ಮಂತ್ರಿ, ಮುಖ್ಯಮಂತ್ರಿ ಹೆಸರು ಹೇಳಿಸುವ ಒತ್ತಡ ಹಾಕುತ್ತಿದ್ದಾರೆ. ಇವರ ಹೆಸರು ಹೇಳದಿದ್ದರೆ ಏಳು ವರ್ಷ ಜೈಲು ಶಿಕ್ಷೆ ಅನುಭಿಸಬೇಕಾಗುತ್ತದೆ ಎಂದು ಇಡಿ ಅಧಿಕಾರಿಗಳು ಬೆದರಿಕೆ ಹಾಕುತ್ತಿದ್ದಾರೆ. ಇದರಿಂದ ಮನನೊಂದ ಅಧಿಕಾರಿ, ಇಡಿ ಅಧಿಕಾರಿಗಳ ವಿರುದ್ಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ನಿನ್ನೆ ಇ.ಡಿ ಅಧಿಕಾರಿಗಳ ಮೇಲೆ ಎಫ್ಐಆರ್ ದಾಖಲಾಗಿದ್ದು, ಇಡಿ ಅಧಿಕಾರಿ ಮಿತ್ತಲ್ ಎಂಬುವವರು ಎ1, ಮುರಳಿ ಕಣ್ಣನ್ ಎಂಬುವವರು ಎ2 ಆಗಿದ್ದಾರೆ. ಇವರಿಬ್ಬರು ಸೇರಿ ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಹಾಗೂ ಮಂತ್ರಿ ಹೆಸರೇಳಬೇಕು. ಅವರ ಮಾರ್ಗದರ್ಶನದಲ್ಲಿ ಈ ಅಕ್ರಮ ನಡೆದಿದೆ ಎಂದು ಹೇಳಬೇಕು ಎಂದು ಒತ್ತಾಯಿಸಿದ್ದಾರೆ ಎಂದು ದೂರಿನಲ್ಲಿದೆ” ಎಂದು ವಿವರಿಸಿದರು.

“ನಿನ್ನೆ ರಾತ್ರಿ ನಮಗೆ ಈ ದೂರಿನ ವಿಚಾರ ತಿಳಿದಿದೆ. ಇ.ಡಿ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕೇಂದ್ರ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ನಾವು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಮಾಡುತ್ತಿದ್ದೇವೆ. ಈ ಅಕ್ರಮದ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ನಡೆದು ನಮ್ಮ ಮುಖ್ಯಮಂತ್ರಿಗಳು ಉತ್ತರ ನೀಡಲು ಬಿಜೆಪಿಯ ನಾಯಕರು ಅವಕಾಶ ನೀಡಲಿಲ್ಲ. ಅವರ ಕಾಲದಲ್ಲಿನ ದೊಡ್ಡ ಹಗರಣಗಳನ್ನು ನಾವು ಬಿಚ್ಚಿಡುತ್ತೇವೆ ಎಂಬ ಕಾರಣಕ್ಕೆ ಗದ್ದಲ ಸೃಷ್ಟಿಸಿದರು. ಬಿಜೆಪಿ ಕಾಲದಲ್ಲಿ ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಗಮದಲ್ಲಿನ ಅಕ್ರಮದಲ್ಲಿ ಭಾಗಿಯಾಗಿದ್ದ ಬಿಜೆಪಿಯ ವಿಧಾನ ಪರಿಷತ್ ಮಾಜಿ ಸದಸ್ಯರನ್ನು ಬಂಧಿಸಲಾಗಿದೆ. ಇನ್ನು ಸಿಎಜಿ ವರದಿಯಲ್ಲಿ ಅಶ್ವತ್ಥ್ ನಾರಾಯಣ ಅವರ ಇಲಾಖೆಯಲ್ಲಿ 500 ಕೋಟಿ ಅವ್ಯವಹಾರ ನಡೆದಿರುವುದು ಕಂಡುಬಂದಿದೆ. ಕೋಟಾ ಶ್ರೀನಿವಾಸ ಪೂಜಾರಿ ಅವರ ಇಲಾಖೆಯ ನಿಗಮಗಳಲ್ಲೂ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ಕಾಲದಲ್ಲಿ ನಡೆದಿರುವ ಅಕ್ರಮದ ಬಗ್ಗೆ ಪ್ರಸ್ತಾಪ ಮಾಡುವಾಗ ಬಿಜೆಪಿಗರು ಅವಕಾಶ ನೀಡಲಿಲ್ಲ” ಎಂದರು.

“ಅವರ ಅಕ್ರಮಗಳ ಬಗ್ಗೆ ಮಾತನಾಡದಂತೆ ನಮ್ಮ ಬಾಯನ್ನು ಮುಚ್ಚಿಸಲು, ನಮಗೆ ಹೆದರಿಸಿ, ಮುಖ್ಯಮಂತ್ರಿಗಳ ಹೆಸರಿಗೆ ಮಸಿ ಬಳಿಯಬೇಕು ಎಂಬ ಉದ್ದೇಶದಿಂದ ರಾಜ್ಯದ ಅಧಿಕಾರಿಗಳಿಂದ ಬಲವಂತವಾಗಿ ಹೆಸರು ಹೇಳಿಸುವ ಪ್ರಯತ್ನ ನಡೆಯುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಗಳನ್ನು ಗುರಿಯಾಗಿಸಿ ನೇರವಾಗಿ ದಾಳಿ ಮಾಡುವ ಸಂಚು ನಡೆಯುತ್ತಿದೆ. ಈ ಹಿಂದೆ ಬೇರೆ ರಾಜ್ಯಗಳಲ್ಲಿ ಇಂತಹ ಉದಾಹರಣೆಗಳನ್ನು ನಾವು ನೋಡಿದ್ದೇವೆ. ಹೀಗಾಗಿ ಪಕ್ಷದ ಶಾಸಕರು, ಸರ್ಕಾರದ ಮಂತ್ರಿಗಳು ಇಡಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನೆ ನಡೆಸುತ್ತಿದ್ದೇವೆ” ಎಂದು ಹೇಳಿದರು. 

ಈ ವೇಳೆ ಇಡಿ ಅಧಿಕಾರಿಗಳ ಬಂಧನಕ್ಕೆ ಆಗ್ರಹಿಸುತ್ತೀರಾ ಎಂದು ಮಾಧ್ಯಮಗಳು ಕೇಳಿದಾಗ, “ಈ ಪ್ರಕರಣದಲ್ಲಿ ಎಫ್ಐಆರ್ ದಾಖಲಾಗಿದೆ. ಕಾನೂನು ಚೌಕಟ್ಟಿನಲ್ಲಿ ಏನು ಮಾಡಬೇಕೋ ಅಧಿಕಾರಿಗಳು ಅದನ್ನು ಮಾಡುತ್ತಾರೆ. ನಾವು ಅಧಿಕಾರಿಗಳ ಕಾರ್ಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಬಿಜೆಪಿಯವರು ಕಾನೂನನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ನಾವು ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುವುದಿಲ್ಲ. ಮುಕ್ತ ಹಾಗೂ ಸ್ವಾತಂತ್ರ್ಯ ತನಿಖೆಗೆ ಅಧಿಕಾರಿಗಳಿಗೆ ಅಕಾಶ ನೀಡಲಾಗಿದ್ದು, ಅವರು ಮಾಡಲಿದ್ದಾರೆ” ಎಂದು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button