Belagavi NewsBelgaum NewsKannada NewsKarnataka NewsNational

*ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿ ಟೆಂಡರ್ ಪಡೆದ ಗುತ್ತಿಗೆದಾರ ಪೊಲೀಸ್ ವಶಕ್ಕೆ *

ಪ್ರಗತಿವಾಹಿನಿ ಸುದ್ದಿ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಚಿಕ್ಕೋಡಿ ವಿಭಾಗದಲ್ಲಿ ಪರಿಶಿಷ್ಟ ಜಾತಿಗೆ ಮೀಸಲಿದ್ದ ಕಾಮಗಾರಿಯ ಟೆಂಡರನ್ನು ನಕಲಿ‌ ಜಾತಿ ಪ್ರಮಾಣಪತ್ರ ಸಲ್ಲಿಸಿ ಗುತ್ತಿಗೆ ಪಡೆದ ಗುತ್ತಿಗೆದಾರನ ವಿರುದ್ಧ ದೂರು ದಾಖಲಿಸಲಾಗಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಚಿಕ್ಕೋಡಿ ವ್ಯಾಪ್ತಿಯ ರಾಯಬಾಗ ತಾಲೂಕಿನ ಅಲಖನೂರ ಮತ್ತು ಅಳಗವಾಡಿ ಗ್ರಾಮದಲ್ಲಿ ಜಲಜೀವನ ಮಿಷನ್ ಯೋಜನೆ ಅಡಿಯಲ್ಲಿ ಮನೆಗಳಿಗೆ ನೀರಿನ ನಳ ಜೋಡಿಸುವ ಸಲುವಾಗಿ ಈ-ಪ್ರೊಕ್ಯೂರ್ ಮೆಂಟ್ ವೆಬ್‌ ಸೈಟ್ ನಲ್ಲಿ ಟೆಂಡರ್ ಕರೆಯಲಾಗಿತ್ತು.  ಟೆಂಡರ್ ಕಾಮಗಾರಿಗಳ ಮೊತ್ತ ಅಂದಾಜು 29 ಲಕ್ಷ 55 ಸಾವಿರ ಹಾಗೂ 17 ಲಕ್ಷ 90 ಸಾವಿರ ರೂಪಾಯಿ ಎಸ್.ಸಿ ವರ್ಗಕ್ಕೆ ಮಿಸಲಿರುವ ಎರಡು ಟೆಂಡರಗಳನ್ನು ಪ್ರಕಟಿಸಲಾಗಿತ್ತು.

ಈ-ಪ್ರೋಕ್ಯ್ರೂಮೆಂಟ್ ವೆಬ್‌ ಸೈಟ್ ಮುಖಾಂತರ ಟೆಂಡರನ್ನು ಬಾಳಕೃಷ್ಣ ಬಸವರಾಜ ಚೊಳಚಗುಡ್ಡ, ಬಿ. ಕೆ. ಬೆಂಗೇರಿ, ಮರಾಠಾ ಕಾಲೋನಿ ಸಾ॥ ಧಾರವಾಡ, ಇವರು ಅರ್ಜಿ ಸಲ್ಲಿಸಿದ್ದು, ನಂತರ ಬಾಳಕೃಷ್ಣ ಚೊಳಚಗುಡ್ಡ ಇವರಿಗೆ ದಿನಾಂಕ: 02-03-2024 ರಂದು ಕಾಮಗಾರಿಗಳು ಕಾರ್ಯಾದೇಶವಾಗಿರುತ್ತವೆ. 

ಸದರಿ ಆರೋಪಿಯು ಎಲ್ಲ ಅಗತ್ಯ ದಾಖಲಾತಿಗಳ ಜೊತೆಗೆ ಪರಿಶಿಷ್ಟ ಜಾತಿಗೆ ಸೇರಿದ ಜಾತಿ ಸರ್ಟಿಫಿಕೇಟ್‌ನ್ನು ಸಹ ಅಪ್‌ಲೋಡ್ ಮಾಡಿರುತ್ತಾರೆ. ಈ ಕುರಿತು 02-08-2024  ರಂದು ಖಾಸಗಿ ಕನ್ನಡ ಸುದ್ದಿ ವಾಹಿನಿಯಲ್ಲಿ ಬಾಲಕೃಷ್ಣ ಚೊಳಚಗುಡ್ಡ ಇವರು ನಕಲಿ ಜಾತಿ ಪ್ರಮಾಣ ಪತ್ರ ಬಳಸಿ ಪರಿಶಿಷ್ಟ ಜಾತಿಗೆ ಮೀಸಲಿರಿಸಿದ ಎರಡು ಕಾಮಗಾರಿಗಳನ್ನು ಪಡೆದುಕೊಂಡಿರುತ್ತಾರೆ ಎಂದು ಸುದ್ದಿ ಪ್ರಸಾರವಾಗಿರುತ್ತದೆ.

ಈ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್‌ ಶಿಂಧೆ ಅವರು,  ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು, 

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಚಿಕ್ಕೋಡಿಯ ಕಾರ್ಯಕಾರಿ ಅಭಿಯಂತರರು, ರಾಯಬಾಗ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ, ರಾಯಬಾಗ ತಹಶೀಲ್ದಾರ ಇವರನ್ನೊಳಗೊಂಡ ತಂಡ ರಚಿಸಿ, ತನಿಖೆ ಕೈಗೊಂಡಿರುತ್ತಾರೆ.

ನಂತರ ಎರಡು ಕಾಮಗಾರಿಗಳು ಮತ್ತು ಟೆಂಡರ್ ಪಡೆದುಕೊಂಡ ಗುತ್ತಿಗೆದಾರ ಬಾಳಕೃಷ್ಣ ಬಸವರಾಜ ಚೊಳಚಗುಡ್ಡ ಬಗ್ಗೆ ಪರಿಶೀಲಿಸಿದ್ದು, ಬಾಳಕೃಷ್ಣ ಬಸವರಾಜ ಚೊಳಚಗುಡ್ಡ ಈತನು ಸಲ್ಲಿಸಿದ್ದ ಜಾತಿ ಪ್ರಮಾಣ ಪತ್ರ ಸಂಖ್ಯೆ ಪ್ರವರ್ಗ-2ಬಿ ಪ್ರವರ್ಗದ ಇತರರಿಗೆ ಸೇರಿದ್ದಾಗಿರುತ್ತದೆ.

ಸದರಿ ವ್ಯಕ್ತಿಯ ಕುರಿತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಚಿಕ್ಕೋಡಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುತ್ತಾರೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ತಿಳಿಸಿರುತ್ತಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button