Latest

ಕಂದಾಯ ಇಲಾಖೆಯಲ್ಲಿ ಕಡತ ವಿಲೇವಾರಿ ಸಪ್ತಾಹ: ಸಚಿವ ದೇಶಪಾಂಡೆ

 

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:

 ಕಂದಾಯ ಇಲಾಖೆಯಲ್ಲಿ ಇತ್ಯರ್ಥವಾಗದೆ ಬಾಕಿ ಉಳಿದಿರುವ ಕಡತಗಳನ್ನು ವಿಲೇವಾರಿ ಮಾಡುವ ಉದ್ದೇಶದಿಂದ ಜೂನ್-24 ರಿಂದ 30 ರವರೆಗೆ ಇಲಾಖೆಯಲ್ಲಿ ‘ಕಡತ ವಿಲೇವಾರಿ ಸಪ್ತಾಹ’ ವನ್ನು ಆಚರಿಸಲಾಗುವುದು.

ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಈ ವಿಷಯ ತಿಳಿಸಿದ್ದಾರೆ.

 ಈ ಅವಧಿಯಲ್ಲಿ ಸಾಮಾನ್ಯ ಕಡತಗಳ ಜೊತೆಗೆ ವಿಶೇಷವಾಗಿ ದೀರ್ಘ  ಕಾಲದಿಂದ ಬಾಕಿ ಉಳಿದ ಕಡತಗಳನ್ನು ವಿಲೇವಾರಿ ಮಾಡಲಾಗುವುದು.  ಕಡತಗಳ ಶೀಘ್ರ ವಿಲೇವಾರಿಯಲ್ಲಿ ಕಡ್ಡಾಯವಾಗಿ ಪಾರದರ್ಶಕತೆ ಹಾಗೂ ನಿಯಮಪಾಲನೆಯನ್ನು ಕಾಯ್ದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಕಡತಗಳನ್ನು ಯಾವ ರೀತಿ ವಿಲೇವಾರಿ ಮಾಡಬೇಕೆಂಬ ಬಗ್ಗೆ ಇಲಾಖಾ ಮುಖ್ಯಸ್ಥರು, ಪ್ರಾದೇಶಿಕ ಆಯುಕ್ತರು, ಮತ್ತು ಜಿಲ್ಲಾಧಿಕಾರಿಗಳು ತಮ್ಮ ಅಧೀನ ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನ ಮಾಡಲು ಸೂಚಿಸಲಾಗಿದೆ, ಎಂದು ವಿವರಿಸಿದ್ದಾರೆ.

ಈ ಹಿಂದೆಯೂ ಸಹ ಕಂದಾಯ ಇಲಾಖೆಯಲ್ಲಿ ಬಾಕಿ ಇದ್ದ ಕಡತಗಳನ್ನು ವಿಲೇವಾರಿ ಮಾಡುವ ಉದ್ದೇಶದಿಂದ ದಿನಾಂಕ 2018ರ ನವೆಂಬರ್ 12 ರಿಂದ 18ರವರೆಗೆ ಕಡತ ವಿಲೇವಾರಿ ಸಪ್ತಾಹ ವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಅವಧಿಯಲ್ಲಿ ಇಲಾಖೆಯ ಎಲ್ಲಾ ಅಧಿಕಾರಿ/ಸಿಬ್ಬಂದಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ ಪ್ರಯುಕ್ತ ಸಪ್ತಾಹದ ಅವಧಿಯಲ್ಲಿ ರಾಜ್ಯಾದ್ಯಂತ 2.50 ಲಕ್ಷಕ್ಕೂ ಅಧಿಕ ಕಡತಗಳನ್ನು ವಿಲೇಗೊಳಿಸಲಾಗಿದೆ.

ಈ ಕ್ರಮದಿಂದ ಪ್ರೇರೇಪಿತವಾದ ಇಲಾಖೆ ಮತ್ತೊಮ್ಮೆ  ಈ ಸಪ್ತಾಹವನ್ನು ಆಚರಿಸುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

ಸಪ್ತಾಹದ ಕೊನೆಯ ದಿನವಾದ ಜೂನ್, 30ರ ನಂತರ ಎಲ್ಲಾ ಅಧಿಕಾರಿಗಳು ಸಪ್ತಾಹದ ಆರಂಭದಲ್ಲಿ ಬಾಕಿ ಇದ್ದ ಕಡತಗಳು, ಸಪ್ತಾಹದ ಅವಧಿಯಲ್ಲಿ ವಿಲೇ ಮಾಡಲಾದ ಫೈಲ್ ಗಳ ಪಟ್ಟಿ ಮಾಡುವರು.

 ಅಂತ್ಯದಲ್ಲಿ ಬಾಕಿ ಇರುವ ಕಡತಗಳ ವಿವರವನ್ನು ಕ್ರೋಢೀಕರಿಸಿ  ಜುಲೈ 2ರ ಒಳಗಾಗಿ ಸರ್ಕಾರಕ್ಕೆ ಸಲ್ಲಿಸುವಂತೆ ಸಚಿವರು ಸಂಬಂಧಿಸಿದ ಎಲ್ಲಾ ಇಲಾಖಾ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button