*ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ: ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವಂತೆ ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.
ಬುಧವಾರ ಬೆಳಗಾವಿ ನಗರದ ಕನ್ನಡಸಾಹಿತ್ಯ ಭವನದಿಂದ ಆರಂಭವಾದ ಪ್ರತಿಭಟನೆನಾ ರ್ಯಾಲಿಯು ಡಿಸಿ ಕಚೇರಿವರೆಗೆ ತೆರಳಿ, ಮನವಿ ಸಲ್ಲಿಸಲಾಯಿತು. ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ 2.86 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿಬಿದ್ದಿವೆ. ಕಳೆದ ಐದಾರು ವರ್ಷಗಳಿಂದ ಯಾವುದೇ ನೇಮಕಾತಿಗಳು ಇಲ್ಲದೇ ಜಾತಕ ಪಕ್ಷಿಗಳಂತೆ ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಜನರ ವಯೋಮಿತಿ ಮೀರಿದೆ. ಹಾಗಾಗಿ ಇಂದು ನಡೆದ ಹೋರಾಟದ ಮೂಲಕ ರಾಜ್ಯದ ಯುವ ಸಮೂಹದ ಪರವಾಗಿ ಮೇಲೆ ತಿಳಿಸಿದ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಲು ಮತ್ತು ಈ ಕೆಳಗಿನ ಬೇಡಿಕೆಗಳನ್ನು ಯಾವುದೇ ವಿಳಂಬವಿಲ್ಲದೆ ಪರಿಹರಿಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿದರು.
ನೇಮಕಾತಿ ಪ್ರಕ್ರಿಯೆಯನ್ನು ಚುರುಕುಗೊಳಿಸಿ ಮತ್ತು 2025ರೊಳಗೆ ಸರ್ಕಾರಿ ಕ್ಷೇತ್ರಗಳಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಬೇಕು. ಕನಿಷ್ಠ ವಯೋಮಿತಿಯನ್ನು 5 ವರ್ಷಗಳವರೆಗೆ ಸಡಿಲಿಕೆ ಮಾಡಬೇಕು. ರಾಜ್ಯ ಸರ್ಕಾರದಿಂದ ತಡೆಹಿಡಿದ ಎಲ್ಲಾ ನೇಮಕಾತಿ ಪ್ರಕ್ರಿಯೆಗಳನ್ನು ಈ ಕೂಡಲೇ ಪುನರ್ ಆರಂಭಿಸಿ. ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿಗೊಳಿಸಬೇಕು. KPSC ಯಲ್ಲಿ ನಡೆಯುವ ಭ್ರಷ್ಟಾಚಾರ ಹಾಗೂ ಅಕ್ರಮಗಳನ್ನು ತಡೆಗಟ್ಟಬೇಕು ಆಗ್ರಹಿಸಿದರು.