
ಪ್ರಗತಿವಾಹಿನಿ ಸುದ್ದಿ -ನವದೆಹಲಿ:
ಕಾಂಗ್ರೆಸ್ ಅಧ್ಯಕ್ಷಸ್ಥಾನದಿಂದ ಕೆಳಗಿಳಿದಿರುವುದನ್ನು ಇನ್ನಷ್ಟು ಖಚಿತಪಡಿಸಿರುವ ರಾಹುಲ್ ಗಾಂಧಿ, ವಿದಾಯದ ರೀತಿಯಲ್ಲಿ ಪತ್ರವನ್ನೂ ಬರೆದಿದ್ದಾರೆ.
ತಮ್ಮ ಟ್ವೀಟರ್ ಖಾತೆಯಲ್ಲಿ 4 ಪುಟಗಳ ಪತ್ರ ಪ್ರಕಟಿಸಿರುವ ಅವರು, ಹೇಳಬೇಕಾದದ್ದನ್ನೆಲ್ಲ ವಿವರವಾಗಿ ಹೇಳಿದ್ದಾರೆ. ಹಳೆಯದನ್ನು ಮೆಲುಕು ಹಾಕುವ ಜೊತೆಗೆ ಮುಂದಿನ ಯೋಜನೆ, ಯೋಚನೆಗಳನ್ನೂ ಹೊರಹಾಕಿದ್ದಾರೆ.
ಬಿಜೆಪಿ ಮೇಲೆ ಸಿಟ್ಟಿಲ್ಲ ಎನ್ನುತ್ತಲೇ ಆರ್ ಎಸ್ಎಸ್ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ. ಪಕ್ಷವನ್ನು ಹೊಸದಾಗಿ ಸಂಘಟಿಸುವ ಉತ್ಸಹವನ್ನೂ ವ್ಯಕ್ತಪಡಿಸಿದ್ದಾರೆ. ಲೋಕಸಭೆ ಚುನಾವಣೆಯ ಸೋಲು, ಪಕ್ಷದ ಮರುಸಂಘಟನೆ, ಬಿಜೆಪಿ-ಆರೆಸ್ಸೆಸ್ ಅಧಿಕಾರದಲ್ಲಿ ಎದುರಾಗಲಿರುವ ಭವಿಷ್ಯದ ಅಪಾಯ ಮುಂತಾದವುಗಳ ಕುರಿತು ಬರೆದು ಟ್ವಿಟ್ಟರ್‌ನಲ್ಲಿ ಪ್ರಕಟಿಸಿದ್ದಾರೆ.
ಟ್ವಿಟ್ಟರ್ ಖಾತೆಯಲ್ಲಿನ ‘ಕಾಂಗ್ರೆಸ್ ಅಧ್ಯಕ್ಷ’ ಎಂಬ ಹುದ್ದೆ ಸೂಚಕವನ್ನು ಅವರು ತೆಗೆದು ಹಾಕಿರುವ ಅವರು, ಅಧ್ಯಕ್ಷ ಸ್ಥಾನದಿಂದ ಇಳಿದಿರುವುದನ್ನು ಖಚಿತಪಡಿಸಿದ್ದಾರೆ. ಹೊಸ ಅಧ್ಯಕ್ಷರ ಆಯ್ಕೆಯನ್ನು ಪಕ್ಷ ಸಮರ್ಥವಾಗಿ ನಿಭಾಯಿಸಲಿದೆ ಎನ್ನುವ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.
ಪಕ್ಷದ ಅಧ್ಯಕ್ಷನಾಗಿ 2019ರ ಲೋಕಸಭೆ ಚುನಾವಣೆಯ ಸೋಲಿಗೆ ನಾನೇ ಹೊಣೆಗಾರನಾಗಿದ್ದೇನೆ. ಪಕ್ಷದ ಭವಿಷ್ಯದ ಬೆಳವಣಿಗೆಯ ದೃಷ್ಟಿಯಿಂದ ಈ ರಿತಿ ಹೊಣೆಗಾರಿಕೆ ಹೊರುವುದು ಮುಖ್ಯವಾದ ಕಾರಣದಿಂದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ. ಪಕ್ಷವನ್ನು ಮತ್ತೆ ಕಟ್ಟಲು ಕಠಿಣ ನಿರ್ಧಾರ ತೆಗೆದುಕೊಳ್ಳುವುದು ಅತಿ ಅಗತ್ಯ. ಈ ಚುನಾವಣೆಯ ವೈಫಲ್ಯಕ್ಕೆ ಬೇರೆಯವರಿಗೆ ಸೋಲಿನ ಹೊಣೆ ಹೊರಿಸಿ ಪಕ್ಷದ ನನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ನ್ಯಾಯೋಚಿತವಾಗುವುದಿಲ್ಲ ಎಂದು ಅವರು ಬರೆದಿದ್ದಾರೆ.
ಸೂಕ್ತ ನಾಯಕನ ಆಯ್ಕೆ:
ಪಕ್ಷಕ್ಕೆ ಸುದೀರ್ಘ ಇತಿಹಾಸ ಮತ್ತು ಪರಂಪರೆಯಿದೆ. ಅದನ್ನು ಗೌರವಿಸಬೇಕು. ಪಕ್ಷವನ್ನು ಧೈರ್ಯ, ಪ್ರೀತಿ ಮತ್ತು ದಕ್ಷತೆಯಿಂದ ಮುನ್ನಡೆಸಬಲ್ಲ ಸೂಕ್ತ ನಾಯಕನನ್ನು ಪಕ್ಷ ಆಯ್ಕೆ ಮಾಡಲಿದೆ ಎಂದಿದ್ದಾರೆ.
ನನ್ನ ಹೋರಾಟ ರಾಜಕೀಯ ಅಧಿಕಾರಕ್ಕಾಗಿ ನಡೆದ ಸಾಮಾನ್ಯ ಹೋರಾಟವಾಗಿರಲಿಲ್ಲ. ಬಿಜೆಪಿ ವಿರುದ್ಧ ನನ್ನಲ್ಲಿ ಯಾವ ದ್ವೇಷ ಅಥವಾ ಸಿಟ್ಟು ಇಲ್ಲ. ಆದರೆ ಅವರು ದ್ವೇಷ ಕಂಡಲ್ಲಿ ನಾನು ಪ್ರೀತಿ ಕಾಣುತ್ತೇನೆ. ಅವರು ಭಯಪಟ್ಟುಕೊಂಡದ್ದನ್ನು ನಾನು ಅಪ್ಪಿಕೊಳ್ಳುತ್ತೇನೆ ಎಂದಿದ್ದಾರೆ.
ನಾನು ವೈಯಕ್ತಿಕವಾಗಿ ಪ್ರಧಾನಿ, ಅರೆಸ್ಸೆಸ್ ಮತ್ತು ಅವರು ಹಿಡಿದಿಟ್ಟುಕೊಂಡಿರುವ ಸಂಸ್ಥೆಗಳ ಕುರಿತು ಹೋರಾಟ ನಡೆಸಿದ್ದೇನೆ. ನಾನು ಭಾರತವನ್ನು ಪ್ರೀತಿಸುತ್ತೇನೆ. ಅದಕ್ಕಾಗಿ ಹೋರಾಟ ಮಾಡಿದೆ. ಭಾರತವನ್ನು ನಿರ್ಮಿಸಿದ ಮಾದರಿಗಳನ್ನು ಸಮರ್ಥಿಸಿಕೊಳ್ಳಲು ಹೋರಾಡಿದೆ ಎಂದು ಬರೆದಿದ್ದಾರೆ.
ಆರೆಸ್ಸೆಸ್‌ನ ಉದ್ದೇಶ ಪೂರ್ಣಗೊಂಡಿದೆ:
ಈ ದೇಶದ ಸಂಸ್ಥೆಗಳನ್ನು ತನ್ನ ಹಿಡಿತಕ್ಕೆ ಪಡೆದುಕೊಳ್ಳುವ ಆರೆಸ್ಸೆಸ್‌ನ ಉದ್ದೇಶ ಈಗ ಪೂರ್ಣಗೊಂಡಿದೆ. ನಮ್ಮ ಪ್ರಜಾಪ್ರಭುತ್ವವು ಮೂಲಭೂತವಾಗಿ ದುರ್ಬಲವಾಗಿದೆ. ಈಗಿನಿಂದ ನಿಜವಾದ ಅಪಾಯ ಎದುರಾಗಲಿದೆ. ಭಾರತದ ಭವಿಷ್ಯದಲ್ಲಿ ಚುನಾವಣೆಗಳು ಮಾಯವಾಗಲಿದ್ದು, ಕೇವಲ ಆಚರಣೆಯಾಗಿ ಉಳಿಯಲಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಆರೆಸ್ಸೆಸ್ ಅಧಿಕಾರವನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವುದು ಭಾರತದಲ್ಲಿ ಊಹಿಸಲು ಅಸಾಧ್ಯವಾದ ಮಟ್ಟದ ಹಿಂಸಾಚಾರ ಮತ್ತು ನೋವಿಗೆ ಎಡೆಮಾಡಿಕೊಡಲಿದೆ. ರೈತರು, ನಿರುದ್ಯೋಗಿ ಯುವಜನರು, ಮಹಿಳೆಯರು, ಬುಡಕಟ್ಟುಗಳು, ದಲಿತರು ಮತ್ತು ಅಲ್ಪಸಂಖ್ಯಾತರು ಅತಿ ಹೆಚ್ಚು ಸಂಕಷ್ಟ ಅನುಭವಿಸಲಿದ್ದಾರೆ. ಇದರ ಪರಿಣಾಮವಾಗಿ ನಮ್ಮ ದೇಶದ ಆರ್ಥಿಕತೆ ಮತ್ತು ಪ್ರತಿಷ್ಠೆ ನಾಶವಾಗಲಿದೆ. ಪ್ರಧಾನಿ ಅವರ ಗೆಲುವು ಅವರ ವಿರುದ್ಧದ ಭ್ರಷ್ಟಾಚಾರದ ಆರೋಪದಿಂದ ಮುಕ್ತಗೊಳಿಸಿದಂತೆ ಅಲ್ಲ.
ಕಾಂಗ್ರೆಸ್ ಪಕ್ಷದ ಪುನರುಜ್ಜೀವನ:
ಭಾರತವು ನಮ್ಮ ಸಂಸ್ಥೆಗಳನ್ನು ಮತ್ತೆ ಮರಳಿ ಪಡೆದುಕೊಳ್ಳಬೇಕು. ಇದಕ್ಕೆ ಇರುವ ಮಾರ್ಗ ಕಾಂಗ್ರೆಸ್ ಪಕ್ಷದ ಪುನರುಜ್ಜೀವನ. ಈ ಮಹತ್ವದ ಗುರಿಯನ್ನು ತಲುಪಲು ಕಾಂಗ್ರೆಸ್ ಪಕ್ಷವನ್ನು ಭಾರಿ ಪ್ರಮಾಣದಲ್ಲಿ ತನ್ನನ್ನು ತಾನು ಪರಿವರ್ತಿಸಿಕೊಳ್ಳಬೇಕು. ಇಂದು ಬಿಜೆಪಿ ಭಾರತೀಯರ ಧ್ವನಿಯನ್ನು ವ್ಯವಸ್ಥಿತವಾಗಿ ಅಡಗಿಸುತ್ತಿದೆ. ಈ ಧ್ವನಿಗಳನ್ನು ಉಳಿಸುವುದು ಕಾಂಗ್ರೆಸ್‌ನ ಕರ್ತವ್ಯ. ಭಾರತವು ಹಿಂದೆಂದೂ ಮತ್ತು ಮುಂದೆಯೂ ಒಂದೇ ಧ್ವನಿಯಾಗಿ ಉಳಿಯಲಾರದು. ಇದು ಯಾವಾಗಲೂ ಬಹುಧ್ವನಿಗಳ ಮಿಶ್ರಣವಾಗಿರುತ್ತದೆ. ಇದೇ ಭಾರತ ಮಾತೆಯ ನೈಜ ಸತ್ವ ಎಂದು ರಾಹುಲ್ ಬರೆದಿದ್ದಾರೆ.