Kannada NewsKarnataka News
ಮಾರಕ ಖಾಯಿಲೆಗಳ ಚಿಕಿತ್ಸೆಗೆ ಆರ್ಥಿಕ ನೆರವು: ಚೆಕ್ ವಿತರಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್
https://youtu.be/md8TvOGJz6o
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ವಿವಿಧ ಮಾರಕ ಖಾಯಿಲೆಯಿಂದ ಬಳಲುತ್ತಿರುವ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ 15 ಜನರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಗುರುವಾರ ಚೆಕ್ ವಿತರಿಸಿದರು.
ಚಿಕಿತ್ಸೆಗಾಗಿ ಹಣವಿಲ್ಲದೆ ಪರದಾಡುತ್ತಿರುವ ಕ್ಷೇತ್ರದ ಜನರು ಶಾಸಕರನ್ನು ಸಂಪರ್ಕಿಸಿ ಆರ್ಥಿಕ ನೆರವಿಗೆ ಮನವಿ ಮಾಡಿದ್ದರು. ತಕ್ಷಣ ಸ್ಪಂದಿಸಿದ ಲಕ್ಷ್ಮಿ ಹೆಬ್ಬಾಳಕರ್, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಅವರಿಗೆಲ್ಲ ಚಿಕಿತ್ಸೆಗೆ ಧನ ಸಹಾಯ ಒದಗಿಸಿದ್ದಾರೆ. ಒಟ್ಟಾರೆ ಸುಮಾರು 8.50 ಲಕ್ಷ ರೂ. ನೆರವನ್ನು ವಿತರಿಸಲಾಯಿತು.
ಬೆಳಗಾವಿ ಗ್ರಾಮೀಣ ಕ್ಷೇತ್ರ ತೀರಾ ಹಿಂದುಳಿದ ಕ್ಷೇತ್ರವಾಗಿದ್ದು, ಇಲ್ಲಿ ಬಹುಪಾಲು ಜನರು ತುತ್ತು ಅನ್ನಕ್ಕಾಗಿ ಕೂಲಿಯನ್ನು ಅವಲಂಬಿಸಿದ್ದಾರೆ. ಹಲವರು ಸಣ್ಣ ಹಿಡುವಳಿದಾರರಿದ್ದಾರೆ. ರೋಗಗಳು ಬಂದಾಗ ಚಿಕಿತ್ಸೆ ಮಾಡಿಸಿಕೊಳ್ಳಲು ಪರದಾಡುತ್ತಾರೆ. ಅಂತವರಿಗೆ ಮುಖ್ಯಮಂತ್ರಿಗಳ ಪರಿಹಾರನಿಧಿ ಇಲ್ಲವೇ ಇನ್ನಿತರ ಮೂಲಗಳಿಂದ ನೆರವು ನೀಡಲಾಗುತ್ತಿದೆ ಎಂದು ಲಕ್ಷ್ಮಿ ಹೆಬ್ಬಾಳಕರ್ ಈ ಸಂದರ್ಭದಲ್ಲಿ ತಿಳಿಸಿದರು.
ಈವರೆಗೆ ಗ್ರಾಮೀಣ ಕ್ಷೇತ್ರದ ಸಾಕಷ್ಟು ಜನರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಆರ್ಥಿಕ ನೆರವು ಕೊಡಿಸಲಾಗಿದೆ. ಹಲವಾರು ತುರ್ತು ಸಂದರ್ಭದಲ್ಲಿ ಕೇವಲ ಒಂದೇ ದಿನದಲ್ಲಿ ಫೋನ್ ಮೂಲಕ ಮುಖ್ಯಮಂತ್ರಿಗಳ ಕಾರ್ಯಾಲಯ ಸಂಪರ್ಕಿಸಿ ಹಣ ಮಂಜೂರು ಮಾಡಿಸಿಕೊಟ್ಟಿದ್ದೇನೆ. ನನ್ನನ್ನು ಕ್ಷೇತ್ರದ ಜನರು ಮನೆ ಮಗಳಾಗಿ ನೋಡಿಕೊಳ್ಳುತ್ತಿರುವಾಗ ಅವರ ಕಷ್ಟದಲ್ಲಿ ಭಾಗಿಯಾಗುವುದು ನನ್ನ ಕರ್ತವ್ಯ ಎಂದು ಭಾವಿಸಿದ್ದೇನೆ ಎಂದು ಹೆಬ್ಬಾಳಕರ್ ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ