
ಪ್ರಗತಿವಾಹಿನಿ ಸುದ್ದಿ: ಬೆಂಕಿ ಅವಘಡದಲ್ಲಿ ಟೆಕ್ಕಿ ಯುವತಿಯೊಬ್ಬಳು ಮನೆಯೊಳಗೆ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರಿನ ಸುಬ್ರಹ್ಮಣ್ಯ ಲೇಔಟ್ ನಲ್ಲಿ ಈ ದುರಂತ ಸಂಭವಿಸಿದೆ. ಮಂಗಳೂರು ಮೂಲದ ಶರ್ಮಿಳಾ ಮೃತ ಯುವತಿ. ಬೆಂಗಳೂರಿನ ಆಕ್ಸೆಂಚರ್ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಳು. ಶರ್ಮಿಳಾ ಹಾಗೂ ಆಕೆಯ ಸ್ನೇಹಿತೆ ಇಬ್ಬರೂ ಸುಬ್ರಹ್ಮಣ್ಯ ಲೇಔಟ್ ನಲ್ಲಿ ಮನೆ ಬಾಡಿಗೆ ಪಡೆದು ವಾಸವಾಗಿದ್ದರು.
ಜನವರಿ 3ರಂದು ಶರ್ಮಿಳಾ ಸ್ನೇಹಿತೆ ಊರಿಗೆ ಹೋಗಿದ್ದಳು. ಶರ್ಮಿಳಾ ರೂಮಿನಲ್ಲಿಯೇ ಇದ್ದಳು. ಈ ವೇಳೆ ಆಕೆಯ ಸ್ನೇಹಿತೆಯ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡು ಹೊಗೆಬರಲಾರಂಭಿಸಿದೆ. ಇದನ್ನು ಗಮನಿಸಿದ ಶರ್ಮಿಳಾ ತನ್ನ ರೂಮಿನ ಬಾಗಿಲು ತೆರೆದು ಸ್ನೇಹಿತೆಯ ಕೋಣೆಯ ಬಾಗಿಲು ತೆರೆದಿದ್ದಾಳೆ ದಟ್ಟ ಹೊಗೆ ಶರ್ಮಿಳಾ ಮುಖಕ್ಕೆಅಪ್ಪಳಿಸಿದ್ದು, ಉಸಿರುಗಟ್ಟಿದ ಶರ್ಮಿಳಾ ಮನೆಯ ಹಾಲ್ ನಲ್ಲಿ ಬಂದು ಪ್ರಜ್ಞೆ ತಪ್ಪಿ ಬಿದ್ದವಳು ಸಾವನ್ನಪ್ಪಿದ್ದಾಳೆ.
ಮನೆಯ ಮಾಲೀಕರು ಮನೆಯಲ್ಲಿ ಹೊಗೆ ಬರುತ್ತಿರುವುದು ಕಂಡು ಬಂದು ನೋಡಿದಾಗ ಶರ್ಮಿಳಾ ಪ್ರಜ್ಞೆ ಇಲ್ಲದೇ ಬಿದ್ದಿದ್ದಳು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲೇ ಆಕೆ ಸಾವನ್ನಪ್ಪಿದ್ದಳು ಎಂದು ತಿಳಿದುಬಂದಿದೆ.




