Kannada NewsLatestNational

*ಉಕ್ಕು ಕಾರ್ಖಾನೆಯಲ್ಲಿ ಭೀಕರ ಬೆಂಕಿ ದುರಂತ: ಮೂವರು ಎಂಜಿನಿಯರ್ ಗಳು ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಉಕ್ಕು ಕಾರ್ಖಾನೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಮೂವರು ಎಂಜಿನಿಯರ್‌ಗಳು ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಜಾರ್ಖಂಡ್‌ನ ರಾಮಗಢ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ. ಶುಕ್ರವಾರ ತಡರಾತ್ರಿ ಹೆಲಾಲ್ ಪ್ರದೇಶದಲ್ಲಿರುವ ಉಕ್ಕು ಕಾರ್ಖಾನೆಯ ಕ್ಯಾಪ್ಟಿವ್ ಪವರ್ ಪ್ಲಾಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆ ಘಟಕದ ಇತರ ಭಾಗಗಳಿಗೂ ವ್ಯಾಪಿಸಿದೆ.

ಘಟನೆಯಲ್ಲಿ ಒಟ್ಟು ನಾಲ್ವರು ಉದ್ಯೋಗಿಗಳು ತೀವ್ರ ಸುಟ್ಟ ಗಾಯಗಳಿಗೆ ಒಳಗಾಗಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೂವರು ಮೃತಪಟ್ಟಿದ್ದಾರೆ.

ಮೃತರನ್ನು ಸಂಜೀವ್, ವಿನೀತ್ ಮತ್ತು ಅಭಿಷೇಕ್ ಎಂದು ಗುರುತಿಸಲಾಗಿದೆ. ಮತ್ತೊಬ್ಬ ಗಾಯಾಳುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ಬರ್ಕಾಕಾನಾ ಪೊಲೀಸ್ ಠಾಣೆಯ ಇನ್‌ಚಾರ್ಜ್ ಉಮಾ ಶಂಕರ್ ವರ್ಮಾ ತಿಳಿಸಿದ್ದಾರೆ.

ಅಗ್ನಿ ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆ ಕುರಿತು ತನಿಖೆ ಆರಂಭಿಸಲಾಗಿದ್ದು, ಬೆಂಕಿ ಟರ್ಬೈನ್ ಅಥವಾ ಪವರ್ ಪ್ಲಾಂಟ್‌ನಲ್ಲಿನ ತಾಂತ್ರಿಕ ದೋಷದಿಂದ ಸಂಭವಿಸಿರಬಹುದು ಎನ್ನಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button