*ನಾವಗೆ ಬೆಂಕಿ ಅವಘಡ: ಇನ್ನೂ ಹಲವರು ಸಿಲುಕಿರುವ ಸಾಧ್ಯತೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶಾರ್ಟ್ ಸರ್ಕ್ಯೂಟ್ ನಿಂದ ಬೆಳಗಾವಿಯ ನಾವಗೆ ಕೈಗಾರಿಕಾ ಪ್ರದೇಶದಲ್ಲಿರುವ ಇನ್ಸುಲೆನ್ ಟೇಪ್ ತಯಾರಿಸುವ ಸ್ನೇಹಂ ಕಾರ್ಖಾನೆಯಲ್ಲಿ ಮಂಗಳವಾರ ರಾತ್ರಿ ಅಗ್ನಿ ದುರಂತ ಉಂಟಾಗಿದೆ. ಈ ದುರಂತದಲ್ಲಿ ಹಲವು ಮಂದಿ ಕಾರ್ಮಿಕರು ಘಟನಾ ಸ್ಥಳದಲ್ಲಿ ಸಿಲುಕಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇನ್ನು ಈ ಬೆಂಕಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗುತ್ತಿದ್ದು, ಸುದ್ದಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿವೆ. ಇತ್ತೀಚಿನ ಮಾಹಿತಿಯ ಪ್ರಕಾರ ಶೇ.70 ರಷ್ಟು ಬೆಂಕಿಯನ್ನು ನಂದಿಸಲಾಗಿದೆ.
ಘಟನೆಯಲ್ಲಿ ಗಾಯಗೊಂಡ ಮೂವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಖಾನೆಯ ಒಳಗೆ ಇನ್ನೂ ಎಷ್ಟು ಮಂದಿ ಸಿಲುಕಿದ್ದಾರೆ ಎಂಬ ಬಗ್ಗೆ ಇನ್ನೂ ಸ್ಪಷ್ಟವಾದ ಮಾಹಿತಿ ಇಲ್ಲ. ಸುಟ್ಟ ಗಾಯಗಳಾಗಿರುವವರಿಗೆ ಚಿಕಿತ್ಸೆ ನೀಡಲು ಜಿಲ್ಲಾಸ್ಪತ್ರೆಯಲ್ಲಿ ಕನಿಷ್ಠ 200 ಬೆಡ್‌ಗಳನ್ನು ಸಿದ್ಧಪಡಿಸುವಂತೆ ಆರೋಗ್ಯ ಇಲಾಖೆಗೆ ಜಿಲ್ಲಾಧಿಕಾರಿ ಸೂಚಿಸಿದರು.
ಬೆಳಗಾವಿ ಪೊಲೀಸ್ ಕಮಿಷನರ್ ಐಡಾ ಮಾರ್ಟಿನ್, ಡಿಸಿಪಿ ರೋಹನ್ ಜಗದೀಶ್ ಮತ್ತು ವಿವಿಧ ಇಲಾಖೆಗಳ ಹಲವಾರು ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದಾರೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ