National

*ಗುಜರಾತನಲ್ಲಿ ಭೀಕರ ಅಗ್ನಿ ದುರಂತ: 27 ಜನರ ಸಾವು*

ಪ್ರಗತಿವಾಹಿನಿ ಸುದ್ದಿ: ರಾಜ್ ಕೋಟ್ ನ ಗೇಮ್‌ ಝೋನ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ನಾಲ್ವರೂ ಮಕ್ಕಳು ಸೇರಿದಂತೆ 27 ಜನ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.‌

ಗುಜರಾತ ರಾಜ್ಯದ ರಾಜಕೋಟ್‌ನ ಮನರಂಜನಾ ಕೇಂದ್ರದ ಟಿಆರ್‌ಪಿ ಗೇಮ್‌ ಝೋನ್‌ನಲ್ಲಿ ಶನಿವಾರ ಸಂಜೆ ಅಗ್ನಿ ದುರಂತ ಸಂಭವಿಸಿದೆ. ನಾಲ್ವರು ಮಕ್ಕಳು ಸೇರಿದಂತೆ 27 ಮಂದಿ ಸಾವಿಗೀಡಾಗಿದ್ದಾರೆ.

ಆಟದ ಚಟುವಟಿಕೆಗಳಿಗೆ ನಿರ್ಮಿಸಲಾಗಿದ್ದ ಫೈಬರ್‌ ಗೊಮ್ಮಟದಲ್ಲಿ ಸಂಜೆ ಸುಮಾರು 4.30 ಗಂಟೆಗೆ ಬೆಂಕಿ ಹೊತ್ತಿಕೊಂಡಿತು. ಬೆಂಕಿ ಕಾರಣಕ್ಕೆ ಕಟ್ಟಡ ಕುಸಿಯಿತು. ಈ ವೇಳೆ ಮಕ್ಕಳು ಸೇರಿ ಹಲವರು ಆ ಸ್ಥಳದಲ್ಲಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಚಾರಣೆ ನಡೆಸಲು ಮನರಂಜನಾ ಕೇಂದ್ರದ ಮಾಲೀಕ ಮತ್ತು ವ್ಯವಸ್ಥಾಪಕ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವಘಡದ ತನಿಖೆಗಾಗಿ ಗುಜರಾತ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿದೆ.

ಸ್ಥಳದಲ್ಲಿ ರಕ್ಷಣಾ ಕಾರ್ಯಗಳು ಭರದಿಂದ ಸಾಗಿವೆ. ಗುರುತು ಪತ್ತೆ ಮಾಡಲು ಸಾಧ್ಯವಾಗದೆ ಇರುವಷ್ಟು ಮೃತದೇಹಗಳು ಸುಟ್ಟು ಕರಕಲು ಆಗಿವೆ. ಬೇಸಿಗೆ ರಜೆ ಕಾರಣ ಗೇಮ್‌ಝೋನ್‌ ನಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಹೀಗಾಗಿ, ಸಾವಿನಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ’ ಎಂದಿದ್ದಾರೆ.

ಗಣ್ಯರಿಂದ ಸಂತಾಪ ಸೂಚನೆ

ಅಗ್ನಿ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ದುಃಖ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, ‘ರಾಜ್‌ಕೋಟ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಿಂದ ಅತೀವ ದುಃಖವಾಗಿದೆ. ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲರಿಗೂ ನನ್ನ ಸಂತಾಪಗಳು. ಗಾಯಾಳುಗಳಿಗೆ ನನ್ನ ಪ್ರಾರ್ಥನೆಗಳು. ಸ್ಥಳೀಯಾಡಳಿತವು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ನೆರವು ನೀಡಲು ಕೆಲಸ ಮಾಡುತ್ತಿದೆ’ ಎಂದು ಹೇಳಿದ್ದಾರೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಘಟನೆಯ ಬಗ್ಗೆ ಪ್ರತಿಕ್ರಿಯಿಸಿ, ಈ ದುರಂತ ಅಪಘಾತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಮತ್ತು ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.

ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಮೃತರ ಕುಟುಂಬಗಳಿಗೆ 4 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದರು.

Related Articles

Back to top button