*ಆಸ್ಪತ್ರೆಯ ಐಸಿಯು ಘಟಕದಲ್ಲಿ ಬೆಂಕಿ ಅವಘಡ: ಹಲವು ರೋಗಿಗಳ ಸಾವು*

ಪ್ರಗತಿವಾಹಿನಿ ಸುದ್ದಿ: ಆಸ್ಪತ್ರೆಯ ಐಸಿಯು ಘಟಕದಲ್ಲಿ ಇಂದು ಅಗ್ನಿ ಅವಘಡ ಸಂಭವಿಸಿದ್ದು, ಮೂರಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬಿಹಾರದ ಪ್ರಸಾದ್ ಆಸ್ಪತ್ರೆಯಲ್ಲಿ ಈ ಅವಘಡ ಸಂಭವಿಸಿದೆ. ಆಸ್ಪತ್ರೆಯೊಳಗೆ ದಟ್ಟ ಹೊಗೆ ಮತ್ತು ಬೆಂಕಿಯ ನಡುವೆ ಸಿಲುಕಿದ್ದ 20 ಕ್ಕೂ ಹೆಚ್ಚು ರೋಗಿಗಳನ್ನು ಅಗ್ನಿಶಾಮಕ ಸಿಬ್ಬಂದಿ ಸುರಕ್ಷಿತವಾಗಿ ಹೊರಗೆ ಕರೆತಂದಿದ್ದಾರೆ.
ಹಲವು ರೋಗಿಗಳನ್ನು ಹತ್ತಿರದ ಆಸ್ಪತ್ರೆಗೆ ಕಳುಹಿಸಲಾಗಿದೆ. ಅಧಿಕಾರಿಗಳು ಪ್ರಸ್ತುತ ಸ್ಥಿತಿ ಮತ್ತು ಸ್ಥಳದ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣವೇ ಅಗ್ನಿಶಾಮಕ ಅಧಿಕಾರಿಗಳ ನೇತೃತ್ವದ ತಂಡ ಕಾರ್ಯಪ್ರವೃತ್ತವಾಯಿತು.
ಸ್ಥಳಕ್ಕೆ ಧಾವಿಸಿದ 12 ಅಗ್ನಿಶಾಮಕ ವಾಹನಗಳು ದಟ್ಟ ಮತ್ತು ವಿಷಕಾರಿ ಹೊಗೆಯನ್ನು ಸೀಳಿಕೊಂಡು ಅತ್ಯಂತ ವ್ಯವಸ್ಥಿತವಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದವು. ಕ್ಷಿಪ್ರವಾಗಿ ಕಾರ್ಯನಿರ್ವಹಿಸಿದ ರಕ್ಷಣಾ ಮತ್ತು ಪರಿಹಾರ ತಂಡಗಳು ಕೆಲವೇ ಗಂಟೆಗಳಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದ್ದು, ಸದ್ಯ ಆಸ್ಪತ್ರೆ ಆವರಣದಲ್ಲಿ ಪರಿಸ್ಥಿತಿ ಶಾಂತವಾಗಿದ್ದು, ಸಂಪೂರ್ಣ ಹತೋಟಿಯಲ್ಲಿದೆ.




