ರಸ್ತೆ-ಸೇತುವೆ ಹಾನಿ: ಅಂದಾಜುಪಟ್ಟಿ ಸಲ್ಲಿಸಲು ಸೂಚನೆ
ತಾತ್ಕಾಲಿಕ ಶೆಡ್ ನಿರ್ಮಾಣಕ್ಕೆ ಸಚಿವ ಲಕ್ಷ್ಮಣ ಸವದಿ ಸೂಚನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಪ್ರವಾಹ ಮತ್ತು ಮಳೆಯಿಂದ ಸಂಪೂರ್ಣ ಮನೆಗಳನ್ನು ಕಳೆದುಕೊಂಡಿರುವ ಸಂತ್ರಸ್ತರಿಗೆ ತಕ್ಷಣ ತಾತ್ಕಾಲಿಕ ಶೆಡ್ ನಿರ್ಮಿಸಿಕೊಡಬೇಕು ಎಂದು ನೂತನ ಸಚಿವ ಲಕ್ಷ್ಮಣ ಸವದಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರವಾಹ ನಿರ್ವಹಣೆ ಮತ್ತು ಸಂತ್ರಸ್ತರ ಪುನರ್ವಸತಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ (ಆ.21) ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇದನ್ನೂ ಓದಿ(ಪ್ರಗತಿವಾಹಿನಿ) – ನೂತನ ಸಚಿವ ಲಕ್ಷ್ಮಣ ಸವದಿ ಬುಧವಾರ ಬೆಳಗಾವಿಗೆ
ಪ್ರವಾಹ ಬಾಧಿತ ಗ್ರಾಮದಲ್ಲಿ ಸರ್ಕಾರಿ ಜಮೀನು ಲಭ್ಯವಿರುವ ಕಡೆ ಅಥವಾ ಜಮೀನು ಇಲ್ಲದಿದ್ದರೆ ಬಾಡಿಗೆ ಜಮೀನು ಪಡೆದುಕೊಂಡು ಸಂತ್ರಸ್ತರಿಗೆ ತಾತ್ಕಾಲಿಕ ವಸತಿ ಸೌಲಭ್ಯ ಒದಗಿಸಬೇಕು.
ಸ್ವಂತ ಶೆಡ್ ನಿರ್ಮಾಣಕ್ಕೆ ಮುಂದಾದರೆ ಸರ್ಕಾರದಿಂದ ತಕ್ಷಣ 50 ಸಾವಿರ ನೀಡಬಹುದು.
ಶಾಲೆಗಳಲ್ಲಿ ಪರಿಹಾರ ಕೇಂದ್ರಗಳನ್ನು ಆರಂಭಿಸಿರುವುದರಿಂದ ಸಂತ್ರಸ್ತರಿಗೆ ತಾತ್ಕಾಲಿಕ ಶೆಡ್ ನಿರ್ಮಿಸಿಕೊಟ್ಟು, ಶಾಲೆಗಳನ್ನು ಪುನರಾರಂಭಿಸಲು ಅನುಕೂಲವಾಗಲಿದೆ ಎಂದರು.
ತಕ್ಷಣ ಪರಿಹಾರ ನೀಡಲು ಸೂಚನೆ:
ಸರ್ಕಾರ ಈಗಾಗಲೇ ಬಿಡುಗಡೆ ಮಾಡಿರುವ ಪರಿಹಾರದ ಹಣವನ್ನು ತಕ್ಷಣವೇ ಸಂತ್ರಸ್ತರಿಗೆ ತಲುಪಿಸಬೇಕು ಎಂದು ಸಚಿವ ಲಕ್ಷ್ಮಣ ಸವದಿ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಪ್ರವಾಹದಿಂದ ಅಪಾರ ಪ್ರಮಾಣದ ಬೆಳೆಹಾನಿ ಆಗಿರುವುದರಿಂದ ಕೂಡಲೇ ಬೆಳೆಹಾನಿ ಬಗ್ಗೆ ಜಂಟಿ ಸಮೀಕ್ಷೆ ಕೈಗೊಳ್ಳಬೇಕು.
ಬಿತ್ತನೆ ಮತ್ತು ಬೆಳೆಯ ಬೆಳವಣಿಗೆಯನ್ನು ಗಮನದಲ್ಲಿ ಇಟ್ಟುಕೊಂಡು ಸಮೀಕ್ಷೆ ನಡೆಸಬೇಕು. ಇಲ್ಲಿಯೂ ಕೂಡ ಯಾವುದೇ ರೀತಿಯ ತಾರತಮ್ಯಗಳಾಗದಂತೆ ಅಧಿಕಾರಿಗಳು ಸೂಕ್ಷ್ಮ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು.
ಯಾವುದೇ ರೀತಿಯ ಒತ್ತಡಕ್ಕೆ ಒಳಗಾಗದೇ ಸಮೀಕ್ಷೆ ನಡೆಸುವ ಮೂಲಕ ಸಂತ್ರಸ್ತರಿಗೆ ಸೂಕ್ತ ನೆರವು ಒದಗಿಸಬೇಕು.
ಸಮೀಕ್ಷೆ-ತಾರತಮ್ಯ ಮಾಡದಂತೆ ಎಚ್ಚರಿಕೆ:
ಪ್ರವಾಹ ಬಾಧಿತ ಗ್ರಾಮಗಳಲ್ಲಿ ಮನೆಗಳ ಕುಸಿತದ ಬಗ್ಗೆ ಸಮೀಕ್ಷೆ ಮಾಡುವಾಗ ತಾರತಮ್ಯ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸಚಿವ ಸವದಿ ಹೇಳಿದರು.
ಲೋಪದೋಷಗಳಾದರೆ ಸಮೀಕ್ಷೆ ಮಾಡುವ ತಂಡವನ್ನೇ ಹೊಣೆಯಾಗಿಸಬೇಕು. ನ್ಯಾಯಸಮ್ಮತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಮರ್ಪಕ ಸಮೀಕ್ಷೆ ನಡೆಸಬೇಕು ಎಂದು ಸೂಚನೆ ನೀಡಿದರು.
ಇದನ್ನೂ ಓದಿ(ಪ್ರಗತಿವಾಹಿನಿ) – ಪಕ್ಷ ನಿಷ್ಠೆಗಾಗಿ ಮಂತ್ರಿ ಸ್ಥಾನ ಸಿಕ್ಕಿದೆ : ಲಕ್ಷ್ಮಣ್ ಸವದಿ
ಸಂತ್ರಸ್ತರ ಪುನರ್ವಸತಿ ಈಗ ನಮ್ಮ ಆದ್ಯತೆಯಾಗಿದೆ. ಮುಳುಗಡೆಯಾಗಿರುವ ಗ್ರಾಮಗಳಲ್ಲಿ ಜನರು ಸಂಪೂರ್ಣ ಸ್ಥಳಾಂತರಗೊಳ್ಳಲು ಇನ್ನೂ ಸಮಯ ಬೇಕಿದೆ.
ಪುನರ್ವಸತಿ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ದೊಡ್ಡ ಸವಾಲು. ಆದ್ದರಿಂದ ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ಕೆಲಸ ಮಾಡಬೇಕಿದೆ.
ಗ್ರಾಮಗಳ ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಯಾವುದೇ ರೋಗರುಜಿನಗಳು ಬಾರದಂತೆ ಕ್ರಮಕೈಗೊಳ್ಳಬೇಕು.
ಸಂತ್ರಸ್ತರು ಮತ್ತು ರೈತರ ಜತೆ ಸರ್ಕಾರ ಇದೆ ಎಂಬ ಭರವಸೆಯನ್ನು ನಾವು ಮೂಡಿಸಬೇಕಿದೆ. ಆದ್ದರಿಂದ
ಜಿಲ್ಲೆಗೆ ಒದಗಿಬಂದಿರುವ ಆಪತ್ತನ್ನು ನಾವೆಲ್ಲರೂ ಸೇರಿ ಧೈರ್ಯದಿಂದ ಎದುರಿಸೋಣ ಎಂದರು.
ವಿದ್ಯುತ್-ರಸ್ತೆ ಸಂಪರ್ಕ ಒದಗಿಸಲು ಸೂಚನೆ:
ರಸ್ತೆ ಸಂಪರ್ಕ ಕಡಿತಗೊಂಡಿರುವ ಗ್ರಾಮಗಳು ಮತ್ತು ಸೇತುವೆಗಳ ಹಾನಿಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ರಸ್ತೆ, ಸೇತುವೆಗಳ ಹಾನಿಯ ಸಮೀಕ್ಷೆ ನಡೆಸಿ ದುರಸ್ತಿಗೆ ಅಂದಾಜುಪಟ್ಟಿಯನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಸಚಿವ ಸವದಿ ತಿಳಿಸಿದರು.
ಅದೇ ರೀತಿ ವಿದ್ಯುತ್ ಸಂಪರ್ಕ ಕಡಿತಗೊಂಡಿರುವ ಗ್ರಾಮಗಳಿಗೆ ತಕ್ಷಣವೇ ಸಂಪರ್ಕ ಒದಗಿಸುವಂತೆ ನಿರ್ದೇಶನ ನೀಡಿದರು.
ಇದನ್ನೂ ಓದಿ(ಪ್ರಗತಿವಾಹಿನಿ) – ಧಾರ್ಮಿಕವಾಗಿ ಮಹಿಳೆಯರನ್ನು ಬೆಳೆಸಿದರೆ ಮನೆ ಸಂಸ್ಕಾರಯುತ
ಆರೋಗ್ಯ ರಕ್ಷಣೆ- ಮುನ್ನೆಚ್ಚರಿಕೆಗೆ ಸಚಿವೆ ಜೊಲ್ಲೆ ಸೂಚನೆ:
ಈ ಸಂದರ್ಭದಲ್ಲಿ ಮಾತನಾಡಿದ ಚಿಕ್ಕೋಡಿ ಉಪ ವಿಭಾಗದ ಪ್ರವಾಹ ಉಸ್ತುವಾರಿ ವಹಿಸಿಕೊಂಡಿರುವ ನೂತನ ಸಚಿವೆ ಶಶಿಕಲಾ ಜೊಲ್ಲೆ ಅವರು, ಪ್ರವಾಹಬಾಧಿತ ಗ್ರಾಮಗಳಲ್ಲಿ ಜನರ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರವಾಹದಿಂದ ಸಂತ್ರಸ್ತರಾಗಿರುವ ಜನರಿಗೆ ಹೊಸ ಬದುಕು ಕಟ್ಟಿಕೊಡಲು ನಾವು ಎಲ್ಲರೂ ಸಮನ್ವಯದೊಂದಿಗೆ ಕಾರ್ಯನಿರ್ವಹಿಸೋಣ ಎಂದರು.
ಇದನ್ನೂ ಓದಿ(ಪ್ರಗತಿವಾಹಿನಿ) – ಡಿಕೆಶಿ ಭೇಟಿಯಾದ ಜೊಲ್ಲೆ ದಂಪತಿ
14 ಕೋಟಿ ರೂಪಾಯಿ ಪರಿಹಾರ ವಿತರಣೆ:
ಆಗಸ್ಟ್ ನಲ್ಲಿ ವಾಡಿಕೆಗಿಂತ ಶೇ.490 ರಷ್ಟು ಅಧಿಕ ಮಳೆ ಮತ್ತು ಮಹಾರಾಷ್ಟ್ರದ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟ ಪರಿಣಾಮ ಪ್ರವಾಹ ಪರಿಸ್ಥಿತಿ ಉದ್ಭವಿಸಿತು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ವಿವರಿಸಿದರು.
ಜಿಲ್ಲೆಯ 377 ಗ್ರಾಮಗಳು ಪ್ರವಾಹದಿಂದ ಬಾಧಿತಗೊಂಡಿದ್ದ 4.15 ಲಕ್ಷ ಜನರನ್ನು ಹಾಗೂ 1.10 ಲಕ್ಷ ಜಾನುವಾರುಗಳನ್ನು ಸ್ಥಳಾಂತರಿಸಲಾಗಿದೆ. 493 ಪರಿಹಾರ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ 1.72 ಲಕ್ಷ ಜನರಿಗೆ ಪರಿಹಾರಗಳಲ್ಲಿ ಆಶ್ರಯ ನೀಡಲಾಗಿದೆ.
ಸದ್ಯಕ್ಕೆ ಜಿಲ್ಲೆಯಲ್ಲಿ 126 ಪರಿಹಾರ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ಜಿಲ್ಲೆಯಲ್ಲಿ 2.34 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಜಲಾವೃತಗೊಂಡಿರುತ್ತದೆ. ಪ್ರವಾಹ ಮತ್ತು ಮಳೆಯಿಂದಾಗಿ 24 ಜನರು ಸಾವನ್ನಪ್ಪಿದ್ದು, ಎರಡು ಪ್ರಕರಣ ಹೊರತುಪಡಿಸಿ ಮೃತರ ವಾರಸುದಾರರಿಗೆ ಪರಿಹಾರ ನೀಡಲಾಗಿದೆ. ಇಬ್ಬರು ನಾಪತ್ತೆಯಾಗಿದ್ದಾರೆ.
ಇದುವರೆಗೆ 14 ಕೋಟಿ ರೂಪಾಯಿ ಪರಿಹಾರ ವಿತರಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಮಾಹಿತಿ ನೀಡಿದರು.
ಕಿತ್ತೂರು ಶಾಸಕರಾದ ಮಹಾಂತೇಶ ದೊಡ್ಡಗೌಡರ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್ ಸಿಂಗ್, ಪೊಲೀಸ್ ಆಯುಕ್ತ ಬಿ.ಎಸ್.ಲೋಕೇಶ್ ಕುಮಾರ್, ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ. ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ