
ಗೋಕಾಕ ಎಂದೂ ಕಂಡರಿಯದ ಜಲದಿಗ್ಭಂಧನ
ಪ್ರಗತಿವಾಹಿನಿ ಸುದ್ದಿ – ಗೋಕಾಕ : ಮಹಾರಾಜ್ಯದ ಪಶ್ಚಿಮ ಘಟ್ಟದ ಪ್ರದೇಶದಲ್ಲಿ ಸತತವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದ ಹಿಡಕಲ್ ಜಲಾಶಯಕ್ಕೆ ಅತಿಯಾದ ನೀರು ಹರಿಯುತ್ತಿರುವದರಿಂದ ಎಂದೂ ಕಂಡರಿಯದ ಪ್ರವಾಹ ಎದುರಾಗಿ ಗೋಕಾಕ ನಗರಕ್ಕೆ ಸಂಪೂರ್ಣ ಜಲದಿಗ್ಭಂದ ಹಾಕಿದಂತಾಗಿದೆ.
51 ಟಿಎಂಸಿ ಸಾಮಥ್ರ್ಯದ ಹಿಡಕಲ್ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ನೆರೆಯ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಘಟಪ್ರಭಾ ನದಿಗೆ ಹಿರಣ್ಯಕೇಶಿ ಮತ್ತು ಮಾರ್ಕಂಡೇಯ ನದಿಗಳು ಸೇರಿ ಒಟ್ಟು 1.45 ಲಕ್ಷ ಕ್ಯೂಸೆಕ್ಸ್ ನೀರು ಹೆಚ್ಚುವರಿಯಾಗಿ ಹರಿದು ಬಂದಿರುವ ಪರಿಣಾಮ ನಗರದಲ್ಲಿ ಮತ್ತು ತಾಲೂಕಿನ ನದಿ ತೀರದ 25 ಗ್ರಾಮಗಳಲ್ಲಿ ಮತ್ತಷ್ಟೂ ಮನೆಗಳು ಸಂಪೂರ್ಣವಾಗಿ ಮುಳುಗಡೆಯಾಗಿವೆ.
ಬುಧವಾರದಂದು ಹಿಡಕಲ್ ಜಲಾಶಯದಿಂದ 90ಸಾವಿರ ಕ್ಯೂಸೆಕ್ಸ್, ಮಾರ್ಕಂಡೇಯ ನದಿಯ ಶಿರೂರ ಜಲಾಶಯದಿಂದ 23500 ಕ್ಯೂಸೆಕ್ಸ್ ನೀರನ್ನು ಹರಿಬಿಟ್ಟ ಪರಿಣಾಮ ನಗರದ ಕುಂಬಾರ ಗಲ್ಲಿ, ಉಪ್ಪಾರ ಓಣಿ, ಕಲಾಲ ಗಲ್ಲಿ, ಆಶ್ರಯ ಬಡಾವಣೆ, ಜಲಾಲ ಗಲ್ಲಿ, ಡೋರ ಗಲ್ಲಿ, ಹಾಳಬಾಗ ಗಲ್ಲಿ, ಮಟನ್ ಮಾರ್ಕೆಟ್, ಫೀಶ್ ಮಾರ್ಕೆಟ್ ಹಾಗೂ ತಾಲೂಕಿನ ಅಡಿಬಟ್ಟಿ, ಮೆಳವಂಕಿ, ಉದಗಟ್ಟಿ, ಚಿಗದೊಳ್ಳಿ, ಮುಸಗುಪ್ಪಿ ಗ್ರಾಮಗಳಲ್ಲಿ ಸಂಪೂರ್ಣ ಜಲಾವೃತಗೊಂಡಿವೆ.
ತಾಲೂಕಿನ ಅಡಿಬಟ್ಟಿ, ಮೆಳವಂಕಿ, ಮುಸಗುಪ್ಪಿಯ ಗ್ರಾಮಗಳಲ್ಲಿ ಮನೆಗಳು ಜಲಾವೃತಗೊಂಡ 300ಕ್ಕೂ ಹೆಚ್ಚು ಜನ ಮನೆಗಳ ಹಾಗೂ ಮೃಗಳ ಮೇಲೆ ಕುಳಿತಿದ್ದು ಅವರನ್ನು ರಕ್ಷಿಸಲು ಎಸ್‍ಡಿಆರ್‍ಎಫ್ ಸಿಬ್ಬಂಧಿಯೊಂದಿಗೆ ಬೋಟಗಳ ಸಹಾಯದಿಂದ ಕಾರ್ಯಚಾರಣೆ ನಡೆಸಲಾಯಿತು ಈ ಕಾರ್ಯಾಚರಣೆಯಲ್ಲಿ ಸಮಾರು 200ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಹೆಚ್ಚಿನ ಗಂಜಿ ಕೇಂದ್ರಗಳ ಅವಶ್ಯಕತೆ : ಈಗಾಗಲೇ ನಗರದ ಹಾಗೂ ತಾಲೂಕಿನಲ್ಲಿ ಈಗಾಗಲೇ ಶಾಲೆ, ಕಾಲೇಜುಗಳು, ಸಮುದಾಯ ಭವನ ಸೇರಿ ವಿವಿಧ ಇಲಾಖೆಗಳ ಭವನಗಳನ್ನು ಗಂಜಿ ಕೇಂದ್ರಗಳನ್ನಾಗಿ ತಾಲೂಕಾಡಳಿತ ಪ್ರಾರಂಭಿಸಿದೆ. ಇನ್ನೂ ಹೆಚ್ಚಿನ ಜನರು ಪ್ರವಾಹದಿಂದ ಮನೆಯನ್ನು ತೋರೆಯುವ ದುಸ್ಥಿತಿ ಬಂದೊದಗಿದ್ದು, ಇನ್ನೂ ಹೆಚ್ಚಿನ ಗಂಜಿ ಕೇಂದ್ರಗಳ ಅವಶ್ಯಕತೆ ಇದೆ. ಹೀಗಾಗಿ ಅಧಿಕಾರಿಗಳು ಹೆಚ್ಚಿನ ಗಂಜಿ ಕೇಂದ್ರಗಳನ್ನು ನಿರ್ಮಿಸಲು ಸಿದ್ಧತೆ ನಡೆಸಬೇಕಿದೆ.
ಮನೆಕಳೆದುಕೊಂಡ ಜನರ ಗೋಳಾಟ : ಗೋಕಾಕ ನಗರದಲ್ಲಿ ಆಶ್ರಯ ಬಡಾವಣೆ, ಜಲಾಲ ಗಲ್ಲಿ, ದಾಳಂಬ್ರಿ ತೋಟ, ಡೋರಗಲ್ಲಿ, ಉಪ್ಪಾರ ಗಲ್ಲಿ, ಹಾಳಭಾಗ ಗಲ್ಲಿ, ಅಡಿಬಟ್ಟಿ ಬಡಾವಣೆ ಸೇರಿ ಹಲವು ಬಡಾವಣೆಗಳು ಸಂಪೂರ್ಣ ಜಲಾವೃತಗೊಂಡಿದ್ದು ಜನರು ಮನೆಗಳನ್ನು ಕಳೆದುಕೊಂಡು ಕಣ್ಣಿರು ಸುರಿಸಿದರು.
ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆಗೆ: ಘಟಪ್ರಭಾ ನದಿ ತೀರದ ಪ್ರವಾಹದಲ್ಲಿ ಸಿಲುಕಿದ್ದ ಮೆಳವಂಕಿ, ಕಲಾರಕೊಪ್ಪ ಗ್ರಾಮಗಳ ಸುಮಾರು 120ಕ್ಕೂ ಹೆಚ್ಚು ಜನರಲ್ಲಿ ಬುಧವಾರ 50ಕ್ಕೂ ಹೆಚ್ಚು ಜನರನ್ನು ರಕ್ಷಿಸಿದ್ದಾರೆ. ಅಡಿಬಟ್ಟಿ ಗ್ರಾಮದ 60ಜನ ಗ್ರಾಮಸ್ಥರಲ್ಲಿ 35 ಜನರನ್ನು ರಕ್ಷಿಸಲಾಗಿದೆ. ಚಿಗಡೊಳ್ಳಿ ಗ್ರಾಮಸ್ಥರನ್ನು ಸಹ ಸುರಕ್ಷಿತವಾಗಿ ಕರೆ ತರಲಾಗಿದೆ.
ಶಾಸಕ ಬಾಲಚಂದ್ರ ಜಾರಕಿಹೊಳಿ ನಿವಾಸ ಮುಳುಗಡೆ :

ಘಟಪ್ರಭಾ ನದಿ ನೀರಿನ ಹರಿವಿನಲ್ಲಿ ನಿನ್ನೆ ರಾತ್ರಿ ಹೆಚ್ಚಳ ಕಾಣಿಸಿಕೊಂಡಿದ್ದರಿಂದ ಬ್ಯಾಳಿ ಕಾಟಾ ಬಳಿ ಇರುವ ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮನೆ (ಎನ್‍ಎಸ್‍ಎಫ್)ಕ್ಕೆ ನೀರು ನುಗ್ಗಿದೆ ಅಲ್ಲದೆ ಮಾರ್ಕಾಂಡೆಯ ನದಿಗೆ ಭೀಕರ ಪ್ರವಾಹ ಅಪ್ಪಳಿಸಿದ ಪರಿಣಾಮವಾಗಿ ಡಿಎಸ್‍ಪಿ ಕಛೇರಿಯ ಹಿಂಬಾಗದ ಜನತಾ ಪ್ಲಾಟ್ ನಲ್ಲಿ ನೀರು ನುಗ್ಗಿದ್ದರಿಂದ ಹಲವಾರು ಮನೆಗಳು ಜಲಾವೃತ ಗೊಂಡಿವೆ. ಮಾಕರ್ಂಡೆಯ ನದಿ ಸಮೀಪದ ಪೆಟ್ರೋಲ್ ಬಂಕ್ ಮುಳುಗಡೆಯಾಗಿದೆ.
ಇತಿಹಾಸ ಸೃಷ್ಟಿಸಿದ ಪ್ರವಾಹ : ಗೋಕಾಕ ನಗರದಲ್ಲಿ ದಶಕಗಳಿಂದ ಸೃಷ್ಟಿಯಾಗದ ಪ್ರವಾಹ ಬಂದೊದಗಿದೆ. ಹಳೆಯ ಗೋಕಾಕ ಭಾಗ ಭಾಗಶಃ ಮುಳುಗಡೆಯಾಗಿದೆ. ಕಳೆದ 50ವರ್ಷಗಳಲ್ಲಿ ಇಂತಹ ದೊಡ್ಡ ಪ್ರಮಾಣದ ಯಾವುದೇ ಪ್ರವಾಹ ನೋಡಿಲ್ಲ. ಈ ಪ್ರವಾಹ ನಗರದ ಜನರಲ್ಲಿ ಸಾಕಷ್ಟು ಹಾನಿ ಉಂಟು ಮಾಡಿದೆ. ಗೋಕಾಕ ಸಂಕೇಶ್ವರ ಹಾಗೂ ಕೊಣ್ಣೂರ ರಸ್ತೆ ಮುಳುಗಡೆಯ ಹಿನ್ನಲೆ ಇಂದು ಸಹ ಸಂಚಾರ ಅಸ್ತವ್ಯಸ್ತವಾಗಿದೆ.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ