ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ದೇಶದಲ್ಲಿ ಪ್ರಪ್ರಥಮ ಬಾರಿಗೆ ಮಹಿಳಾ ಸೈನಿಕರ (ಮಿಲಿಟರಿ ಪೊಲೀಸ್) ನೇಮಕಾತಿ ರ‍್ಯಾಲಿ ಬೆಳಗಾವಿಯಲ್ಲಿ ಜುಲೈ ೨೨ ರಿಂದ ೨೭ ರವರೆಗೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ (ಜು.೯) ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶದಾದ್ಯಂತ ಒಟ್ಟು ಐದು ಕಡೆಗಳಲ್ಲಿ ಮಹಿಳಾ ಸೇನಾ ಭರ್ತಿ ರ‍್ಯಾಲಿ ನಡೆಸಲಾಗುತ್ತಿದ್ದು, ಅದರಲ್ಲಿ ಬೆಳಗಾವಿಯೂ ಒಂದು. ಬೆಳಗಾವಿಯ ಮರಾಠಾ ಲಘು ಪದಾತಿ ದಳ ಕೇಂದ್ರದ ಆವರಣದಲ್ಲಿರುವ ಶಿವಾಜಿ ಕ್ರೀಡಾಂಗಣದಲ್ಲಿ ಜುಲೈ ೨೨ ರಿಂದ ೨೭ ರವರೆಗೆ ನೇಮಕಾತಿ ರ‍್ಯಾಲಿ ನಡೆಯಲಿದೆ.
ಅಭ್ಯರ್ಥಿಗಳು ಸಲ್ಲಿಸುವ ಜಾತಿ ಪ್ರಮಾಣಪತ್ರಗಳು ಮತ್ತು ಶೈಕ್ಷಣಿಕ ಪ್ರಮಾಣಪತ್ರಗಳನ್ನು ತಾತ್ಕಾಲಿಕವಾಗಿ ಪರಿಶೀಲನೆ ನಡೆಸಿ ನೇಮಕಾತಿ ಪ್ರಾಧಿಕಾರದ ಜತೆ ಸಮನ್ವಯ ಸಾಧಿಸಲು ಕಂದಾಯ ಮತ್ತು ಶೈಕ್ಷಣಿಕ ಇಲಾಖೆಯ ಸಿಬ್ಬಂದಿಯನ್ನು ಕೂಡ ನಿಯೋಜಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ನೇಮಕಾತಿ ರ‍್ಯಾಲಿಯಲ್ಲಿ ಭಾಗವಹಿಸಲಿರುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ಬಸ್ ಹಾಗೂ ರೈಲು ನಿಲ್ದಾಣದಲ್ಲಿ ಸಹಾಯ ಕೇಂದ್ರಗಳ ಸ್ಥಾಪನೆ ಮಾಡಲಾಗುವುದು.
ಸೂಕ್ತ ಸಾರಿಗೆ, ಕುಡಿಯುವ ನೀರು, ವೈದ್ಯಕೀಯ ಸೌಲಭ್ಯ ಹಾಗೂ ವಿದ್ಯುಚ್ಛಕ್ತಿ ಸಂಪರ್ಕವನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ತಿಳಿಸಿದರು.
ಎರಡು ಅಂಬ್ಯುಲೆನ್ಸ್, ವೈದ್ಯರು, ವೈದ್ಯಕೀಯ ಸಿಬ್ಬಂದಿ, ತಪಾಸಣಾ ಯಂತ್ರೋಪಕರಣಗಳು ಹಾಗೂ ಅಗತ್ಯ ಔಷಧಿಗಳನ್ನು ಆರೋಗ್ಯ ಇಲಾಖೆಯ ವತಿಯಿಂದ ಒದಗಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ ವಿವರಿಸಿದರು.
ರ‍್ಯಾಲಿಯಲ್ಲಿ ವೇಳೆ ನೂಕುನುಗ್ಗಲು ಉಂಟಾಗದಂತೆ ನಿಯಂತ್ರಿಸಲು ಸ್ಥಳೀಯ ಪೊಲೀಸ್ ಸಿಬ್ಬಂದಿ ನಿಯೋಜನೆ; ಅಭ್ಯರ್ಥಿಗಳಿಗೆ ಪಾವತಿ ಆಧಾರದ ಮೇಲೆ ಉಪಾಹಾರ ಒದಗಿಸುವುದು ಸೇರಿದಂತೆ ಒಟ್ಟಾರೆ ನೇಮಕಾತಿ ಪ್ರಕ್ರಿಯೆ ಸುಸೂತ್ರವಾಗಿ ನಡೆಸಲು ಬೇಕಾದ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಡಾ.ಬೊಮ್ಮನಹಳ್ಳಿ ತಿಳಿಸಿದರು.
ದೇಶದಲ್ಲಿ ಪ್ರಥಮ ಬಾರಿ ಮಹಿಳಾ ಸೈನಿಕರ(ಮಿಲಿಟರಿ ಪೊಲೀಸ್) ಭರ್ತಿ ರ‍್ಯಾಲಿ ನಡೆಸಲಾಗುತ್ತಿದ್ದು, ಬೆಳಗಾವಿಯೂ ಒಂದು. ರ‍್ಯಾಲಿಯಲ್ಲಿ ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯದ ಅಭ್ಯರ್ಥಿಗಳು ಭಾಗವಹಿಸುವರು. ರ‍್ಯಾಲಿಯಲ್ಲಿ ಒಟ್ಟಾರೆ ಸುಮಾರು ನಾಲ್ಕು ಸಾವಿರ ಅಭ್ಯರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಸೇನಾಧಿಕಾರಿಗಳು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಡಾ.ಬೂದೆಪ್ಪ ಹೆಚ್.ಬಿ., ಸೇನಾ ನೇಮಕಾತಿ ಅಧಿಕಾರಿ ಕರ್ನಲ್ ಪ್ರಣೀತ್ ದಯಾಳ್, ಸ್ಟೇಷನ್ ಕಮಾಂಡರ್ ಬಿ.ಎಸ್ ಘಿವಾರಿ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರಾದ ಈಶ್ವರ ಕುಡೊಳ್ಳಿ ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರವಾಸೋದ್ಯಮಕ್ಕೆ ಉತ್ತೇಜನ: ಜುಲೈ ೧೫ ರಂದು ಸಂಪರ್ಕ ಕಾರ್ಯಕ್ರಮ
ಕರ್ನಾಟಕ ಇಂಟರ್ ನ್ಯಾಷನಲ್ ಟ್ರಾವೇಲ್ ಎಕ್ಸಪೋ-೨೦೧೯ರ ಪ್ರಯುಕ್ತ ಬೆಳಗಾವಿ, ಉತ್ತರ ಕನ್ನಡ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸ್ಟೇಕ್ ಹೋಲ್ಡರ‍್ಸ್, ಟೂರ್ ಆಂಡ್ ಟ್ರಾವೆಲ್ಸ್ ಆಪರೇಟರ‍್ಸ್, ಹೋಟೆಲ್ ಮಾಲಿಕರು ಮತ್ತು ಹೋಮ್ ಸ್ಟೇ ಮಾಲಿಕರು
ಹಾಗೂ ಪ್ರವರ್ತಕರುಗಳೊಂದಿಗೆ ಜುಲೈ ೧೫ ರಂದು ಸಂಜೆ ೬ ಗಂಟೆಗೆ ನಗರದ ಸಂಕಮ್ ರೆಸಿಡೆಸ್ಸಿ ಹೋಟೆಲ್‌ನಲ್ಲಿ ಕನೆಕ್ಟ್ (ಸಂಪರ್ಕ) ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸ್ಟೇಕ್ ಹೋಲ್ಡರ‍್ಸ್, ಟೂರ್ ಆಂಡ್ ಟ್ರಾವೆಲ್ಸ್ ಆಪರೇಟರ‍್ಸ್, ಹೋಟೆಲ್ ಮಾಲಿಕರು ಮತ್ತು ಹೋಮ್ ಸ್ಟೇ ಮಾಲಿಕರು ತಪ್ಪದೇ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಹಾಗೂ ಬೆಳಗಾವಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷರು ಡಾ. ಎಸ್.ಬಿ.ಬೊಮ್ಮನಹಳ್ಳಿ ಅವರು ತಿಳಿಸಿದ್ದಾರೆ.
ಪ್ರವಾಸೋದ್ಯಮ ಚಟುವಟಿಕೆಗಳನ್ನು ಉತ್ತೇಜಿಸಲು ಅಗಸ್ಟ್ ೨೫ ರಿಂದ ೨೮ ರವರೆಗೆ ಬೆಂಗಳೂರಿನಲ್ಲಿ ನಡೆಯುವ ಕರ್ನಾಟಕ ಇಂಟರ್ ನ್ಯಾಷನಲ್ ಟ್ರಾವೇಲ್ ಎಕ್ಸಪೋ-೨೦೧೯ ರಲ್ಲಿ ನಡೆಯುತ್ತದೆ.
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡ, ಬೆಳಗಾವಿ ದೂರವಾಣಿ ಸಂಖ್ಯೆ ೯೪೪೮೮೭೫೧೧೧ ಮತ್ತು ೯೪೮೦೨೦೧೯೯೪ ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಹಾಗೂ ಬೆಳಗಾವಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷರು ಡಾ. ಎಸ್.ಬಿ.ಬೊಮ್ಮನಹಳ್ಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಿಎಮ್- ಕಿಸಾನ್ ಸಮ್ಮಾನ್ ನಿಧಿ: ಅವಧಿ ವಿಸ್ತರಣೆ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಮ್-ಕಿಸಾನ್) ಯೋಜನೆಯ ರೈತರ ಸ್ವಯಂ ಘೋಷಣಾ ಪತ್ರದ ಅರ್ಜಿ ಸಲ್ಲಿಸುವ ಅವಧಿಯನ್ನು ಜುಲೈ ೨೫ರ ವರೆಗೆ ವಿಸ್ತರಿಸಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ೬.೧೯ ಲಕ್ಷ ರೈತರು ಈ ಯೋಜನೆಯ ಫಲಾನುಭವಿಗಳಾಗಿದ್ದು, ಇಲ್ಲಿಯವರೆಗೆ ಒಟ್ಟು ೪.೭೩ ಲಕ್ಷ ರೈತರ ಅರ್ಜಿಗಳನ್ನು ಈಗಾಗಲೇ ತಂತ್ರಾಂಶದಲ್ಲಿ ಅಪಲೋಡ ಮಾಡಲಾಗಿದೆ.
ರಾಜ್ಯದಲ್ಲಿ ಬೆಳಗಾವಿ ಜಿಲ್ಲೆಯು ಶೇಕಡಾ ೭೬.೪೪ ರಷ್ಟು ರೈತರು ನೋಂದಣಿ ಮಾಡಿಕೊಳ್ಳುವುದರ ಮೂಲಕ ಪ್ರಥಮ ಸ್ಥಾನದಲ್ಲಿರುತ್ತದೆ. ಹಾಗೂ ಧಾರವಾಡ ಶೇಕಡಾ ೭೫.೬೬ ರಷ್ಟು ಪಡೆದು ದ್ವಿತೀಯ ಸ್ಥಾನ, ಗದಗ ಶೇಕಡಾ ೭೩.೨೩ ರಷ್ಟು ಪಡೆದು ತೃತೀಯ ಸ್ಥಾನದಲ್ಲಿದೆ.
ಸ್ವಯಂ ಘೋಷಣಾ ಪತ್ರವನ್ನು ಸಲ್ಲಿಸದೇ ಇರುವ ಉಳಿದ ರೈತಬಾಂಧವರು ಹತ್ತಿರದ ಗ್ರಾಮ ಪಂಚಾಯತ, ಅಟಲಜೀ ಜನ ಸ್ನೇಹಿ ಕೇಂದ್ರ, ರೈತ ಸಂಪರ್ಕ ಕೇಂದ್ರ, ನಾಗರಿಕ ಸೇವಾ ಕೇಂದ್ರ, ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖಾ ಕಚೇರಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಥವಾ ಹಾಲು ಉತ್ಪದಕರ ಸಹಕಾರ ಸಂಘ ಹೀಗೆ ಯವುದಾದರೊಂದು ಕೇಂದ್ರದಲ್ಲಿ ಅರ್ಜಿ ಸಲ್ಲಿಸಿ ಈ ಯೋಜನೆಯ ಉಪಯೋಗ ಪಡೆದುಬೇಕು ಎಂದು ಬೆಳಗಾವಿ ಜಿಲ್ಲಾಧಿಕಾರಿ ಡಾ. ಎಸ್.ಬಿ.ಬೊಮ್ಮನಹಳ್ಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
ರಾಷ್ಟೀಯ ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ಹಣಕಾಸು ನಿಗಮ ದೆಹಲಿಯ ಯೋಜನೆಯಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮುಖಾಂತರ ೨೦೧೯-೨೦ ನೇ ಸಾಲಿನಲ್ಲಿ ವಿವಿಧ ಉದ್ಯೋಗಗಳನ್ನು ಕೈಕೊಳ್ಳಲು ಹಾಗೂ ಉನ್ನತ ಮತ್ತು ವಿದೇಶಗಳಲ್ಲಿ ವಿದ್ಯಾಭ್ಯಾಸಕ್ಕಾಗಿ ಸಾಲ ಸೌಲಭ್ಯ ನೀಡಲು ಅಲ್ಪಸಂಖ್ಯಾತರ ಜನಾಂಗಕ್ಕೆ ಸೇರಿದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ, ಪಾರ್ಸಿ ಜನರಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯಡಿಯಲ್ಲಿ ಮಂಜೂರು ಮಾಡುವ ಸಾಲಕ್ಕೆ ಕೊಲ್ಯಾಟರಲ್ ಸೆಕ್ಯೂರಿಟಿಯೊಂದಿಗೆ ಸಾಲ ಪಡೆಯಲು ಇಚ್ಚಿಸುವ ಜನರು ಜಾತಿ, ಆದಾಯ ಪ್ರಮಾಣಪತ್ರ, ಆಧಾರ ಕಾರ್ಡ, ರೇಷನ್ ಕಾರ್ಡ, ಉದ್ಯೋಗದ ಲೈಸನ್ನ ಕೊಟೇಶನ, ಯೋಜನ ವರದಿ ಹಾಗೂ ನಿಗಮಕ್ಕೆ ಅಡಮಾನ ಮಾಡಬೇಕಾದ ಆಸ್ತಿಗೆ ಸಂಬಂಧಿಸಿದ ಸಂಪೂರ್ಣ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬೇಕು.
ಅಗತ್ಯ ದಾಖಲಾತಿಗಳೊಂದಿಗೆ ಅಗಸ್ಟ್ ೫ ರೊಳಗಗಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ) ಬೆಳಗಾವಿ ಜಿಲ್ಲಾ ವ್ವಸ್ಥಾಪಕರ ಕಚೇರಿಗೆ ಸಲ್ಲಿಸಬೇಕು. ಅಪೂರ್ಣ ದಾಖಲಾತಿಗಳು ಹಾಗೂ ಅವಧಿ ಮೀರಿ ಬಂದಂತಹ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ನಿ), ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಕಟ್ಟಡ ಸದಾಶಿವನಗರ ಬೆಳಗಾವಿ ಇವರನ್ನು ಸಂಪರ್ಕಿಸಬಹುದು ಎಂದು ಬೆಳಗಾವಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ನಿ) ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿತರಕ್ಷಣಾ ಸಮಿತಿಯ ಸದಸ್ಯರ ನೇಮಕ್ಕೆ ಅರ್ಜಿ ಆಹ್ವಾನ
ಹುಕ್ಕೇರಿ ತಾಲೂಕಿನ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ತಾಲೂಕಾ ಮಟ್ಟದ ಹಿತರಕ್ಷಣಾ ಸಮಿತಿಯ ಸದಸ್ಯರ ನೇಮಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಹಿಂದೂಳಿದ ವರ್ಗದವರಿಗಾಗಿ ಶ್ರಮಿಸುತ್ತಿರುವ ರಚನಾತ್ಮಕ ಕೆಲಸ ಕಾರ್ಯಗಳನ್ನು ಮಾಡುತ್ತಿರುವ ವ್ಯಕ್ತಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಸದರಿ ಸಮಿತಿಗೆ ಒಬ್ಬರು ಪರಿಶಿಷ್ಟ ಜಾತಿಗೆ ಸೇರಿದವರು, ಒಬ್ಬರು ಪರಿಶಿಷ್ಟ ವರ್ಗಕ್ಕೆ ಸೇರಿದವರು ಮತ್ತು ಒಬ್ಬರು ಇತರೆ ಹಿಂದೂಳಿದ ವರ್ಗಕ್ಕೆ ಸೇರಿದವರನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಬೇಕಾಗಿದೆ ಎಂದು ಹುಕ್ಕೇರಿ ತಹಶೀಲ್ದಾರರು ತಿಳಿಸಿದ್ದಾರೆ.
ಈ ಸಮಿತಿಗೆ ಸದ್ಯಸರಾಗ ಬಯಸುವವರು ತಮ್ಮ ಬಯೋಡಾಟಾ ಹಾಗೂ ಸಮಾಜ ಸೇವೆ ಸಲ್ಲಿಸಿದ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಹಾಯಕ ನಿರ್ದೇಶಕರು (ಗ್ರೇಡ್-೨) ಸಮಾಜ ಕಲ್ಯಾಣ ಇಲಾಖೆ ಹುಕ್ಕೇರಿ ಇವರಿಗೆ ಜುಲೈ ೩೧ ರೊಳಗೆ ಸಲ್ಲಿಸಬೇಕು ಎಂದು ಹುಕ್ಕೇರಿ ತಹಶೀಲ್ದಾರರು ಮತ್ತು ತಾಲೂಕಾ ಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಅಧ್ಯಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜುಲೈ ೧೧ ರಂದು ವಿಶ್ವ ಜನಸಂಖ್ಯಾ ದಿನಾಚರಣೆ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ, ಭಾರತೀಯ ಕುಟುಂಬ ಯೋಜನಾ ಸಂಘ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಾರ್ತಾ ಇಲಾಖೆ, ನೆಹರು ಯುವ ಕೇಂದ್ರ ಹಾಗೂ ವಿವಿಧ ಇಲಾಖೆಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳು ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮವನ್ನು ಜುಲೈ ೧೧ ರಂದು ಬೆಳಿಗ್ಗೆ ೧೦ ಗಂಟೆಗೆ ನಗರದ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಆಯೋಜಿಸಲಾಗಿದೆ.
ಭಾರತ ಸರ್ಕಾರದ ರಾಜ್ಯ ರೇಲ್ವೆ ಸಚಿವರಾದ ಸುರೇಶ ಚ ಅಂಗಡಿ ಅವರು ಘನ ಉಪಸ್ಥಿತರಿವರು. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅರಣ್ಯ, ಜೈವಿಕ ಮತ್ತು ಪರಿಸರ ಸಚಿವರಾದ ಸತೀಶ ಜಾರಕಿಹೊಳಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು.
ಸರ್ಕಾರದ ಮುಖ್ಯಸಚೇತಕರಾದ ಗಣೇಶ ಹುಕ್ಕೇರಿ, ವಿಧಾನ ಪರಿಷತ್ ವಿರೋಧಪಕ್ಷದ ಮುಖ್ಯ ಸಚೇತಕರಾದ ಮಹಾಂತೇಶ ಕವಟಿಗಿಮಠ, ಮೈಸೂರು ಮಿನಿರಲ್ಸ್ ಚೆರಮನ್ನರು ಹಾಗೂ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಶಾಸಕರಾದ ಲಕ್ಷ್ಮೀ ಹೆಬ್ಬಾಳಕರ, ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಆಶಾ ಐಹೊಳೆ, ಸರ್ಕಾರದ ಸಂಸದೀಯ ಕಾರ್ಯದರ್ಶಿಗಳು ಹಾಗೂ ಬೈಲಹೊಂಗಲ ಶಾಸಕರಾದ ಮಹಾಂತೇಶ ಕೌಜಲಗಿ, ಸರ್ಕಾರದ ಸಂಸದೀಯ ಕಾರ್ಯದರ್ಶಿಗಳು ಹಾಗೂ ಖಾನಾಪೂರ ಶಾಸಕರಾದ ಡಾ. ಅಂಜಲಿ ಹೇಮಂತ ನಿಂಬಾಳಕರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಕಾರ್ಯಕ್ರಮದಲ್ಲಿ ರಾಣಿಚೆನ್ನಮ್ಮ ವಿಶ್ವವಿದ್ಯಾಲಯ ಪಾಧ್ಯಾಪಕರು ಹಾಗು ಎಮ್.ಬಿ.ಎ ವಿಭಾಗದ ಅಧ್ಯಕ್ಷರಾದ ಪಿ.ಎಮ್. ತ್ಯಾಗರಾಜ್ ಅವರ ಉಪನ್ಯಾಸ ಇರುತ್ತದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಅನಿಲ ಬೆನಕೆ ಅವರು ವಹಿಸುವರು. ಈ ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು, ವಿಧಾನ ಸಭೆ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಹಾಗೂ ಇತರೆ ಗಣ್ಯರು ಉಪಸ್ಥಿತರಿರುವರು.
ಜಾಥಾ ಕಾರ್ಯಕ್ರಮ:
ಜುಲೈ ೧೧ ರಂದು ನಡೆಯುವ ವಿಶ್ವ ಜನಸಂಖ್ಯಾ ದಿನಾಚರಣೆಯ ಜಾಥಾ ಕಾರ್ಯಕ್ರಮ ಬೆಳಿಗ್ಗೆ ೯.೩೦ ಗಂಟೆಗೆ ಜಿಲ್ಲಾಧಿಕಾರಿಗಳ ಕಾರ್ಯಲಯದಲ್ಲಿ ಜರುಗುವುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ