*ತುಂಬಿ ಹರಿಯುತ್ತಿರುವ ಪಂಚನದಿಗಳು: 8 ಸೇತುವೆ ಮುಳುಗಡೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಜಿಲ್ಲೆಯಲ್ಲಿ ಹರಿಯುವ ಪಂಚನದಿಗಳಾದ ಕೃಷ್ಣಾ ಘಟಪ್ರಭಾ, ಮಲಪ್ರಭಾ, ವೇದಗಂಗಾ, ಮತ್ತು ದೂಧಗಂಗಾ ನದಿಗಳಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, 8 ಸೇತುವೆಗಳು ಮುಳುಗಡೆ ಆಗಿ, 18 ಗ್ರಾಮಗಳ ಸಂಪರ್ಕ ಬಂದ್ ಆಗಿದೆ.
ಚಿಕ್ಕೋಡಿ ತಾಲೂಕಿನಲ್ಲಿನ 8 ಕೆಳ ಹಂತದ ಸೇತುವೆಗಳು ಒಂದೇ ರಾತ್ರಿ ಜಲಾವೃತಗೊಂಡಿವೆ. ಇದರಿಂದ ತಾಲೂಕಿನಲ್ಲಿ 18 ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಜನರು ಪರ್ಯಾಯ ಮಾರ್ಗದಲ್ಲಿ ಸಂಚಾರ ಮಾಡುತ್ತಿದ್ದಾರೆ.
ವೇದಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಅಕ್ಕೋಳ-ಸಿದ್ನಾಳ, ಜತ್ರಾಟ-ಭೀವಶಿ, ಬಾರವಾಡ-ಕುನ್ನೂರ ಸೇತುವೆ ಜಲಾವೃತಗೊಂಡಿದೆ. ದೂದಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಕಾರದಗಾ-ಬೋಜ್, ಬೋಜವಾಡಿ-ಕುನ್ನೂರ, ಮಲ್ಲಿಕವಾಡ-ದತ್ತವಾಡ ಸೇತುವೆ ಜಲಾವೃತಗೊಂಡಿದೆ.
ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಯಕ್ಸಂಬಾ-ದತ್ತವಾಡ, ಕಲ್ಲೋಳ-ಯಡೂರ ಮತ್ತು ಬಾವನಸೌದತ್ತಿ-ಮಾಂಜರಿ ಸೇತುವೆ ಮುಳುಗಡೆಯಾಗಿದೆ.
ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ದೂದಗಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನದಿಗೆ ಅಡ್ಡಲಾಗಿ ಕಟ್ಟಿರುವ ಮಲಿಕವಾಡ-ದತ್ತವಾಡ ಸೇತುವೆ ಎರಡೇ ತಿಂಗಳಲ್ಲಿ ಆರನೇ ಬಾರಿಗೆ ಮುಳುಗಡೆಯಾಗಿದೆ.