Kannada NewsKarnataka News

*ಅತಿವೃಷ್ಟಿ- ಬರಗಾಲ ನಿರ್ವಹಣೆ- ಪೂರ್ವಸಿದ್ಧತಾ ಸಭೆ*

 *ಬಿತ್ತನೆ ಬೀಜ ದರ, ದಾಸ್ತಾನು ಮಾಹಿತಿ ಪ್ರದರ್ಶಿಸಲು ಜಿಲ್ಲಾಧಿಕಾರಿ ಸೂಚನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಜಿಲ್ಲೆಯಲ್ಲಿ ಬೀಜ ವಿತರಣಾ ಕಾರ್ಯವನ್ನು ಆರಂಭಿಸಲಾಗಿದ್ದು, ಆಯಾ ವಿತರಣಾ ಕೇಂದ್ರಗಳಲ್ಲಿ ಬೀಜ ಲಭ್ಯತೆ, ದರ ಹಾಗೂ ದಾಸ್ತಾನು ಕುರಿತು ಸ್ಪಷ್ಟ ಮಾಹಿತಿಯನ್ನು ಬೀಜ ವಿತರಣಾ ಕೇಂದ್ರದ ಆವರಣದಲ್ಲಿ ಕಡ್ಡಾಯವಾಗಿ ದೊಡ್ಡದಾದ ಫ್ಲೆಕ್ಸ್ ಮೂಲಕ ಪ್ರದರ್ಶಿಸಬೇಕು ಎಂದು ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಅತಿವೃಷ್ಟಿ, ಪ್ರವಾಹ ಹಾಗೂ ಬರಗಾಲ ನಿರ್ವಹಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ (ಜೂ.6) ನಡೆದ ಅಧಿಕಾರಿಗಳು ಹಾಗೂ ನೋಡಲ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೀಜ ವಿತರಣೆ ಆರಂಭಿಸಲಾಗಿದ್ದು, ತಹಶೀಲ್ದಾರರು, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಆಯಾ ತಾಲ್ಲೂಕಿನ ರೈತ ಸಂಪರ್ಕ ಕೇಂದ್ರಗಳು ಸೇರಿದಂತೆ ಜಿಲ್ಲೆಯಾದ್ಯಂತ ಆರಂಭಿಸಲಾಗಿರುವ 170 ಬೀಜ ವಿತರಣಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ತಿಳಿಸಿದರು.
ಬೆಳೆಹಾನಿ-ತಕ್ಷಣ ಸಮೀಕ್ಷೆ ನಡೆಸಬೇಕು:
ಬೆಳೆಹಾನಿ ಕುರಿತು ವರದಿ ಬಂದ ಕೂಡಲೇ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ 24 ಗಂಟೆಯಲ್ಲಿ ಸಮೀಕ್ಷಾ ಕಾರ್ಯವನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ಜಿಲ್ಲೆಯಲ್ಲಿ ಎಲ್ಲಿಯಾದರೂ ಕುಡಿಯುವ ನೀರಿನ ಸಮಸ್ಯೆ ಕಂಡುಬಂದ ತಕ್ಷಣವೇ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಇದಲ್ಲದೇ ಕೊಳವೆಬಾವಿ ದುರಸ್ತಿಗೂ ಕ್ರಮ ಕೈಗೊಳ್ಳಬೇಕು ಎಂದರು.
ಪ್ರವಾಹ ನಿರ್ವಹಣೆ-ಅಗತ್ಯ ಸಿದ್ಧತೆಗೆ ಸೂಚನೆ:
ಕೃಷ್ಣಾ ನದಿತೀರದ ಗ್ರಾಮಗಳಲ್ಲಿ ಸಂಭವನೀಯ ಪ್ರವಾಹದ ನಿರ್ವಹಣೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು.
ಜನರ ರಕ್ಷಣೆಗಾಗಿ ಬೋಟ್ ಗಳು ಸದಾ ಸುಸ್ಥಿತಿಯಲ್ಲಿ ಇಟ್ಟಿರಬೇಕು. ಮುಂಚಿತವಾಗಿಯೇ ಪ್ರಾಯೋಗಿಕವಾಗಿ ಪರಿಶೀಲಿಸಬೇಕು ಎಂದು ತಿಳಿಸಿದರು.
ಎಲ್ಲ ತಾಲ್ಲೂಕುಗಳಲ್ಲಿ ಕಂಟ್ರೋಲ್‌ ರೂಮ್ ಸ್ಥಾಪಿಸಿ ಸರದಿ ಆಧಾರದ ಮೇಲೆ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರ ಕರೆಗಳಿಗೆ ತುರ್ತಾಗಿ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಕಾಳಜಿ ಕೇಂದ್ರ ಭೇಟಿ ನೀಡಿ‌ ಪರಿಶೀಲಿಸಬೇಕು. ತುರ್ತು ಪರಿಸ್ಥಿತಿ ನಿರ್ವಹಣೆಗೆ ಸನ್ನದ್ಧರಾಗಿರಬೇಕು.
ಯಾವುದೇ ಕಾರಣಕ್ಕೂ ತಹಶೀಲ್ದಾರರು ಹಾಗೂ ಅಧಿಕಾರಿಗಳು ಪೂರ್ವಾನುಮತಿ ಪಡೆಯದೇ ಕೇಂದ್ರ ಸ್ಥಾನದಿಂದ ಹೊರಗೆ ಹೋಗುವಂತಿಲ್ಲ. ಅನಿವಾರ್ಯ ಸಂದರ್ಭದಲ್ಲಿ ಕಡ್ಡಾಯವಾಗಿ ಪೂರ್ವಾನುಮತಿ ಪಡೆದುಕೊಂಡು ಹೋಗಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ಪ್ರವಾಹದಿಂದ ಸಂಪೂರ್ಣವಾಗಿ ಹಾನಿಯಾಗಿರುವ ಮನೆಗಳ ನಿರ್ಮಾಣ ಪ್ರಕ್ರಿಯೆ ಆಡಿಟ್ ಹಾಗೂ ಜಿಪಿಎಸ್ ಕೆಲಸಗಳ ಪ್ರಗತಿಯನ್ನು ಪರಿಶೀಲಿಸಿದ ಅವರು, ಈ ನಿಟ್ಟಿನಲ್ಲಿ ಕೆಲಸವನ್ನು ಚುರುಕುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಸಾಕಷ್ಟು ಮೇವಿನ ದಾಸ್ತಾನು ಇರುತ್ತದೆ ಎಂದು ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಾದ ಡಾ.ರಾಜೀವ್ ಕೂಲೇರ್ ಸಭೆಯಲ್ಲಿ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಕೆ‌.ಟಿ.ಶಾಂತಲಾ, ಡಿಸಿಪಿ ಸ್ನೇಹಾ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೇಣುಗೋಪಾಲ್ , ಜಿಲ್ಲಾ ಪಂಚಾಯತ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲೆಯ ಎಲ್ಲ ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರರು, ಪ್ರವಾಹ ಸಿದ್ಧತೆಗೆ ಸಂಬಂಧಿಸಿದ ನೋಡಲ್ ಅಧಿಕಾರಿಗಳು ವಿಡಿಯೋ ಸಂವಾದದ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು.

 

 

https://pragati.taskdun.com/the-much-awaited-grilahakshmi-yojana-order-announced/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button