*ಕೆಇಆರ್ಸಿ ಕರಡು ನಿಯಮಾವಳಿಗೆ ಸಾರ್ವಜನಿಕರಿಂದ ಆಕ್ಷೇಪ, ಸಲಹೆಗಳ ಮಹಾಪೂರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಕರಡು ನಿಯಮಾವಳಿಗಳು ವಿವಿಧ ಗ್ರಾಹಕರಿಗೆ ವಿದ್ಯುತ್ ಸರಬರಾಜು ಮಾಡುವ ವಿಷಯಗಳನ್ನು ನಿಯಂತ್ರಿಸುವ ಉದ್ದೇಶದೊಂದಿಗೆ, ಹೊಸ ಸಂಪರ್ಕಗಳನ್ನು ಮಂಜೂರು ಮಾಡುವ ಕಾರ್ಯವಿಧಾನ, ಸಂಪರ್ಕ ಕಡಿತ, ಮರು ಸಂಪರ್ಕ, ಮಂಜೂರಾದ ಲೋಡನ್ ಮೌಲ್ಯಮಾಪನ ಮತ್ತು ಮಾರ್ಪಾಡು, ಹೆಸರು ಬದಲಾವಣೆ, ದರದ ವರ್ಗದ ಬದಲಾವಣೆ, ಅನಧಿಕೃತ ಬಳಕೆಯ ಸಕ್ರಮಗೊಳಿಸುವಿಕೆ ಮತ್ತು ಅಸ್ತಿತ್ವದಲ್ಲಿರುವ ಸೇವಾ ಸಂಪರ್ಕಗಳಲ್ಲಿನ ಬದಲಾವಣೆ ಒಳಗೊಂಡಿರುತ್ತದೆ ಎಂದು ಕೆಇಆರ್ಸಿ ಅಧ್ಯಕ್ಷ ಪಿ. ರವಿಕುಮಾರ್ ತಿಳಿಸಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಬುಧವಾರ(ಅ.07) ಜರುಗಿದ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್ಸಿ) ರೂಪಿಸಿರುವ ಕರಡು ವಿದ್ಯುತ್ ಸರಬರಾಜು ನಿಯಮಾವಳಿಗಳ ಕುರಿತು ಸಾರ್ವಜನಿಕ ವಿಚಾರಣೆ ಸಭೆಯಲ್ಲಿ ಅವರು ಮಾತನಾಡಿದರು.
ಕರಡು ನಿಯಮಾವಳಿಗಳು ಗ್ರಾಹಕರ ಮೀಟರಿಂಗ್, ಬಿಲ್ಲಿಂಗ್ ಮತ್ತು ವಿದ್ಯುತ್ ಶುಲ್ಕಗಳ ಪಾವತಿಗೆ ಸಂಬಂಧಿಸಿದ ಪದ್ಧತಿಗಳನ್ನೂ ಸಹ ನಿಯಮಬದ್ಧಗೊಳಿಸುತ್ತವೆ. ಕಾನೂನಿಗೆ ಅನುಸಾರವಾಗಿ ಗ್ರಾಹಕರಿಂದ ವಸೂಲಿ ಮಾಡಬಹುದಾದ ಶುಲ್ಕ ರಚನೆ, ಭದ್ರತಾ ಠೇವಣಿಗಳು ಮತ್ತು ಇತರೆ ಮೊತ್ತಗಳನ್ನು ನಿರ್ದಿಷ್ಟ ಪಡಿಸುತ್ತವೆ.
ಗ್ರಾಹಕರ ಹಾಗೂ ವಿದ್ಯುತ್ ಗುತ್ತಿಗೆದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡೇ ಕೆಇಆರ್ ನಿಯಮಾವಳಿಗಳನ್ನು ರೂಪಿಸುತ್ತಿದ್ದು, ಯಾವುದೇ ಕಾರಣಕ್ಕೂ ಗ್ರಾಹಕರಿಗೆ ಹಾಗೂ ವಿದ್ಯುತ್ ಗುತ್ತಿಗೆದಾರರಿಗೆ ತೊಂದರೆ ಉಂಟುಮಾಡುವ ಉದ್ದೇಶ ಆಯೋಗಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು. ಸಭೆಯಲ್ಲಿ ಸ್ವೀಕರಿಸಲಾದ ಅಹವಾಲುಗಳನ್ನು ಗಣನೆಗೆ ತೆಗೆದುಕೊಂಡು ಗ್ರಾಹಕರಿಗೆ ಹಾಗೂ ವಿದ್ಯುತ್ ಗುತ್ತಿಗೆದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಆನ್ಲೈನ್ ವ್ಯವಸ್ಥೆ ಸರಳಗೊಳಿಸಲು ಮನವಿ
ಸಭೆಯಲ್ಲಿ ವಿದ್ಯುತ್ ಗುತ್ತಿಗೆದಾರರು, ಸಾರ್ವಜನಿಕರು ಹಾಗೂ ರೈತರು ಗ್ರಾಮೀಣ ಭಾಗದ ಗ್ರಾಹಕರಿಗೆ ಆನ್ಲೈನ್ ವ್ಯವಸ್ಥೆ ಬಳಸುವಲ್ಲಿ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ತಾಂತ್ರಿಕ ಅರಿವು ಕಡಿಮೆ ಇರುವ ಹಿನ್ನೆಲೆಯಲ್ಲಿ ಆನ್ಲೈನ್ ಪ್ರಕ್ರಿಯೆಗಳನ್ನು ಸರಳಗೊಳಿಸಬೇಕು. ಸರ್ವರ್
ಸಮಸ್ಯೆಗಳು ಹಾಗೂ ತಾಂತ್ರಿಕ ಅಡಚಣೆಗಳಿಂದ ಗ್ರಾಹಕರು ಮತ್ತು ಗುತ್ತಿಗೆದಾರರು ತೊಂದರೆ ಅನುಭವಿಸುತ್ತಿದ್ದು, ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದು ಮನವಿ ಮಾಡಿದರು.
ಡಿಜಿಟಲ್ ಪ್ರಮಾಣೀಕರಣ ಹಾಗೂ ಆನ್ಲೈನ್ ಮೂಲಕ ನಡೆಯುವ ವಿವಿಧ ಪ್ರಕ್ರಿಯೆಗಳನ್ನು ಗ್ರಾಹಕರಿಗೆ ಅನುಕೂಲವಾಗುವ ರೀತಿಯಲ್ಲಿ ರೂಪಿಸಬೇಕು. ಅಗತ್ಯವಿರುವ ಕಡೆಗಳಲ್ಲಿ ನೇರವಾಗಿ ಸೇವೆ ಪಡೆಯುವ ಅವಕಾಶ ಮುಂದುವರಿಸಬೇಕು ಎಂದು ಸಾರ್ವಜನಿಕರು ಸಲಹೆ ನೀಡಿದರು.
ಗುತ್ತಿಗೆದಾರರ ಸಮಸ್ಯೆಗಳ ಬಗ್ಗೆ ಪ್ರಸ್ತಾಪ
ಕರಡು ನಿಯಮಾವಳಿಗಳಲ್ಲಿನ ಕೆಲವು ಪ್ರಸ್ತಾವನೆಗಳಿಂದ ವಿದ್ಯುತ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆದಾರರು ಹಾಗೂ ಅವರ ಮೇಲೆ ಅವಲಂಬಿತ ಕುಟುಂಬಗಳ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕವನ್ನು ಗುತ್ತಿಗೆದಾರರು ವ್ಯಕ್ತಪಡಿಸಿದರು. ಹಲವು ವರ್ಷಗಳಿಂದ ಇಲಾಖೆಯ ವಿವಿಧ ಕಾರ್ಯಗಳಲ್ಲಿ ಗುತ್ತಿಗೆದಾರರು ಸೇವೆ ಸಲ್ಲಿಸುತ್ತಿದ್ದು, ಅವರ ಅನುಭವ ಮತ್ತು ಸೇವೆಯನ್ನು ಪರಿಗಣಿಸಿ ನಿಯಮಗಳನ್ನು ರೂಪಿಸಬೇಕು ಎಂದು ಮನವಿ ಮಾಡಿದರು.
ಕೆಲವು ವ್ಯವಸ್ಥೆಗಳಲ್ಲಿ ಗುತ್ತಿಗೆದಾರರ ಜವಾಬ್ದಾರಿಗಳನ್ನು ಬದಲಾಯಿಸುವ ಅಥವಾ ಹೆಚ್ಚಿಸುವ ಪ್ರಸ್ತಾವನೆಗಳಿಂದ ಕಾರ್ಯನಿರ್ವಹಣೆಯಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ವಾಸ್ತವ ಪರಿಸ್ಥಿತಿಯನ್ನು ಪರಿಗಣಿಸಿ ನಿಯಮಗಳನ್ನು ಅಂತಿಮಗೊಳಿಸಬೇಕು ಎಂದು ಮನವಿ ಮಾಡಿದರು.
ವಿದ್ಯುತ್ ಉಪಕರಣಗಳ ದುರಸ್ತಿ ಕುರಿತು ಸಲಹೆ
ವಿದ್ಯುತ್ ಪರಿವರ್ತಕ (ಟಿಸಿ) ಸೇರಿದಂತೆ ಇಲಾಖೆಗೆ ಸಂಬಂಧಿಸಿದ ಉಪಕರಣಗಳು ಹಾನಿಗೊಳಗಾದ ಸಂದರ್ಭದಲ್ಲಿ ಅವುಗಳ ದುರಸ್ತಿ ಹಾಗೂ ನಿರ್ವಹಣೆಯ ಜವಾಬ್ದಾರಿ ಗ್ರಾಹಕರ ಮೇಲೆ ಬೀಳದಂತೆ ಸ್ಪಷ್ಟ ನಿಯಮ ರೂಪಿಸಬೇಕು. ವಿದ್ಯುತ್ ಸೇವೆಗೆ ಸಂಬಂಧಿಸಿದ ದೂರುಗಳನ್ನು ಸೆಕ್ಷನ್ ಅಧಿಕಾರಿಗಳು ಹಾಗೂ ಎಇಇ ಮಟ್ಟದ ಅಧಿಕಾರಿಗಳು ತ್ವರಿತವಾಗಿ ಪರಿಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.
ಸಭೆಯಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಖಾಸಗೀಕರಣಕ್ಕೆ ಸಂಬಂಧಿಸಿದ ಆತಂಕಗಳನ್ನೂ ವ್ಯಕ್ತಪಡಿಸಿದರು. ವಿದ್ಯುತ್ ಸರಬರಾಜು ವ್ಯವಸ್ಥೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಮತ್ತು ಸರ್ಕಾರಿ ವ್ಯವಸ್ಥೆಯ ರಕ್ಷಣೆಗೆ ಆದ್ಯತೆ ನೀಡಬೇಕು. ವಿದ್ಯುತ್ ಸೇವೆಯ ಗುಣಮಟ್ಟದ ಜೊತೆಗೆ ಗ್ರಾಹಕರ ಹಕ್ಕುಗಳು ಮತ್ತು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ, ಗುತ್ತಿಗೆದಾರರ ಹಿತಾಸಕ್ತಿಯನ್ನೂ ಪರಿಗಣಿಸಬೇಕು ಎಂದು ಹೇಳಿದರು.
ವೈರ್ಮನ್ಗಳ ಸುರಕ್ಷತೆ, ಪರಿಹಾರದ ಬಗ್ಗೆ ಗಮನ
ಕರಡು ನಿಯಮಾವಳಿಗಳಲ್ಲಿ ವಿದ್ಯುತ್ ವೈರ್ಮನ್ಗಳ ಸುರಕ್ಷತೆ ಹಾಗೂ ಅವರಿಗೆ ದೊರೆಯಬೇಕಾದ ಪರಿಹಾರದ ಕುರಿತು ಹೆಚ್ಚಿನ ಸ್ಪಷ್ಟತೆ ಅಗತ್ಯವಿದೆ. ಅನಾಹುತ ಅಥವಾ ಸಾವು-ನೋವು ಸಂಭವಿಸಿದ ಸಂದರ್ಭದಲ್ಲಿ ಸಂಬಂಧಪಟ್ಟ ಕಾರ್ಮಿಕರು ಹಾಗೂ ಅವರ ಕುಟುಂಬಗಳಿಗೆ ಸೂಕ್ತ ರಕ್ಷಣೆ ಮತ್ತು ಪರಿಹಾರ ದೊರೆಯುವಂತೆ ನಿಯಮಾವಳಿಗಳನ್ನು ರೂಪಿಸಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ರೈತರು, ಗ್ರಾಹಕರು, ಗುತ್ತಿಗೆದಾರರು ಹಾಗೂ ಸಾರ್ವಜನಿಕರು ವಿದ್ಯುತ್ ಸರಬರಾಜು ವ್ಯವಸ್ಥೆ, ಆನ್ಲೈನ್ ಸೇವೆಗಳು, ಗುತ್ತಿಗೆ ಕಾಮಗಾರಿಗಳು, ಗ್ರಾಹಕರ ಜವಾಬ್ದಾರಿ ಮತ್ತು ಸಿಬ್ಬಂದಿಯ ಕಾರ್ಯನಿರ್ವಹಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ತಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ವ್ಯಕ್ತಪಡಿಸಿದರು.
ಸಾರ್ವಜನಿಕರಿಂದ ಸ್ವೀಕರಿಸಲಾದ ಸಲಹೆ, ಆಕ್ಷೇಪಗಳನ್ನು ಪರಿಶೀಲಿಸಿ, ಗ್ರಾಹಕರಿಗೆ ಅನುಕೂಲವಾಗುವ ಹಾಗೂ ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಗೊಳಿಸುವ ನಿಟ್ಟಿನಲ್ಲಿ ಅಂತಿಮ ನಿಯಮಾವಳಿಗಳನ್ನು ರೂಪಿಸಲಾಗುವುದು ಎಂದು ಕೆಇಆರ್ಸಿ ಅಧ್ಯಕ್ಷ ಪಿ. ರವಿಕುಮಾರ್ ತಿಳಿಸಿದರು.
ಸಭೆಯಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಸದಸ್ಯರಾದ ಎಚ್ ಕೆ ಜಗದೀಶ್ ಹಾಗೂ ಜಾವೀದ್ ಅರ್, ವಿದ್ಯುತ್ ಗುತ್ತಿಗೆದಾರರು, ರೈತ ಸಂಘಟನೆಯ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ


