Kannada NewsKarnataka NewsLatest

ಸಂತ್ರಸ್ತರ ಪುನರ್ವಸತಿ; ಉಭಯ ಸಚಿವರಿಂದ ಜಿಲ್ಲಾ ಮಟ್ಟದ ಸಭೆ

ಸಂತ್ರಸ್ತರ ಪುನರ್ವಸತಿ; ಉಭಯ ಸಚಿವರಿಂದ ಜಿಲ್ಲಾ ಮಟ್ಟದ ಸಭೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಪ್ರವಾಹದಿಂದ ಸಂತ್ರಸ್ತರಾಗಿರುವ ಜನರಿಗೆ ಮನೆ ಹಾಗೂ ಬೆಳೆವಿಮೆ ಒದಗಿಸುವುದು ನಮ್ಮ ಮುಂದಿನ ದೊಡ್ಡ ಸವಾಲು ಇದೆ. ಪರಿಹಾರ ಮೊತ್ತ ಹೆಚ್ಚಳ ಹಾಗೂ ಪುನರ್ವಸತಿಗೆ ಸಂಬಂಧಿಸಿದಂತೆ ಇರುವ ತಾಂತ್ರಿಕ ಅಡೆತಡೆಗಳನ್ನು ನಿವಾರಿಸಲು ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಲಕ್ಷ್ಮಣ ಸವದಿ ಹೇಳಿದರು.

ಜಿಲ್ಲೆಯ ಪ್ರವಾಹ ಬಾಧಿತ ತಾಲ್ಲೂಕುಗಳಿಗೆ ಭೇಟಿ ನೀಡಿದ ಬಳಿಕ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಜನರ ರಕ್ಷಣೆ ಹಾಗೂ ಪರಿಹಾರ ಕೇಂದ್ರಗಳ ಮೂಲಕ ಊಟೋಪಹಾರ ಮತ್ತು ಉತ್ತಮ ಸೌಲಭ್ಯ ಒದಗಿಸಲಾಗಿದೆ.

ಸಂತ್ರಸ್ತರಿಗೆ ಸೂಕ್ತ ಪರಿಹಾರ, ಪುನರ್ವಸತಿ ಸ್ಥಳಾಂತರಕ್ಕೆ ಅಗತ್ಯವಿರುವ ನಿಯಮಾವಳಿಗಳ ವಿನಾಯಿತಿ ಅಥವಾ ಮಾರ್ಪಾಡು ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಕ್ರಮ ಕೈಕೊಳ್ಳಲಾಗುವುದು ಎಂದರು.

ಆರೋಗ್ಯ ಸಮಸ್ಯೆ ಉದ್ಭವಿಸದಂತೆ ಮುಂಜಾಗ್ರತೆ ವಹಿಸಬೇಕು. ಮುಂಬರುವ ದಿನಗಳಲ್ಲಿ ರಸ್ತೆ ಸಂಚಾರ ಕಡಿತವಾಗದಂತೆ ಹಾಗೂ ನೀರು ಸರಾಗವಾಗಿ ಹರಿಯುವಂತೆ ಫ್ಲೈ ಓವರ್ ಮಾದರಿಯಲ್ಲಿ ಸೇತುವೆಗಳನ್ನು ನಿರ್ಮಿಸಬೇಕಿದೆ ಎಂದು ಚಿಕ್ಕೋಡಿ ಉಪ ವಿಭಾಗದ ಪ್ರವಾಹ ನಿರ್ವಹಣೆ ಉಸ್ತುವಾರಿ ವಹಿಸಿರುವ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಶಾಶ್ವತ ಸ್ಥಳಾಂತರ ಕುರಿತು ಕೆಲವು ಗ್ರಾಮಸ್ಥರ ಬೇಡಿಕೆಯ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸುವುದಾಗಿ ತಿಳಿಸಿದರು.
ಶಿಥಿಲಗೊಂಡ ಶಾಲೆಗಳ ದುರಸ್ತಿ ಅಥವಾ ಪುನರ್ ನಿರ್ಮಾಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವೆ ಜೊಲ್ಲೆ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೈಲ್ವೆ ಖಾತೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಅವರು, ಪರಿಹಾರ ವಿತರಣೆಗೆ ಅಗತ್ಯವಿರುವ ದಾಖಲಾತಿಗಳಿಗೆ ಒತ್ತು ನೀಡದೇ ಆದಷ್ಟು ಬೇಗ ಪರಿಹಾರ ತಲುಪಿಸುವ ಕೆಲಸ ಮಾಡಬೇಕು ಎಂದರು.

ದಾಖಲೆಗಳಿಗೆ ವಿನಾಯಿತಿ ನೀಡಲು ಮನವಿ:

ಈಗಾಗಲೇ ಶೇ. 50 ರಷ್ಟು ಮನೆ ಕುಸಿದಿದ್ದರೆ ಅದನ್ನು ಸಂಪೂರ್ಣ ಕುಸಿತ ಎಂದು ಪರಿಗಣಿಸಬೇಕು. ಕರ ಪಾವತಿ ದಾಖಲೆ ಸೇರಿದಂತೆ ಇತರೆ ದಾಖಲೆಗಳನ್ನು ಕಡ್ಡಾಯವಾಗಿ ನೀಡಬೇಕು ಎಂಬುದಕ್ಕೆ ವಿನಾಯಿತಿ ನೀಡಬೇಕು ಎಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ್ ಬೆನಕೆ ಒತ್ತಾಯಿಸಿದರು.

ಸವದತ್ತಿ ಶಾಸಕ ಆನಂದ ಮಾಮನಿ ಮಾತನಾಡಿ, “ಮನೆಗಳ ಹಾನಿ, ಶಾಲೆಗಳು- ಸರ್ಕಾರಿ ಆಸ್ತಿಪಾಸ್ತಿಗಳ ನಷ್ಟ ಮತ್ತು ಜಾನುವಾರುಗಳನ್ನು ಕಳೆದುಕೊಂಡಿರುವವರಿಗೆ ಹೆಚ್ಚಿನ ಪ್ರಮಾಣದ ಪರಿಹಾರ ನೀಡುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಸರ್ಕಾರದ ಗಮನವನ್ನು ಸೆಳೆಯಬೇಕಿದೆ ಎಂದು ಪ್ರತಿಪಾದಿಸಿದರು.

ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ಅವರು ಮಾತನಾಡಿ, 29 ಗ್ರಾಮಗಳು ಹಾಗೂ ಪಟ್ಟಣದ ಕೆಲವು ವಾರ್ಡಗಳು ಪ್ರವಾಹದಿಂದ ಬಾಧಿತಗೊಂಡಿದ್ದು, 50 ಸಾವಿರ ಜನರು ನಿರಾಶ್ರಿತರಾಗೊಂಡಿದ್ದಾರೆ. ತಕ್ಷಣ ಪುನರ್ವಸತಿಗೆ ಕೂಡಲೇ ಶೆಡ್ ನಿರ್ಮಿಸಿಕೊಡಬೇಕು ಎಂದು ಮನವಿ ಮಾಡಿಕೊಂಡರು.

ಬೈಲಹೊಂಗಲ ಶಾಸಕರಾದ ಮಹಾಂತೇಶ ಕೌಜಲಗಿ ಅವರು, ಈಗಾಗಲೇ ಸಮೀಕ್ಷೆ ಮಾಡಲಾಗಿದ್ದು, ಮತ್ತೆ ಆಪ್ ಆಧಾರಿತ ಸಮೀಕ್ಷೆ ಕೈಗೊಳ್ಳದೇ ಹಳೆಯ ಸಮೀಕ್ಷೆ ಪ್ರಕಾರ ಪರಿಹಾರ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದರು.
ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ, ರಸ್ತೆ-ಸೇತುವೆಗಳ ಹಾನಿಯಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಪ್ರವಾಹ ಬಾಧಿತ ಗ್ರಾಮಗಳಿಗೆ ತಕ್ಷಣ ಸಂಪರ್ಕ ಕಲ್ಪಿಸಲು ಆದ್ಯತೆ ನೀಡಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠ, ಕರ್ನಾಟಕ ಮತ್ತು ಮಹಾರಾಷ್ಟ್ರ ಜಲಾಶಯಗಳಲ್ಲಿ ಒಳಹರಿವು ಮತ್ತು ಹೊರಹರಿವು ಪ್ರಮಾಣವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಉಭಯ ರಾಜ್ಯಗಳ ನಡುವೆ ಶಾಶ್ವತ ಒಪ್ಪಂದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಪ್ರಾಥಮಿಕ ಅಂದಾಜಿನ ಪ್ರಕಾರ ಜಿಲ್ಲೆಯಲ್ಲಿ 42733 ಮನೆಗಳಿಗೆ ಹಾನಿಯಾಗಿದ್ದು, 96458 ಕುಟುಂಬಗಳು ಪ್ರವಾಹದಿಂದ ಬಾಧಿತಗೊಂಡಿವೆ. ಇದರಲ್ಲಿ 42317 ಕುಟುಂಬಗಳಿಗೆ ತಲಾ ಹತ್ತು ಸಾವಿರ ರೂಪಾಯಿ ಪರಿಹಾರ ನೀಡಲಾಗಿದೆ. ಉಳಿದ ಕುಟುಂಬಗಳಿಗೆ ನಾಳೆ ಸಂಜೆಯವರೆಗೆ ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ‌.ಎಸ್.ಬಿ.ಬೊಮ್ಮನಹಳ್ಳಿ ಮಾಹಿತಿಯನ್ನು ನೀಡಿದರು.
ಇದುವರೆಗೆ 28 ಕೋಟಿ ರೂಪಾಯಿ ಒಟ್ಟಾರೆ ಪರಿಹಾರ ನೀಡಲಾಗಿದೆ.

ಪ್ರವಾಹ ಪರಿಸ್ಥಿತಿ ನಿರ್ವಹಣೆ ಮತ್ತು ಪರಿಹಾರ ವಿತರಣೆಗಾಗಿ ಇದುವರೆಗೆ 127 ಕೋಟಿ ರೂಪಾಯಿ ಅನುದಾನವನ್ನು ಜಿಲ್ಲೆಯ ಎಲ್ಲ ತಹಶೀಲ್ದಾರರಿಗೆ ಬಿಡುಗಡೆ ಮಾಡಲಾಗಿದೆ.

ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸುವುದರ ಜತೆಗೆ ಸಂತ್ರಸ್ತರ ಪುನರ್ವಸತಿಗೆ ಜಿಲ್ಲಾಡಳಿತ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ತಿಳಿಸಿದರು.

ಜಿಲ್ಲಾಡಳಿತದ ಕೆಲಸಕ್ಕೆ ಮೆಚ್ಚುಗೆ:
ಎಂದೂ ಕಂಡರಿಯದ ಪ್ರವಾಹದಿಂದ ತತ್ತರಿಸಿದ ಜಿಲ್ಲೆಯಲ್ಲಿ ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಹಗಲಿರುಳು ಶ್ರಮಿಸುವ ಮೂಲಕ ಅತ್ಯುತ್ತಮ ಕೆಲಸ ಮಾಡಿದ್ದಾರೆ ಎಂದು ಎಲ್ಲ ಸಚಿವರು ಹಾಗೂ ಶಾಸಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಇದೊಂದು ವಿಶೇಷ ಸವಾಲಾಗಿದ್ದು, ಅಧಿಕಾರಿಗಳು ಇದೇ ರೀತಿ ಸಂತ್ರಸ್ತರ ಪುನರ್ವಸತಿ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್ ಸಿಂಗ್, ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ, ಉಪಾಧ್ಯಕ್ಷ ಅರುಣ ಕಟಾಂಬಳೆ, ಪೊಲೀಸ್ ಆಯುಕ್ತರಾದ ಬಿ‌.ಎಸ್.ಲೋಕೇಶ್ ಕುಮಾರ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ., ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸಭೆಯಲ್ಲಿ ಪಾಲ್ಗೊಂಡಿದ್ದರು.///

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button