ಪ್ರವಾಹ ಪರಿಹಾರ ಚಿಂತನ, ಮಂಥನ, ಅನುಷ್ಠಾನ
ಪ್ರಗತಿವಾಹಿ ಬೆಳಗಾವಿ
ಬೆಳಗಾವಿಯಲ್ಲಿ ಭೀಕರ ಮಳೆ ಹಾಗೂ ಪ್ರವಾಹದಿಂದ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. ಸರಕಾರದಿಂದ ಈಗಾಗಲೇ ಪರಿಹಾರ ನೀಡುತ್ತಿದೆ. ಶೀಘ್ರದಲ್ಲಿ ಹುಕ್ಕೇರಿ ಶ್ರೀಗಳ ನೇತೃತ್ವದಲ್ಲಿ ನಡೆದ ಚಿಂತನ, ಮಂಥನ ಅನುಷ್ಠಾನದ ನಿರ್ಣಯವನ್ನು ಸರಕಾರದ ಮುಂದೆ ಇಡಲಾಗುವುದು ಎಂದು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ್ ಬೆನಕೆ ಹೇಳಿದರು.
ಭಾನುವಾರ ನಗರದ ಲಕ್ಷ್ಮೀ ಟೆಕಡಿಯ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಭಾರಿ ಮಳೆ, ನೆರೆ ಹಾವಳಿ, ಹಾಗೂ ಅದರಿಂದಾದ ಹಾನಿ ಹಾಗೂ ಪರಿಹಾರದ ವಿಷಯವಾಗಿ ಚಿಂತನ, ಮಂಥನ, ಅನುಷ್ಠಾನ ಸಭೆಯಲ್ಲಿ ಮಾತನಾಡಿದರು. ಬೆಳಗಾವಿ ಜಿಲ್ಲೆಯಲ್ಲಿ ಕಳೆದ ೨೦ ದಿನಗಳ ಹಿಂದೆ ನಗರದ ಉತ್ತರ ಹಾಗೂ ದಕ್ಷಿಣ ಕ್ಷೇತ್ರದಲ್ಲಿ ಹಾನಿಯಾಗಿದೆ. ಅಲ್ಲದೆ ಅತೀ ಹೆಚ್ಚು ಹಾನಿಯಾಗಿರುವುದು ಚಿಕ್ಕೋಡಿ, ರಾಮದುರ್ಗ ಹಾಗೂ ಗೋಕಾಕ ತಾಲೂಕಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. ಇದು ಸರಕಾರ ಮಟ್ಟದಲ್ಲಿ ಹೆಚ್ಚಿನ ಪರಿಹಾರ ನೀಡಲು ಶ್ರಮಿಸುತ್ತಿದೆ ಎಂದರು.
ಸರಕಾರಕ್ಕೆ ವರದಿ –ಹುಕ್ಕೇರಿ ಹಿರೇಮಠದ ಶ್ರೀ ಸರಕಾರಕ್ಕೆ ವರದಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಪ್ರವಾಹದ ಹಾನಿ ಕುರಿತಾಗಿ ಚಿಂತನ ಮಂಥನ ನಡೆಸಿ ಸರಕಾರಕ್ಕೆ ವರದಿ ಕಳುಹಿಸಿ ಕೊಡಲಾಗುವುದು ಎಂದರು.
ಈಗಾಗಲೇ ಸಿಎಂ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವರಾದ ಅಮಿತ್ ಶಾ, ನಿರ್ಮಲಾ ಸಿತಾರಾಂ ಬೆಳಗಾವಿ ಜಿಲ್ಲೆಗೆ ಆಗಮಿಸಿ ಸಮೀಕ್ಷೆ ನಡೆಸಿ ಹೋಗಿದ್ದಾರೆ. ಅಲ್ಲದೆ ಕೇಂದ್ರದ ನೆರೆ ತಂಡವೂ ಸಹ ಆಗಮಿಸಿ ಹಾನಿಯಾದ ಬಗ್ಗೆ ವರದಿ ಮಾಡಿಕೊಂಡು ಹೋಗಿದ್ದಾರೆ. ಶೀಘ್ರದಲ್ಲೇ ಕೇಂದ್ರ ಸರಕಾರದ ಮುಂದೆ ಇಟ್ಟು ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ನೀಡುವ ವಿಶ್ವಾಸ ಇದೆ ಎಂದರು.
ಪ್ರತಿ ಹತ್ತು ವರ್ಷಕ್ಕೊಮ್ಮೆ ಬೆಳಗಾವಿಯಲ್ಲಿ ಇಂಥ ಪರಿಸ್ಥಿಯನ್ನು ಎದುರಿಸುತ್ತಿದ್ದೇವೆ. ಇದನ್ನು ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಇನ್ನೂ ಹೆಚ್ಚು ಚಿಂತನೆ ನಡೆಯಬೇಕು ಎಂದರು.
ಹುಕ್ಕೇರಿ ಹಿರೇಮಠದ ಪ್ಲಾಸ್ಟಿಕ್ ಮುಕ್ತ ಅಭಿಯಾನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯರೂಪಕ್ಕೆ ತರುತ್ತಿರುವುದು ಅಭಿಮಾನದ ಸಂಗತಿ. ಶ್ರೀಮಠದಿಂದ ನ.೧೭ರಿಂದ ಆರಂಭವಾಗಿರುವ ಈ ಅಭಿಯಾನ ಗೋವಾ, ಮಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯ ಪ್ರದೇಶ ದಲ್ಲಿ ಶ್ರೀಗಳು ಹೋಗಿ ಶ್ರಮಿಸಿದ್ದಾರೆ. ನಾವೆಲ್ಲರೂ ಗಣೇಶ ಹಬ್ಬದ ದಿನಂದು ಎಲ್ಲರೂ ಪಾಸ್ಟಿಕ್ ತ್ಯಜಿಸುವಂತೆ ಇಂದಿನಿಂದಲೇ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.
ಚಿಂತನೆಯಾಗುತ್ತಿಲ್ಲ
ಬಿಜೆಪಿ ಮುಖಂಡ ರಾಜಕುಮಾರ ಟೋಪಣ್ಣವರ ಮಾತನಾಡಿ, ಬೆಳಗಾವಿ ಗ್ರಾಮೀಣ ಭಾಗದ ಜಳಚರಂಡಿಗಳು ಒತ್ತುವರಿಯಾಗಿವೆ. ಇದರಿಂದ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗುತ್ತೆ. ಈ ಕುರಿತು ಬೆಳಗಾವಿ ಸ್ಮಾಟ್೯ ಸಿಟಿಯಲ್ಲಿ ಹಾಗೂ ಪಾಲಿಕೆಯಲ್ಲಿಯೂ ಚಿಂತನೆಯಾಗುತ್ತಿಲ್ಲ. ಇದರ ಬಗ್ಗೆ ಹೆಚ್ಚಿನ ಒತ್ತು ನೀಡುವ ಅಗತ್ಯ ಇದೆ ಎಂದರು.
ಎಲ್ಲ ಕಡೆ ಮರಗಳನ್ನು ಕಡಿಯುತ್ತಿದ್ದಾರೆ. ನದಿಗಳ ಪಕ್ಕದಲ್ಲಿ ಅತೀ ಹೆಚ್ಚು ಮರಗಳನ್ನು ಹಚ್ಚಿ ಬೆಳೆಸಬೇಕು. ಅರಣ್ಯದಲ್ಲಿ ಮರಗಳ ಮಾರಣ ಹೋಮ ಮಾಡುತ್ತಿರುವುದರಿಂದ ಇಂಥ ಘಟನೆಗಳು ಪದೇ ಪದೇ ಜರುಗುತ್ತಿವೆ ಈ ಕುರಿತು ಗಂಭೀರವಾಗಿ ಚರ್ಚೆ ನಡೆಸಬೇಕಿದೆ ಎಂದು ಸಲಹೆ ನೀಡಿದರು.
ಬಿಜೆಪಿ ಮುಖಂಡ ಆರ್.ಎಸ್.ಮುತಾಲಿಕ ದೇಸಾಯಿ ಮಾತನಾಡಿ, ನದಿ ಪ್ರವಾಹ ಹೊಸತೇನಲ್ಲ. ಪ್ರತಿ ಹತ್ತು ವರ್ಷಕ್ಕೊಮ್ಮೆ ಇಂಥ ಘಟನೆ ಎದುರಿಸುತ್ತಿದ್ದೇವೆ. ಆದರೆ ಇಂಥ ಸಂದರ್ಭದಲ್ಲಿ ನೀರು ಇಲ್ಲದ ಪ್ರದೇಶದಲ್ಲಿ ಆ ನೀರನ್ನು ಹರಿಸುವ ಪ್ರಯತ್ನದ ಚಿಂತನೆ ನಡೆಸಬೇಕಿದೆ.
ಬೆಳಗಾವಿಯಲ್ಲಿ ಸಪ್ತ ನದಿಗಳು ಹರಿಯುತ್ತವೆ. ಈ ನೀರನ್ನು ಸಂಗ್ರಹ ಮಾಡುವ ಯೋಜನೆಯನ್ನು ಸರಕಾರದ ಮಟ್ಟದಲ್ಲಿ ಚಿಂತನೆಯಾಗಬೇಕು. ಮಹದಾಯಿ ಯೋಜನೆಯ ಕುರಿತಾಗಿ ಕೇಂದ್ರ ಸರಕಾರದಲ್ಲಿ ಚಿಂತನೆ ನಡೆಸುತ್ತಿದೆ. ಅಲ್ಲದೆ ಅದು ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ ಎಂದರು.
ನದಿ ದಡದಲ್ಲಿರುವ ಗ್ರಾಮಗಳ ಸ್ಥಳಾಂತರ ಮಾಡುವಾಗ ಅಲ್ಲಿನ ಜನರ ವಿಶ್ವಾಸ ವ್ಯಕ್ತಪಡಿಸುವ ಚಿಂತನೆಯಾಗಬೇಕು. ಮಳೆಯಾಗಲಿ, ಬರಗಾಲದ ಸಂದರ್ಭದ ಎದುರಿಸುವ ಸಮಸ್ಯೆಯ ಬಗ್ಗೆ ಸುದೀರ್ಘ ಚರ್ಚೆ ನಡೆಸಿ ಶಾಶ್ವತ ಪರಿಹಾರ ಕಂಡುಕೊಳ್ಳುವಂತಾಗಬೇಕೆಂದು ಸಲಹೆ ನೀಡಿದರು.
ಶಾಶ್ವತ ಪರಿಹಾರ
ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹುಕ್ಕೇರಿ ಹಿರೇಮಠದಿಂದಲೇ ಪ್ಲಾಸ್ಟಿಕ್ ಮುಕ್ತ ಭಾರತ ನಡೆಸಿ, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಅವರಿಗೂ ಪ್ಲಾಸ್ಟಿಕ್ ಮುಕ್ತ ಆಂದೋಲನ ನಡೆಸಿದ್ದೇವೆ. ಅದರಂತೆ ನೆರೆ ಹಾವಳಿಯ ಬಗ್ಗೆ ಸಾಕಷ್ಟು ಚಿಂತನೆ ನಡೆಸಿ ಸರಕಾರ ಮಟ್ಟದಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸುವುದು ಎಲ್ಲರ ಜವಾಬ್ದಾರಿ ಎಂದರು.
ಪ್ರವಾಹ ಪೀಡಿತ ಜನರ ಸಂಕಷ್ಟ ನೋಡುಲು ಸಾಧ್ಯವಾಗಲಿಲ್ಲ. ಸ್ವತಃ ನಾನೆ ಮುಂದೆ ನಿಂತು ಸಂತ್ರಸ್ತರಿಗೆ ಕೈಲಾದಷ್ಟು ಸಹಾಯ ಮಾಡಿದ್ದೇನೆ. ಜಾನುವಾರುಗಳಿಗೂ ಮೇವು ನೀಡಿ ಬಂದಿದ್ದೆನೆ. ನೆರೆಯಿಂದ ತತ್ತರಿಸಿದ ಜನರಿಗೆ ಶಾಶ್ವತವಾಗಿ ಸೂರು ಕಲ್ಪಿಸಬೇಕಿದೆ ಎಂದರು.
ಅರವಿಂದ ಪಾಟೀಲ, ವೀರುಪಾಕ್ಷಯ್ಯ ನೀರಲಿಗಿಮಠ, ನಂದಿಶ ಪಾಟೀಲ, ಎ.ವಿ.ಬದಾಮಿ, ಬಿ.ಎಸ್.ಪಾಟೀಲ, ಮುಕ್ತಾರ ಪಠಾಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ