ಪ್ರಗತಿವಾಹಿನಿ ಸುದ್ದಿ, ಗೋಕಾಕ: ಪ್ರಸಕ್ತ ಸನ್ನಿವೇಶದಲ್ಲಿ ಪ್ರವಾಹ ಭೀತಿ ಇಲ್ಲದಿದ್ದರೂ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಸತತ ಮಳೆಯಿಂದಾಗಿ ಪ್ರವಾಹ ಎದುರಾದರೂ ಅದನ್ನು ಸಮರ್ಥವಾಗಿ ಎದುರಿಸಲು ಈಗಿನಿಂದಲೇ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಕೆಎಂಎಫ್ ಅಧ್ಯಕ್ಷ ಹಾಗೂ ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸಂಜೆ ಜರುಗಿದ ಗೋಕಾಕ ಮತ್ತು ಮೂಡಲಗಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಮಹಾರಾಷ್ಟ್ರದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಲೇ ಇದೆ. ಈಗಿನ ಸಂದರ್ಭವನ್ನು ಅವಲೋಕಿಸಿದರೆ ಹಿಡಕಲ್ ಜಲಾಶಯ ಭರ್ತಿಯಾಗಲು ಇನ್ನೂ ಸಮಯ ಬೇಕಾಗಬಹುದು. ಆದ್ದರಿಂದ ಈಗಿನ ಸ್ಥಿತಿಯನ್ನು ನೋಡಿದರೆ ನಮಗೇನು 2019 ರಲ್ಲಿ ಸಂಭವಿಸಿದ ಪ್ರವಾಹ ಭೀತಿ ಎದುರಾಗೊಲ್ಲ. ಆದರೂ ಸಂಭಾವ್ಯ ಪ್ರವಾಹ ಭೀತಿಯನ್ನು ಯಶಸ್ವಿಯಾಗಿ ನಿರ್ವಹಿಸಲಿಕ್ಕೆ ತಾಲೂಕಾಡಳಿತ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸೂಚಿಸಿದರು.
ಲಂಚ ಪಡೆದ ಪಿಡಿಒಗಳು
2019 ರಲ್ಲಿ ಸಂಭವಿಸಿರುವ ನೆರೆ ಪೀಡಿತ ಭೀತಿಯಿಂದಾಗಿ ಮನೆಗಳನ್ನು ಕಳೆದುಕೊಂಡ ಕೆಲವು ಅರ್ಹ ಫಲಾನುಭವಿಗಳಿಗೆ ಮನೆಗಳ ಹಂಚಿಕೆ ವಿಷಯದಲ್ಲಿ ಪಿಡಿಓಗಳು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕೆಲವರಿಂದ ಮನೆಗಳನ್ನು ನೀಡುತ್ತೇವೆ ಎಂದು ಅವರಿಂದ ಹಣ ವಸೂಲಿ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಪಿಡಿಓಗಳ ವಿರುದ್ಧ ಯಾವುದೇ ಮುಲಾಜಿಲ್ಲದೇ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ ಅವರು, ವಾರದೊಳಗೆ ಅರಭಾವಿ ಕ್ಷೇತ್ರದಲ್ಲಿ ಬರುವ ಎಲ್ಲ ಪಿಡಿಓಗಳ ಸಭೆ ನಡೆಸಿ ಮನೆಗಳ ಸಂಬಂಧ ಚರ್ಚೆ ನಡೆಸುವಂತೆ ತಿಳಿಸಿದರು.
ದುಡ್ಡು ತಂದರೂ ಕೆಲಸ ಮಾಡದ ಅಧಿಕಾರಿಗಳು
ರಸ್ತೆಗಳ ಅಭಿವೃದ್ಧಿಗಾಗಿ ಈಗಾಗಲೇ ಕಾಮಗಾರಿಗಳು ಚಾಲ್ತಿಯಲ್ಲಿವೆ. ಇದೇ ಡಿಸೆಂಬರ್ ತಿಂಗಳೊಳಗೆ ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಕಾಮಗಾರಿ ನಡೆಯುತ್ತಿರುವ ಸ್ಥಳಗಳಿಗೆ ಅಧಿಕಾರಿಗಳು ಭೇಟಿ ನೀಡಿ ರಸ್ತೆಗಳ ಗುಣಮಟ್ಟವನ್ನು ಪರೀಕ್ಷಿಸಬೇಕು. ಮೆಳವಂಕಿ ಸೇತುವೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯಿಂದ 10 ಕೋಟಿ ರೂ. ಅನುದಾನ ಬಿಡುಗಡೆಯಾಗಿ 6 ತಿಂಗಳು ಗತಿಸಿದರೂ ಇದುವರೆಗೂ ಟೆಂಡರ್ ಕರೆಯದಿರುವುದಕ್ಕೆ ಅಧಿಕಾರಿಗಳ ವಿರುದ್ಧ ಹರಿಹಾಯ್ದ ಅವರು, ಸರ್ಕಾರದಿಂದ ಕಾಮಗಾರಿಗೆ ದುಡ್ಡು ತಂದರೂ ಅಧಿಕಾರಿಗಳು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಪಂ ಇಂಜನೀಯರಿಂಗ್ ವಿಭಾಗ ಮತ್ತು ಪಿಎಂಜಿಎಸ್‍ವೈ ಯೋಜನೆಯಡಿ ರಸ್ತೆಗಳ ಸುಧಾರಣೆಗೆ ಅನುದಾನ ಬಂದಿದ್ದರೂ ಕಾಮಗಾರಿಗಳು ವಿಳಂಬವಾಗುತ್ತಿವೆ. ದುರದುಂಡಿ ಮತ್ತು ತಪಸಿ ರಸ್ತೆ ಕಾಮಗಾರಿಗೆ 10 ಕೋಟಿ ರೂ. ಅನುದಾನ ಶೀಘ್ರವೇ ಬಿಡುಗಡೆಯಾಗಲಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಸೋರುತ್ತಿರುವ ಶಾಲೆಗಳು
ಮಳೆಯಿಂದಾಗಿ ಮೂಡಲಗಿ ವಲಯದ 12 ಶಾಲೆಗಳು ಸೋರುತ್ತಿದ್ದು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಂತಹ ಶಾಲಾ ಕೊಠಡಿಗಳನ್ನು ಆದಷ್ಟು ಬೇಗನೆ ದುರಸ್ಥಿಗೊಳಿಸಲು ಸೂಚಿಸಿದ ಅವರು, 6 ಸರ್ಕಾರಿ ಜ್ಯೂನಿಯರ್ ಕಾಲೇಜುಗಳನ್ನು ಪ್ರಾರಂಭಿಸಲು ಈಗಾಗಲೇ ಶಿಕ್ಷಣ ಸಚಿವರಿಗೆ ಮತ್ತೊಮ್ಮೆ ಪ್ರಸ್ತಾವನೆ ನೀಡಲಾಗಿದೆ ಎಂದು ತಿಳಿಸಿದರು.
ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ಮೂಡಲಗಿ ತಹಶೀಲ್ದಾರ ಡಿ.ಜೆ. ಮಹಾತ, ಗೋಕಾಕ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮುರಳೀಧರ ದೇಶಪಾಂಡೆ, ಮೂಡಲಗಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಫ್.ಎ. ಚಿನ್ನನ್ನವರ, ಗೋಕಾಕ ಡಿವಾಯ್‍ಎಸ್‍ಪಿ ಮನೋಜಕುಮಾರ ನಾಯ್ಕ, ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಹಾಗೂ ತಾಲೂಕು ಮಟ್ಟದ ವಿವಿಧ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಸಾಂಬ್ರಾ ಏರ್ ಫೋರ್ಸ್ ಸಿಬ್ಬಂದಿ, ಕುಟುಂಬದವರಿಗೆ ಕೋವಿಡ್ ಬೂಸ್ಟರ್ ಲಸಿಕಾಕರಣ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ