ಪ್ರವಾಹದಲ್ಲಿ ಕೊಚ್ಚಿಹೋದ ಬೆಳೆ: ರೈತ ಆತ್ಮಹತ್ಯೆಗೆ ಶರಣು
ಪ್ರಗತಿವಾಹಿನಿ ಸುದ್ದಿ, ರಾಮದುರ್ಗ:
ರಾಜ್ಯದಲ್ಲಿ ಭೀಕರ ಪ್ರವಾಹ ಸಾವಿರಾರು ಜನರ ಹೊಲ, ಮನೆಗಳನ್ನು ಕೊಚ್ಚಿಕೊಂಡು ಹೋಗಿದೆ. ಇದೀಗ ಪ್ರವಾಹ ಇಳಿಮುಖವಾಗುತ್ತಿದ್ದಂತೆ ರೈತರಿಗೆ ತಮ್ಮ ಬೆಳೆಯ ಪರಿಸ್ಥಿತಿ ಅರ್ಥವಾಗುತ್ತಿದೆ. ಕೊಚ್ಚಿಹೋದ ಬೆಳೆ, ಹೊಲವನ್ನು ನೋಡಿ ಸಹಿಸುಕೊಳ್ಳುವುದೇ ಕಷ್ಟ ಎನ್ನುವ ಸ್ಥಿತಿ ಉಂಟಾಗುತ್ತಿದೆ.
ಇಂತಹ ಸಂದರ್ಭದಲ್ಲಿ ರೈತರಿಗೆ ಧ್ಯಾರ್ಯ ತುಂಬುವ ಕೆಲಸ ಆಗಬೇಕಿದೆ. ಇಲ್ಲವಾದಲ್ಲಿ ಆತ್ಮಸ್ಥೈರ್ಯ ಕಳೆದುಕೊಂಡು ರೈತರು ಕಠಿಣ ನಿರ್ಧಾರ ತೆಗೆದುಕೊಳ್ಳಬಹುದು.
ರಾಮದುರ್ಗ ತಾಲೂಕಿನಲ್ಲೂ ರೈತನೊಬ್ಬ ಇಂತದೇ ನಿರ್ಧಾರ ತೆಗೆದುಕೊಂಡಿದ್ದಾನೆ. ಪ್ರವಾಹದಿಂದ ತನ್ನ ಬೆಳೆಗಳೆಲ್ಲ ಕೊಚ್ಚಿಕೊಂಡು ಹೋಗಿದ್ದನ್ನು ಕಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮಾಗನೂರ ಗ್ರಾಮದ ರೈತನೊಬ್ಬ ನದಿ ಪ್ರವಾಹದಿಂದ ಹೊಲದಲ್ಲಿಯ ಬೆಳೆಯೆಲ್ಲ ಕೊಚ್ಚಿಹೋಗಿದ್ದಕ್ಕೆ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗ್ರಾಮದ ಲಕ್ಷ್ಮಣ ಲಕ್ಕಪ್ಪ ತ್ಯಾಪಿ (32) ಆತ್ಮಹತ್ಯೆ ಮಾಡಿಕೊಂಡ ರೈತ. ಕೇವಲ ಅರ್ಧ ಎಕರೆ ಭೂಮಿಮಾತ್ರ ಇದ್ದು, 6 ಎಕರೆ ಲಾವಣಿ ಮಾಡಿದ್ದ.
ಖಾಸಗಿ ಸಾಲ ಮಾಡಿ ಕಬ್ಬು ಬೆಳೆದಿದ್ದ. ಹುಲುಸಾಗಿ ಬೆಳೆದ ಬೆಳೆ ಮಲಪ್ರಭಾ ನದಿ ಪ್ರವಾಹಕ್ಕೆ ಕೊಚ್ಚಿಹೋಗಿದ್ದು, ನೀರು ಇಳಿಕೆಯಾದ ಮೇಲೆ ಕೊಚ್ಚಿ ಹೋಗಿರುವ ಬೆಳೆಯನ್ನು ಕಂಡು ಹತಾಶಗೊಂಡು ಮಂಗಳವಾರ ಬೆಳಿಗ್ಗೆ 6ರ ಸುಮಾರಿಗೆ ಹೊಲದಲ್ಲಿಯೇ ಕ್ರಿಮಿನಾಶಕ ಸೇವಿಸಿ ಮನೆಗೆ ಬರುತ್ತಿದ್ದಂತೆಯೆ ವಾಂತಿ ಮಾಡಿಕೊಂಡಿದ್ದರಿಂದ ವಾಸನೆ ಬರುತ್ತಿತ್ತು.
ತಕ್ಷಣ ಅವರನ್ನು ರಾಮದುರ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಿಗ್ಗೆ 3.30 ಕ್ಕೆ ಚಿಕಿತ್ಸೆ ಫಲಿಸದೇ ಸಾವಿಗಿಡಾಗಿದ್ದಾನೆ. ಮೃತನಿಗೆ ಪತ್ನಿ ಹಾಗೂ ಮೂವರು ಸಣ್ಣಸಣ್ಣ ಹೆಣ್ಣುಮಕ್ಕಳಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕಟಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ