*ಶ್ರೀ ವಿಶ್ವಕರ್ಮ ಸ್ತೋತ್ರಗಳನ್ನು ಅನುಸರಿಸಿ ಸಧೃಡ ಸಮಾಜ ನಿರ್ಮಾಣಕ್ಕೆ ಮುಂದಾಗಿ: ಶ್ರೀ ಪ್ರಮೋದ ಮಹಾಸ್ವಾಮಿಜಿಗಳು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪುರಾಣಗಳ ಪ್ರಕಾರ ಶ್ರೀ ವಿಶ್ವಕರ್ಮ ಅವರು ಜಗತ್ತಿನ ಸೃಷ್ಟಿಕರ್ತರಾಗಿದ್ದಾರೆ, ವಿಶ್ವಕರ್ಮ ಸ್ತೋತ್ರಗಳನ್ನು ತಿಳಿದುಕೊಂಡು ಅವುಗಳನ್ನು ಅನುಸರಿಸುವುದರ ಮೂಲಕ ಸುಂದರ, ಸಧೃಡ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕಿತ್ತೂರಿನ ಶ್ರೀ ವಿಶ್ವಕರ್ಮ ಏಕದಂಡಗಿ ಶ್ರೀ ಮಠದ ಶ್ರೀ ಸರಸ್ವತಿ ಪೀಠಾಧೀಶರಾದ ಶ್ರೀ ಆರ್. ಪ್ರಮೋದ ಮಹಾಸ್ವಾಮಿಗಳು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಬುಧವಾರ ( ಸೆ.17) ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ನಡೆದ ಶ್ರೀ ವಿಶ್ವಕರ್ಮ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉಪನಿಷತ್ತುಗಳೆ ನಮಗೆ ಆಧಾರಗಳಾಗಿವೆ.ಸೃಷ್ಟಿಕರ್ತ ವಿಶ್ವಕರ್ಮರ ಬಗ್ಗೆ ವೇದ ಉಪನಿಷತ್ತುಗಳಿಂದ ಬಹಳಷ್ಟು ತಿಳಿದುಕೊಳ್ಳಬಹುದಾಗಿದೆ. ಪ್ರತಿಯೊಂದು ಗ್ರಾಮದಲ್ಲಿನ ದೇವಸ್ಥಾನಗಳಲ್ಲಿ ಗ್ರಂಥಾಲಯನ್ನು ಸ್ಥಾಪಿಸಿ ಧಾರ್ಮಿಕ, ಸಾಹಿತ್ಯ, ವೇದ ಉಪನಿಷತ್ತುಗಳನ್ನು ಇಡುವುದರ ಮೂಲಕ ಜನರಿಗೆ ನಮ್ಮ ಇತಿಹಾಸದ ಬಗ್ಗೆ ಓದಲು ಅವಕಾಶ ಕಲ್ಪಿಸಬೇಕು ಎಂದರು.
ನಮ್ಮ ಧಾರ್ಮಿಕ ವಿಧಿ ವಿಧಾನಗಳನ್ನು ನಾವು ತಿಳಿದುಕೊಂಡು ಸಮಾಜದ ಜನರು ಜಾಗೃತರಾಗಬೇಕು. ಸೈನಿಕ ಹಾಗೂ ರೈತ ದೇಶದ ಎರಡು ಕಣ್ಣುಗಳಿದ್ದಂತೆ ಸೈನಿಕನಿಗೆ ಬಂದೂಕು ಮತ್ತು ರೈತರಿಗೆ ಎಲ್ಲ ಸಲಕರಣೆಗಳನ್ನು ತಯಾರಿಸಿಕೊಟ್ಟವರು ವಿಶ್ವಕರ್ಮರು. ಚಿನ್ನ ಸೇರಿದಂತೆ ಎಲ್ಲ ಬಗೆಯ ಧಾತುಗಳನನ್ನು ಪರಿಚಯಿಸಿದವರು ವಿಶ್ವಕರ್ಮ ಸಮಾಜದವರಾಗಿದ್ದಾರೆ ಎಂದು ತಿಳಿಸಿದರು.
ವಿಶ್ವಕರ್ಮ ಸಮಾಜದ ಜನ ಬಹಳ ಸ್ವಾವಲಂಭಿಗಳು, ನಮ್ಮ ಎಲ್ಲ ಅಹಂಗಳನ್ನು ಬಿಟ್ಟು ಸರ್ಕಾರದ ಯೋಜನೆಗಳ ಬಗ್ಗೆ ತಿಳಿದುಕೊಂಡು ಅವುಗಳನ್ನು ಪಡೆದು ಸದೃಢರಾಗಬೇಕು. ನಮ್ಮ ಸಮಾಜದಲ್ಲಿ ಜಾಗೃತಿ ಮೂಡಿಸುವ ನಾಯಕರು ಸೃಷ್ಟಿ ಆಗಬೇಕು.ಎಲ್ಲ ಸಮಾಜದೊಂದಿಗೆ ಸೌಹಾರ್ದತೆಯಿಂದ ನಮ್ಮ ಕೆಲಸ ಕಾರ್ಯಗಳನ್ನು ಮಾಡುತ್ತಾ ಬದುಕಬೇಕು ಎಂದು ಶ್ರೀ ಆರ್. ಪ್ರೇಮಾನಂದ ಮಹಾಸ್ವಾಮಿಗಳು ತಿಳಿಸಿದರು.
ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿಗಳಾದ ಬಸವರಾಜ ಹೆಗ್ಗನಾಯಕ ಅವರು ಮಾತನಾಡಿ ವಿಶ್ವಕರ್ಮ ಪುರಾಣದ ಆಧಾರದ ಮೇಲೆ ಗಾಂಧರ್ವ ಲೋಕ ಸೃಷ್ಟಿಕರ್ತರು ಎಂಬುದನ್ನು ನಾವು ಕಾಣಬಹುದು. ವಿಶ್ವಕರ್ಮ ಸಮಾಜದ ಜನ ತಮ್ಮ ವೃತ್ತಿ ಕೌಶಲ್ಯದೊಂದಿಗೆ ತಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ, ಉತ್ತಮ ಸಂಸ್ಕಾರಗಳನ್ನು ತಿಳಿಸಿಕೊಟ್ಟರೆ ಸಮಾದಲ್ಲಿ ಉನ್ನತ ಮಟ್ಟದಲ್ಲಿ ಬೆಳೆಯುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಮಹಾನಗರ ಪಾಲಿಕೆ ಉಪ ಆಯುಕ್ತ ಉದಯಕುಮಾರ ತಳವಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಸೇರಿದಂತೆ ಸಮಾಜದ ಗಣ್ಯರು, ಮುಖಂಡರು, ಸಾರ್ವಜನಿನರು ಉಪಸ್ಥಿತರಿದ್ದರು.
ಭವ್ಯ ಮೆರವಣಿಗೆ
ಕಾರ್ಯಕ್ರಮಕ್ಕೂ ಮುನ್ನ ವಿಶ್ವಕರ್ಮ ಭಾವಚಿತ್ರದ ಭವ್ಯ ಮೆರವಣಿಗೆಗೆ ಮಹಾನಗರ ಪಾಲಿಕೆ ಉಪ ಮಹಾ ಪೌರರಾದ ವಾಣಿ ಜೋಶಿ ಅವರು ಚಾಲನೆ ನೀಡಿದರು. ವಿವಿಧ ಜನಪದ ಕಲಾ ತಂಡಗಳೊಂದಿಗೆ ಭವ್ಯ ಮೆರವಣಿಗೆಯು ಅಶೋಕ ವೃತ್ತದಿಂದ ಕುಮಾರ ಗಂಧರ್ವ ಕಲಾ ಮಂದಿರಕ್ಕೆ ಬಂದು ತಲುಪಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಮೊಹಮ್ಮದ್ ರೋಷನ್ ಸೇರಿದಂತೆ ಸಮಾಜದ ಮುಖಂಡರು, ಗಣ್ಯಮಾನ್ಯರು ಉಪಸ್ಥಿತರಿದ್ದರು.