
ನೆಹರೂ, ಗಾಂಧಿ ಆದರ್ಶವಾಗಿರಲಿ ಮಕ್ಕಳ ದಿನಾಚರಣೆ ಸಮಾರಂಭದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧಿಜೀ, ಜವಾಹರಲಾಲ್ ನೆಹರೂ ಅವರ ಕನಸುಗಳನ್ನು ಇಂದಿನ ಪೀಳಿಗೆಯ ಮಕ್ಕಳು ನನಸು ಮಾಡಬೇಕು, ಪ್ರತಿಯೊಬ್ಬರು ಉತ್ತಮ ದಾರಿಯಲ್ಲಿ ನಡೆಯುವಂತಾಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಹೇಳಿದ್ದಾರೆ.

ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿರುವ ಬಾಲ ಭವನದಲ್ಲಿ ಗುರುವಾರ ನಡೆದ ‘ಮಕ್ಕಳ ದಿನಾಚರಣೆ’ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಸಚಿವರು, ಭಾರತ ವಿಶ್ವ ಮಟ್ಟದಲ್ಲಿ ಸಮೃದ್ಧವಾಗಿ ಬೆಳೆಯುತ್ತಿದೆ. ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುತ್ತಿದೆ. ಇದಕ್ಕೆ ಇಂದಿನ ಯುವಜನತೆಯೇ ಕಾರಣ ಎಂದರು.

ಪಾಲಕರು ಕೂಡ ಮಕ್ಕಳನ್ನು ಉತ್ತಮ ರೀತಿಯಲ್ಲಿ ಸಾಕಬೇಕು, ನೆಹರೂ, ಗಾಂಧೀಜಿಯಂಥ ಮಹಾನ್ ವ್ಯಕ್ತಿಗಳ ಬಗ್ಗೆ ಮಕ್ಕಳಿಗೆ ತಿಳಿ ಹೇಳಬೇಕು ಎಂದು ಸಚಿವರು ತಿಳಿಸಿದರು.
ಮಹಿಳಾ ಇಲಾಖೆಯಲ್ಲಿ ಅನೇಕ ಯೋಜನೆಗಳಿದ್ದು, ಮಕ್ಕಳಿಗೆ ಪೌಷ್ಟಿಕಾಂಶ ಹೆಚ್ಚಿಸುವ ಸಲುವಾಗಿ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಪಾಲಕರು ಹಾಗೂ ಮಕ್ಕಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಚಿವರು ತಿಳಿಸಿದರು.

ಹೆಣ್ಣುಮಕ್ಕಳು ಶಿಸ್ತಿಗೆ ಹೆಸರು, ಯಾವುದೇ ಸಮಾರಂಭದಲ್ಲೂ ಶಿಸ್ತಾಗಿ ಇರುತ್ತಾರೆ. ಪ್ರತಿವರ್ಷ ಎಸ್ಸೆಎಸ್ಸೆಎಲ್ಸಿ, ಪಿಯುಸಿ ಪರೀಕ್ಷೆಗಳಲ್ಲಿ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸುತ್ತಾ ಬಂದಿದ್ದಾರೆ. ಅಧಿಕಾರಿಗಳ ವರ್ಗದಲ್ಲೂ ಅತಿಹೆಚ್ಚು ಮಹಿಳೆಯರನ್ನ ನೋಡಬಹುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಮಕ್ಕಳಿಗೆ ಶೌರ್ಯ ಪ್ರಶಸ್ತಿ, ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳಿಗೆ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಡಾ.ಜಿ.ಸಿ.ಪ್ರಕಾಶ್, ನಿರ್ದೇಶಕರಾದ ಎಂ.ಎಸ್. ಅರ್ಚನಾ, ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಪುಷ್ಪಲತಾ, ಬಾಲಭವನದ ಕಾರ್ಯದರ್ಶಿ ನಿಶ್ಚಲ್ ಸೇರಿದಂತೆ ಇಲಾಖೆಯ ಅಧಿಕಾರಿಗಳು, ನೂರಾರು ಸಂಖ್ಯೆಯಲ್ಲಿ ಚಿಣ್ಣರು ಪಾಲ್ಗೊಂಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ