Kannada NewsLatestNationalPolitics

*ದೇಶದ ಆಹಾರ ದಾಸ್ತಾನು ಬಫರ್ ಗಿಂತ ಮೂರು ಪಟ್ಟು ಹೆಚ್ಚು: ಪ್ರಸ್ತುತದಲ್ಲಿ ಸರ್ಕಾರದಿಂದ 604 ಲಕ್ಷ ಮೆಟ್ರಿಕ್ ಟನ್ ಸಂಗ್ರಹ*

ಪ್ರಗತಿವಾಹಿನಿ ಸುದ್ದಿ: “ಭಾರತದ ಆಹಾರ ಭದ್ರತಾ ವ್ಯವಸ್ಥೆ ಪ್ರಬಲವಾಗಿದ್ದು, ಪ್ರಸ್ತುತದಲ್ಲಿ ಬಫರ್ ಅವಶ್ಯಕತೆಗಿಂತ ಸುಮಾರು ಮೂರು ಪಟ್ಟು ಹೆಚ್ಚಾಗಿದೆ” ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ದೇಶದ ಪ್ರತಿಯೊಬ್ಬರಿಗೂ ಆಹಾರ ಭದ್ರತೆ ಒದಗಿಸುವಲ್ಲಿ ಬದ್ಧತೆ ತೋರಿದ್ದು, ಪರಿಣಾಮ ನಮ್ಮ ಆಹಾರ ಭದ್ರತಾ ಚೌಕಟ್ಟು ಬಲವಾಗಿ ಬೆಳೆಯುತ್ತಲೇ ಇದೆ ಎಂದು ಪ್ರತಿಪಾದಿಸಿದ್ದಾರೆ.

604.02 ಲಕ್ಷ ಮೆಟ್ರಿಕ್ ದಾಸ್ತಾನು:
ಪ್ರಸ್ತುತವಾಗಿ ಕೇಂದ್ರ ಸರ್ಕಾರದ ಆಹಾರ ಧಾನ್ಯ ದಾಸ್ತಾನು 604.02 ಲಕ್ಷ ಮೆಟ್ರಿಕ್ ಟನ್ ತಲುಪಿದೆ. ಇದು ಕಡ್ಡಾಯ ಬಫರ್ ಅವಶ್ಯಕತೆಗಿಂತ ಮೂರು ಪಟ್ಟು ಹೆಚ್ಚಳವನ್ನು ಪ್ರದರ್ಶಿಸುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ದೇಶದಲ್ಲಿ ಗೋಧಿ ಮತ್ತು ಅಕ್ಕಿ ದಾಸ್ತಾನು ಸಮೃದ್ಧವಾಗಿದ್ದು, ದೇಶಾದ್ಯಂತ ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಹಾಗೂ ವಿವಿಧ ಜನಕಲ್ಯಾಣ ಯೋಜನೆಗಳಿಗೆ ನಿರಂತರ ಪೂರೈಕೆಯನ್ನು ಖಚಿತಪಡಿಸುತ್ತಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಒಂದರಿಂದಲೇ 80 ಕೋಟಿಗೂ ಹೆಚ್ಚು ಭಾರತೀಯರಿಗೆ ಉಚಿತ ಆಹಾರ ಧಾನ್ಯ ವಿತರಣೆ ಸುಲಲಿತವಾಗಿದೆ ಎಂದು ಹೇಳಿದ್ದಾರೆ.

ದೇಶೀಯವಾಗಿ ಆಹಾರ ಭದ್ರತೆ ಒದಗಿಸುವ ಜತೆಗೆ ರೈತರಿಂದ ವ್ಯವಸ್ಥಿತ ಖರೀದಿ, ಸಮೃದ್ಧ ಫಸಲು ಮತ್ತು ಅನ್ನದಾತರಿಗೆ ನೀಡುತ್ತಿರುವ ನಿರಂತರ ಬೆಂಬಲವು ರೈತ ಕಲ್ಯಾಣ ಮತ್ತು ದೇಶದ ಸುಭದ್ರತೆ ಕಡೆಗಿನ ಬದ್ಧತೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದೆ ಎಂದು ಹೇಳಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button