ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಂದಾಯ ಇಲಾಖೆಯ ವ್ಯಾಪ್ತಿಯ ಕಂದಾಯ ನಿರೀಕ್ಷಕರು, ಪ್ರಥಮದರ್ಜೆ ಸಹಾಯಕರು, ಗ್ರಾಮ ಆಡಳಿತ ಅಧಿಕಾರಿ ಮತ್ತು ದ್ವಿತೀಯ ದರ್ಜೆ ಸಹಾಯಕರ ವರ್ಗಾವಣೆ , ನಿಯೋಜನೆ, ಅನ್ಯ ಕರ್ತವ್ಯದ ಮೇಲೆ ನೇಮಿಸುವ ಪ್ರಸ್ತಾವನೆಗಳು ಹಾಗೂ ಕಂದಾಯ ಇಲಾಖೆಯ ಇತರೆ ಆಡಳಿತ ಸುಧಾರಣೆ ವಿಷಯದ ಕುರಿತು ವಿಶೇಷ ಸಲಹಾಸಮಿತಿ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.
ವಿಭಾಗೀಯ ಮಟ್ಟದ ಹಾಗೂ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂದಾಯ ಇಲಾಖೆಯ ವಿವಿಧ ವಿಷಯಗಳು ಅಂದರೆ ವರ್ಗಾವಣೆ ಸ್ಥಳ ನಿಯುಕ್ತಿ , ತರಬೇತಿ, ಜೇಷ್ಠತಾ ಪಟ್ಟಿ , ಅಧಿಕಾರಿಗಳು ನಿರ್ವಹಿಸಬೇಕಾದ ಕರ್ತವ್ಯ ಮತ್ತು ಜವಾಬ್ದಾರಿಗಳು, ಆಡಳಿತ ಶ್ರೇಣಿ ವ್ಯವಸ್ಥೆ ಕಾರ್ಯಕ್ಷಮತೆಯ ವಿಶ್ಲೇಷಣೆ , ಪುರಸ್ಕಾರ ಕಾರ್ಯವಿಧಾನಗಳ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲದಿರುವುದು ಗಮನಕ್ಕೆ ಬಂದಿದೆ.
ಈ ಹಿನ್ನೆಲೆಯಲ್ಲಿ ಆಡಳಿತ ಸುಧಾರಣಾ ಆಯೋಗವು ಕಂದಾಯ ಇಲಾಖೆಯಲ್ಲಿ ದಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಲವಾರು ಶಿಫಾರಸುಗಳನ್ನು ನೀಡಿದೆ. ಈ ಶಿಫಾರಸುಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಹಾಗೂ ಶಿಫಾರಸುಗಳನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಸದಸ್ಯರು ಹಾಗೂ ಸದಸ್ಯ ಕಾರ್ಯದರ್ಶಿಯನ್ನು ಒಳಗೊಂಡ ವಿಶೇಷ ಸಲಹಾ ಸಮಿತಿಯನ್ನು ರಚಿಸಲಾಗಿದೆ
ಬೆಂಗಳೂರು ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯ ಸಮಿತಿಗೆ, ಬೆಳಗಾವಿ, ಮೈಸೂರು, ಕಲಬುರ್ಗಿ, ಶಿವಮೊಗ್ಗ, ಚಿಕ್ಕಮಗಳೂರು, ರಾಯಚೂರು ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ