ಮಾಜಿ ಸಿಎಂ ಕೃಷ್ಣ ಅಳಿಯ ಸಿದ್ದಾರ್ಥ ನಾಪತ್ತೆ; ನೇತ್ರಾವತಿ ನದಿಯಲ್ಲಿ ಹುಡುಕಾಟ
ಪ್ರಗತಿವಾಹಿನಿ ಸುದ್ದಿ, ಮಂಗಳೂರು –
ಕೆಫೆ ಕಾಫಿ ಡೇ ಗ್ರುಪ್ ಮಾಲಿಕ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ ವಿ.ಜಿ.ಸಿದ್ದಾರ್ಥ ನಾಪತ್ತೆಯಾಗಿದ್ದು, ನೇತ್ರಾವತಿ ನದಿಯಲ್ಲಿ ತೀವ್ರ ಶೋಧ ನಡೆಸಲಾಗುತ್ತಿದೆ.
ನಿನ್ನೆ ಸಂಜೆ 6 ಗಂಟೆ ಹೊತ್ತಿಗೆ ಮಂಗಳೂರು-ಉಲ್ಲಾಳ ನಡುವಿನ ನೇತ್ರಾವತಿ ನದಿ ಸೇತುವೆ ಬಳಿಯಿಂದ ಸಿದ್ದಾರ್ಥ ನಾಪತ್ತೆಯಾಗಿದ್ದಾರೆ. ಅವರನ್ನು ಅಪಹರಿಸಲಾಗಿದೆಯೇ? ನದಿಗೆ ಜಾರಿ ಬಿದ್ದಿದ್ದಾರೆಯೇ? ಆತ್ಮಹತ್ಯೆಯನ್ನೇನಾದರೂ ಮಾಡಿಕೊಂಡರೇ ಎನ್ನುವ ಹಲವು ಅನುಮಾನಗಳು ಕಾಡತೊಡಗಿದ್ದು, ಎಲ್ಲ ರೀತಿಯಿಂದಲೂ ತನಿಖೆ ನಡೆಸಲಾಗುತ್ತಿದೆ.
ಬಿಸಿನೆಸ್ ಗಾಗಿ ಮೂಡಿಗೆರೆಗೆ ತಮ್ಮ ಇನ್ನೋವಾ ಕಾರಿನಲ್ಲಿ ತೆರಳಿದ್ದ ಸಿದ್ದಾರ್ಥ ಅಲ್ಲಿಂದ ಮಂಗಳೂರಿನತ್ತ ತೆರಳುವಂತೆ ತಮ್ಮ ಚಾಲಕನಿಗೆ ತಿಳಿಸಿದ್ದಾರೆ. ಮಂಗಳೂರಿಗೆ ತಲುಪಿದ ನಂತರ ನೇತ್ರಾವತಿ ನದಿ ಸೇತುವೆಯತ್ತ ತೆರಳಲು ಸೂಚಿಸಿದ್ದಾರೆ. ಸೇತುವೆ ಬಳಿ ತೆರಳುತ್ತಿದ್ದಂತೆ ಕಾರು ನಿಲ್ಲಿಸಲು ಹೇಳಿ ಪೋನ್ ನಲ್ಲಿ ಮಾತನಾಡುತ್ತ ನಡೆದು ಹೋಗಿದ್ದಾರೆ.
ಮಳೆ ಇದ್ದುದರಿಂದ ಛತ್ರಿ ನೀಡಲು ಮುಂದಾದ ಚಾಲಕನ ಹತ್ತಿರ, ಛತ್ರಿ ನಿರಾಕರಿಸಿ ನೀನು ಕಾರಿನಲ್ಲೇ ವಿಶ್ರಾಂತಿ ತೆಗೆದುಕೊ ಎಂದಿದ್ದಾರೆ. ಹಾಗೆಯೇ ವಾಕ್ ಮಾಡುತ್ತ, ಫೋನ್ ನಲ್ಲಿ ಮಾತನಾಡುತ್ತ ಹೋದ ಸಿದ್ದಾರ್ಥ ಒಂದು ಘಂಟೆಯಾದರೂ ಮರಳಿ ಬರಲಿಲ್ಲ. ಆಗ ಚಾಲಕ ಅವರ ಮೊಬೈಲ್ ಗೆ ಕರೆ ಮಾಡಿದ್ದಾರೆ. ಮೊಬೈಲ್ ಸ್ವಿಚ್ಡ್ಆಫ್ ಆಗಿತ್ತು. ಗಾಭರಿಗೊಂಡ ಆತ ಅಲ್ಲೆಲ್ಲ ಹುಡುಕಿದರೂ ಸಿದ್ದಾರ್ಥ ಕಾಣಲಿಲ್ಲ.
ಉದ್ಯಮ ನಷ್ಟದಲ್ಲಿತ್ತು
ಸಿದ್ದಾರ್ಥ ಅವರ ಉದ್ಯಮಗಳು ತೀವ್ರ ನಷ್ಟದಲ್ಲಿತ್ತು. ಅಲ್ಲದೆ ಶೇರು ಮಾರುಕಟ್ಟೆಯಲ್ಲೂ ಸಾಕಷ್ಟು ನಷ್ಟ ಅನುಭವಿಸಿರುವ ಸಾಧ್ಯತೆ ಇದೆ.
2 ದಿನಗಳ ಹಿಂದೆ ಸಂಸ್ಥೆಯ ಸಿಬ್ಬಂದಿಗೆ ಪತ್ರವೊಂದನ್ನು ಬರೆದಿದ್ದರು. ಅದರಲ್ಲಿ ತಮ್ಮ ಹಲವು ನೋವನ್ನು ತೋಡಿಕೊಂಡಿದ್ದರು. 50 ಸಾವಿರದಷ್ಟು ಜನರಿಗೆ ಉದ್ಯೋಗ ನೀಡಿದ್ದೇನೆ. ಆದರೂ ನಷ್ಟದಿಂದ ಹೊರಬರಲು ಆಗುತ್ತಿಲ್ಲ ಎಂದು ಬರೆದಿದ್ದರು.
ಈ ಹಿನ್ನೆಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಸಾಲವನ್ನೂ ಪಡೆದಿರುವ ಶಂಕೆ ಇದೆ. ನಾನು ದೊಡ್ಡ ಪ್ರಮಾಣದಲ್ಲಿ ಸಾಲ ಪಡೆದಿದ್ದೇನೆ. ಸಾಲಕೊಟ್ಟವರಿಂದ ಒತ್ತಡವೂ ಇದೆ. ಅದರಿಂದ ಹೊರಬರಲು ಸಾಧ್ಯವಾಗುತ್ತಿಲ್ಲ ಎಂದೂ ಸ್ನೇಹಿತರ ಬಳಿ ಹೇಳಿಕೊಂಡಿದ್ದರೆನ್ನಲಾಗಿದೆ.
ಈ ಹಿಂದೆ ಆದಾಯ ತೆರಿಗೆ ಇಲಾಖೆಯ ದಾಳಿಯೂ ನಡೆದಿತ್ತು.
ಶೋಧ ಕಾರ್ಯ
ಸಿದ್ದಾರ್ಥ ಅವರಿಗಾಗಿ ನೇತ್ರಾವತಿ ನದಿಯಲ್ಲಿ ಹಾಗೂ ಸುತ್ತ ಮುತ್ತ ತೀವ್ರ ಶೋಧ ನಡೆಸಲಾಗುತ್ತಿದೆ. ಮುಳುಗು ತಜ್ಞರು, ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸರು, ಮೀನುಗಾರರು ಸೇರಿ ಮುನ್ನೂರಕ್ಕೂ ಹೆಚ್ಚು ಸಿಬ್ಬಂದಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಹೆಲಿಕಾಪ್ಟರ್ ನೆರವು ಪಡೆಯಲೂ ನಿರ್ಧರಿಸಲಾಗಿದೆ.
ಮಾಜಿ ಸಚಿವ, ಶಾಸಕ ಯು.ಟಿ.ಖಾದರ್ ಸ್ಥಳದಲ್ಲಿದ್ದಾರೆ. ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು ಸಹ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆೆ. ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದು, ಮಳೆಯೂ ಸುರಿಯುತ್ತಿರುವುದರಿಂದ ಶೋಧ ಕಾರ್ಯಕ್ಕೆ ಅಡ್ಡಿಯಾಗಿದೆ.
ಕೃಷ್ಣ ಮನೆಗೆ ಸಿಎಂ ಭೇಟಿ
ಬೆಂಗಳೂರಿನ ಸದಾಶಿವನಗರದಲ್ಲಿರುವ ಎಸ್.ಎಂ.ಕೃಷ್ಣ ಮನೆಗೆ ಗಣ್ಯರ ದಂಡೇ ಹರಿದುಬರುತ್ತಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವ ಡಿ.ಕೆ.ಶಿವಕುಮಾರ, ನಟ ಪುನೀತ್ ರಾಜಕುಮಾರ ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿ ವಿಚಾರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ