ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ನೆರೆ ಪರಿಹಾರಕ್ಕೆ ಕೇಂದ್ರ ಸರ್ಕಾರ ಕೊಟ್ಟಿದ್ದೇ ಕೇವಲ 600 ಕೋಟಿ ಚಿಲ್ಲರೆ. ಆದರೆಸಿಎಂ ಬಿ ಎಸ್ ಯಡಿಯೂರಪ್ಪ 1800 ಕೋಟಿ ಎಂದು ಹೇಳುತ್ತಿದ್ದಾರೆ. ಇದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಇದ್ದಂತೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ರಾಜ್ಯಕ್ಕೆ ಬರಗಾಲದ ಪರಿಹಾರ ಇನ್ನೂ ಬಂದಿಲ್ಲ. ನೆರೆ ಪರಿಹಾರಕ್ಕಾಗಿ ಕೇಂದ್ರ ಬಿಡುಗಡೆ ಮಾಡಿದ್ದು ಕೇವಲ 600 ಕೋಟಿಯಷ್ಟೇ. ರಾಜ್ಯದಲ್ಲಿ ಸಂಭವಿಸಿದ ನೆರೆ ಪರಿಹಾರಕ್ಕೆ ಇದು ಎಲ್ಲಿ ಸಾಲುತ್ತೆ? ಇನ್ನು ಜಿಎಸ್‌ಟಿ, ಕುಡಿಯುವ ನೀರು, ಕೇಂದ್ರ ಪ್ರಾಯೋಜಿತ ಯೋಜನೆಗಳ ಹಣ ರಾಜ್ಯಕ್ಕೆ ಬಂದಿಲ್ಲ. ಕೇಂದ್ರದವರು ರಾಜ್ಯಗಳನ್ನೂ ದಿವಾಳಿ ಮಾಡುತ್ತಿದ್ದಾರೆ. ಐದು ಸಾವಿರ ಕೋಟಿ ರಾಜ್ಯಕ್ಕೆ ಬರಬೇಕಾದ ಹಣ ಬಂದಿಲ್ಲ. ಸಿಎಂ ಯಡಿಯೂರಪ್ಪ ಏನು ಮಾಡುತ್ತಿದ್ದಾರೆ ಎಂದು ಪ್ರೆಶ್ನಿಸಿದರು.
ಮಹದಾಯಿ ವಿಚಾರದಲ್ಲಿ ಬಿಜೆಪಿ ನಾಯಕರು ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಿದ್ದಾರೆ. ಯಡಿಯೂರಪ್ಪನವರು ಸುಳ್ಳು ಹೇಳುತ್ತಿದ್ದಾರೆ ಶೆಟ್ಟರ್ ಭಾಷಣ ಮಾಡುತ್ತಾರೆ, ಜೋಶಿ ತಮಟೆ ಬಾರಿಸುತ್ತಾರೆ ಎಂದು ವ್ಯಾಂಗ್ಯವಾಡಿದರು.
ಪ್ರಧಾನಿ ಮನಸ್ಸು ಮಾಡಿದರೆ ಒಂದು ದಿನದದಲ್ಲಿ ಸಮಸ್ಯೆ ಬಗೆಹರಿಸಬಹುದು. ಪ್ರಧಾನಿ ಮೂರು ರಾಜ್ಯದವರನ್ನು ಕರೆದು ಸಮಸ್ಯೆ ಇತ್ಯರ್ಥ ಮಾಡಬೇಕಿತ್ತು. ನಮ್ಮ ರಾಜ್ಯದ ಹಿತ ನಮಗೆ ಮುಖ್ಯ. ರಾಜ್ಯದ ಜಲವಿವಾದ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕು ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ