Kannada NewsKarnataka NewsUncategorized

ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಬಿಜೆಪಿ ವಿರುದ್ಧ ಮಹಾರಾಷ್ಟ್ರದ ಮಾಜಿ ಸಿಎಂ ಅಶೋಕ ಚವಾಣ ವಾಗ್ದಾಳಿ

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಪಕ್ಷದ ಆಂತರಿಕ ಕಲಹ, ಹೊಂದಾಣಿಕೆಯ ಕೊರತೆ, ಸರಣಿ ಹಗರಣಗಳು, ಭ್ರಷ್ಟಾಚಾರ,
ಬೆಲೆ ಏರಿಕೆ ಮತ್ತಿತರ ಕಾರಣಗಳಿಂದಾಗಿ ಕರ್ನಾಟಕದ ಜನತೆಯ ವಿಶ್ವಾಸ ಗಳಿಸಲು ಬಿಜೆಪಿಗೆ
ಸಾಧ್ಯವಾಗಿಲ್ಲ. ಪಕ್ಷದ ಮಾಜಿ ಸಿಎಂ, ಡಿಸಿಎಂ ಅವರನ್ನು ಗೌರವಿಸಲು ಬಿಜೆಪಿಯವರಿಗೆ
ಆಗದ್ದರಿಂದ ಅವರು ಪಕ್ಷ ತೊರೆಯುವಂತಾಗಿದೆ. ಇವನ್ನೆಲ್ಲ ನೋಡಿದರೆ ಬಿಜೆಪಿಯ ಸಧ್ಯದ
ಸ್ಥಿತಿ ಚಿಂತಾಜನಕವಾಗಿದೆ” ಎಂದು ಮಹಾರಾಷ್ಟ್ರದ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಪಕ್ಷದ
ಸ್ಟಾರ್ ಪ್ರಚಾರಕ ಅಶೋಕ ಚವಾಣ ಕುಟುಕಿದರು.
ತಾಲ್ಲೂಕಿನ ಗರ್ಲಗುಂಜಿ ಗ್ರಾಮದಲ್ಲಿ ಶುಕ್ರವಾರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ
ಹಾಗೂ ಶಾಸಕಿ ಡಾ.ಅಂಜಲಿ ನಿಂಬಾಳಕರ ಪರ ಆಯೋಜಿಸಿದ್ದ ರೋಡ್ ಶೋ ಮತ್ತು ಕಾರ್ನರ್ ಸಭೆ
ಉದ್ದೇಶಿಸಿ ಮಾತನಾಡಿದ ಅವರು, “ಅಭಿವೃದ್ಧಿ ವಂಚಿತ ಖಾನಾಪುರ ಕ್ಷೇತ್ರದ ಜನತೆಗೆ ಜನಪರ
ಆಡಳಿತ ನೀಡುವುದಾಗಿ ಹೇಳಿ 2018ರಲ್ಲಿ ಕ್ಷೇತ್ರದ ಶಾಸಕಿಯಾಗಿ ಆಯ್ಕೆಯಾಗಿದ್ದ
ಡಾ.ಅಂಜಲಿ ನಿಂಬಾಳಕರ ವಿರೋಧ ಪಕ್ಷದಲ್ಲಿದ್ದರೂ ಸಾಕಷ್ಟು ಅನುದಾನ ತಂದು
ಕ್ಷೇತ್ರದಾದ್ಯಂತ ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಕ್ಷೇತ್ರದಲ್ಲಿ ಉತ್ತಮ
ಕೆಲಸ ಮಾಡಿ ಜನಬೆಂಬಲ ಗಳಿಸಿದ್ದಾರೆ. ಮೇ.10ರಂದು ನಡೆಯುವ ಚುನಾವಣೆಯಲ್ಲಿ ಡಾ.ಅಂಜಲಿ
ಅವರನ್ನು ಕ್ಷೇತ್ರದ ಮತದಾರರು ಬೆಂಬಲಿಸಬೇಕು” ಎಂದು ಅವರು ಕರೆ ನೀಡಿದರು.
ಅಭ್ಯರ್ಥಿ ಡಾ.ಅಂಜಲಿ ಮಾತನಾಡಿ, “ನನ್ನ ಸೋದರ ಮಾವ (ತಾಯಿಯ ಸಹೋದರ) ಅಶೋಕ ಚವಾಣ ನನ್ನ
ಮೇಲಿನ ಅಕ್ಕರೆಯಿಂದ ಮಹಾರಾಷ್ಟ್ರದಿಂದ ಇಲ್ಲಿಗೆ ಪ್ರಚಾರಕ್ಕೆ ಬಂದಿದ್ದಾರೆ. ಅವರ
ಆಗಮನದಿಂದ ನನ್ನಲ್ಲಿ ಉತ್ಸಾಹ ಇಮ್ಮಡಿಸಿದೆ. ತವರುಮನೆಯಿಂದ ಅವರ ಮೂಲಕ ನನಗೆ
ಆಶೀರ್ದಾದ ದೊರೆತಿದೆ. ಅವರ ಮಾರ್ಗದರ್ಶನದಲ್ಲಿ ನನ್ನ ರಾಜಕೀಯ ಪಯಣವನ್ನು ಆರಂಭಿಸಿದ್ದ
ನಾನು ಇಂದು ಈ ಮಟ್ಟಕ್ಕೆ ಬೆಳೆಯಲು ಅವರ ಬೆಂಬಲ ಕಾರಣ” ಎಂದರು.
ಕ್ಷೇತ್ರದ ಮಹಿಳೆಯರು ಮತ್ತು ಮಕ್ಕಳ ಯೋಗಕ್ಷೇಮಕ್ಕಾಗಿ ಪಟ್ಟಣದಲ್ಲಿ 60 ಹಾಸಿಗೆಗಳ
ತಾಯಿ ಮತ್ತು ಮಗುವಿನ ಆಸ್ಪತ್ರೆ ಕಟ್ಟಿಸಿದ್ದು, ಮತದಾರರು ಆಶೀರ್ವದಿಸಿದಲ್ಲಿ ಮುಂದಿನ
ದಿನಗಳಲ್ಲಿ ಈ ಕ್ಷೇತ್ರಕ್ಕೆ ಹೊಸ ಹೊಸ ಉದ್ದಿಮೆಗಳನ್ನು ತಂದು ನಿರುದ್ಯೋಗ ಸಮಸ್ಯೆ
ನಿವಾರಣೆಗೆ ಪ್ರಥಮ ಆದ್ಯತೆ ನೀಡುವುದಾಗಿ ಡಾ.ಅಂಜಲಿ ಹೇಳಿದರು.
ರೋಡ್ ಶೋ ಮತ್ತು ಸಭೆಯಲ್ಲಿ ಮಹಾರಾಷ್ಟ್ರದ ಮಾಜಿ ಸಚಿವ ಸದೇಶ ಬಂಟಿ ಪಾಟೀಲ,
ಕಾಂಗ್ರೆಸ್ ಮುಖಂಡರಾದ ಪ್ರಸಾದ ಪಾಟೀಲ, ದೇಮಣ್ಣ ಬಸರಿಕಟ್ಟಿ, ಅಭಿಷೇಕ ಹೊಸಮನಿ,
ಯಲ್ಲಪ್ಪ ಚೌಗುಲೆ, ಪ್ರಕಾಶ ದೇಶಪಾಂಡೆ, ಜಾನ್ ಲೋಬೋ, ನಾರಾಯಣ ಖಾನಾಪುರಿ, ಅನಿತಾ
ದಂಡಗಲ, ಆಶಾ ಹಲಗೇಕರ, ಯಲ್ಲಪ್ಪ ಚಿನಿವಾಲ, ವಿವೇಕ ತಡಕೋಡ ಸೇರಿದಂತೆ ಪಕ್ಷದ
ಕಾರ್ಯಕರ್ತರು ಇದ್ದರು.

ಎಂಇಎಸ್ ಮುಖಂಡರಿಂದ ಕಪ್ಪು ಬಾವುಟ ಪ್ರದರ್ಶನ
ಖಾನಾಪುರ: ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ಪರ ಪ್ರಚಾರಕ್ಕಾಗಿ ಗರ್ಲಗುಂಜಿ
ಗ್ರಾಮಕ್ಕೆ ಶುಕ್ರವಾರ ಆಗಮಿಸಿದ ಮಹಾರಾಷ್ಟ್ರದ ಮಾಜಿ ಸಿಎಂ ಅಶೋಕ ಚವಾಣ ಅವರಿಗೆ
ಗ್ರಾಮದ ಬಸ್ ನಿಲ್ದಾಣದ ಬಳಿ ಎಂಇಎಸ್ ಮುಖಂಡರು ಕಪ್ಪು ಬಾವುಟ ಪ್ರದರ್ಶಿಸಿದರು.
ಮರಾಠಿಗರ ಏಳ್ಗೆಗಾಗಿ ಶ್ರಮಿಸುತ್ತಿರುವ ಎಂಇಎಸ್ ಬೆಂಬಲಿಸಿ ಕ್ಷೇತ್ರದ ಲಕ್ಷಾಂತರ
ಮರಾಠಿಗರ ಪರ ತಮ್ಮ ಧೋರಣೆಯನ್ನು ಪ್ರದರ್ಶಿಸುವಂತೆ ಮಾಜಿ ಸಿಎಂ ಅವರನ್ನು ಎಂಇಎಸ್
ಮುಖಂಡರು ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.
ಪರಿಸ್ಥಿತಿಯನ್ನು ನಿಯಂತ್ರಿಸಿದ ಪೊಲೀಸರು ಎಂಇಎಸ್ ಮುಖಂಡರಾದ ರಣಜೀತ್ ಪಾಟೀಲ, ಗೋಪಾಳ
ಪಾಟೀಲ, ಕೃಷ್ಣಾ ಕುಂಭಾರ ಸೇರಿದಂತೆ 20ಕ್ಕೂ ಹೆಚ್ಚು ಮುಖಂಡರನ್ನು ಬಂಧಿಸಿ ಸ್ಥಳದಿಂದ
ಕರೆದೊಯ್ದರು. ಚವಾಣ ಅವರ ಕಾರ್ಯಕ್ರಮ ಮುಗಿದ ಬಳಿಕ ಬಿಡುಗಡೆಗೊಳಿಸಿದರು.

https://pragati.taskdun.com/rahul-gandhibelagavivisitvidhanasabha-election/


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button