Belagavi NewsBelgaum NewsCrimeKannada NewsKarnataka NewsNationalPolitics

*ಬೆಳಗಾವಿಯಲ್ಲಿ ಘೋರ ದುರಂತ: ಗಂಡನ ಮನೆ ಸೇರಿದ ಮೂರೇ ದಿನಕ್ಕೆ ವಿವಾಹಿತೆ ಸಾವು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮನೆಗೆ ಬಂದ ಕೇವಲ ಮೂರೇ ದಿನಗಳಲ್ಲಿ ನವವಿವಾಹಿತೆಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು ಸಾವಿನ ಸುತ್ತ ಹಲವು ಸಂಶಯಗಳು ವ್ಯಕ್ತವಾಗಿವೆ.

ಜಿಲ್ಲೆಯ ರಾಯಬಾಗ ತಾಲೂಕಿನ ಮೇಖಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. 23 ವರ್ಷದ ಜ್ಯೋತಿ ಕಾಂಬಳೆ ಮೃತಪಟ್ಟ ದುರ್ದೈವಿ.

Home add -Advt

ಮೂರು ವರ್ಷಗಳ ಹಿಂದೆ ಜ್ಯೋತಿ ಅವರಿಗೆ ಹಣಮಂತ ಕಾಂಬಳೆ ಎಂಬುವವರ ಜೊತೆ ವಿವಾಹವಾಗಿತ್ತು. ಆದರೆ ಮದುವೆಯಾದ ಆರಂಭದಲ್ಲಿ ಕೇವಲ ಮೂರು ದಿನಗಳ ಕಾಲವಷ್ಟೇ ಗಂಡನ ಮನೆಯಲ್ಲಿದ್ದ ಜ್ಯೋತಿ, ಅಲ್ಲಿನವರ ಕಿರುಕುಳ ತಾಳಲಾರದೆ ತವರು ಮನೆಗೆ ಮರಳಿದ್ದರು. 

ಸುಮಾರು ಎರಡು ವರ್ಷಗಳ ಕಾಲ ತವರು ಮನೆಯಲ್ಲೇ ಇದ್ದ ಜ್ಯೋತಿಯನ್ನು ಇತ್ತೀಚೆಗಷ್ಟೇ ಗಂಡನ ಮನೆಯವರು ಮನವೊಲಿಸಿ ವಾಪಸ್ ಕರೆದುಕೊಂಡು ಹೋಗಿದ್ದರು. ಹೀಗೆ ಗಂಡನ ಮನೆಗೆ ಮರಳಿದ ಕೇವಲ ಮೂರನೇ ದಿನಕ್ಕೆ ಜ್ಯೋತಿ ಶವವಾಗಿ ಪತ್ತೆಯಾಗಿದ್ದಾರೆ. 

ಈ ಸಾವು ಆತ್ಮಹತ್ಯೆ ಎಂದು ಹೇಳಲಾಗುತ್ತಿದ್ದರೂ, ಮೃತಳ ಕುಟುಂಬಸ್ಥರು ಇದನ್ನು ಒಪ್ಪಲು ಸಿದ್ಧರಿಲ್ಲ. ಗಂಡನ ಮನೆಯವರೇ ಜ್ಯೋತಿ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ತವರು ಮನೆಯವರ ಆಕ್ರಂದನ ಮುಗಿಲು ಮುಟ್ಟಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಜ್ಯೋತಿ ಅವರ ಸಾವಿಗೆ ನಿಖರ ಕಾರಣವೇನು ಎಂಬುದು ತಿಳಿದುಬರಬೇಕಿದೆ. 

Related Articles

Back to top button