*ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಕಲಾಪದಲ್ಲಿ ಧ್ವನಿ ಎತ್ತಿದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ*
ಪ್ರಗತಿವಾಹಿನಿ ಸುದ್ದಿ : ಬೆಂಗಳೂರು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ ಎಂದು ರಾಜ್ಯಸಭಾ ಕಲಾಪದಲ್ಲಿ ನಡೆದ ಕೇಂದ್ರದ ಬಜೆಟ್ ಮೇಲಿನ ಚರ್ಚೆ ವೇಳೆ ಮಾಜಿ ಪ್ರಧಾನಿ ಹಾಗೂ ರಾಜ್ಯಸಭೆಯ ಸದಸ್ಯ ಹೆಚ್.ಡಿ.ದೇವೇಗೌಡ ಅವರು ಹೇಳಿದರು.
ಕೇಂದ್ರ ಬಜೆಟ್ ಸ್ವಾಗತಿಸಿ ಮಾತನಾಡಿದ ಅವರು, ಇದು ಕೇವಲ ಬಿಜೆಪಿ ಬಜೆಟ್ ಅಲ್ವ, ಎನ್‌ಡಿಎ ಮೈತ್ರಿಕೂಟದ ಬಜೆಟ್. ಅಲ್ಲದೇ ಮುಂದಿನ ಬಜೆಟ್ ಬಗ್ಗೆ ಮಾತಾಡ್ತೀನೋ ಇಲ್ಲೋ ಗೊತ್ತಿಲ್ಲ. ಹೀಗಾಗಿ ತಮಗೆ ಅವಕಾಶ ನೀಡಿ ಎಂದು ಮಾತು ಮುಂದುವರಿಸಿದ ಅವರು, ರಾಜ್ಯದ ಅನೇಕ ನೀರಾವರಿ ಯೋಜನೆ, ನೀರಿನ ಸಮಸ್ಯೆ ಬಗ್ಗೆ ಕಲಾಪದಲ್ಲಿ ಗಮನಸೆಳೆದರು.
ಭದ್ರಾ ಮೇಲ್ದಂಡೆ ಯೋಜನೆ ಕೇಂದ್ರ ಒಪ್ಪಿಕೊಂಡಿದ್ದಕ್ಕೆ ಕೇಂದ್ರಕ್ಕೆ ಅಭಿನಂದಿಸಿದ ಅವರು, ಬೆಂಗಳೂರು ನಗರದಲ್ಲಿ ಕುಡಿಯುವ ನೀರು ಸಮಸ್ಯೆ ಇದ್ದು ಜನರು ಕುಡಿಯುವ ನೀರಿಲ್ಲದೇ ಸಂಕಷ್ಟ ಅನುಭವಿಸಿದ್ದಾರೆ. ಕಾವೇರಿ ನೀರನ್ನು ತಮಿಳುನಾಡಿಗೆ ನೀರು ಹರಿಸುವಂತೆ ಆದೇಶಿಸಲಾಗಿತ್ತು. ಈಗ ಉತ್ತಮ ಮಳೆಯಾಗಿದೆ. ಹೀಗಾಗಿ ಸಮಸ್ಯೆ ಇಲ್ಲ.
ಆದರೆ ಮಳೆ ಬರದಿದ್ದರೆ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದರು. ಹಳೇ ಮೈಸೂರು ಭಾಗ ಸೇರಿದಂತೆ ರಾಜಧಾನಿ ಬೆಂಗಳೂರಿಗೆ ಕಾವೇರಿಯೇ ಆಧಾರ. ಇದಕ್ಕಾಗಿ ಜನ ಎನ್‌ಡಿಎಗೆ ಮತ ಹಾಕಿದ್ದಾರೆ. ಸಮಸ್ಯೆಗೆ ಪರಿಹಾರ ನೀಡಿ ಎಂದು ಗೌಡರು ಧ್ವನಿ ಎತ್ತಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ