
ಪ್ರಗತಿವಾಹಿನಿ ಸುದ್ದಿ: ಚಿಕ್ಕಪ್ಪನ ಮನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿ ಬಂದ ಹಣದಿಂದ ಮೋಜುಮಸ್ತಿ ಮಾಡುತ್ತಿದ್ದ ಸಂಬಂಧಿ ಸೇರಿದಂತೆ ನಾಲ್ವರನ್ನು ಬೆಂಗಳೂರಿನ ಕೊತ್ತನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೈರತಿ ಗ್ರಾಮದ ನಿವಾಸಿ ಶ್ರೀನಿವಾಸ್ ರೆಡ್ಡಿ ನೀಡಿದ ದೂರು ಆಧರಿಸಿ ಅವರ ಸಂಬಂಧಿಯಾದ ಯುವತಿ ಮತ್ತು ಆಕೆಯ ಮೂವರು ಸ್ನೇಹಿತರನ್ನು ಬಂಧಿಸಲಾಗಿದೆ.
ಬಂಧಿತರಿಂದ 65 ಲಕ್ಷ ಮೌಲ್ಯದ 548 ಗ್ರಾಂ ಚಿನ್ನ ಹಾಗೂ 10 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ. ಸದ್ಯ ಆರೋಪಿಗಳು ಜಾಮೀನು ಪಡೆದು ಹೊರಬಂದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಬಂಧಿತ ಆರೋಪಿಗಳೆಲ್ಲರೂ ಖಾಸಗಿ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿಗಳಾಗಿದ್ದು, ಕೊತ್ತನೂರು ಸುತ್ತಮುತ್ತಲಿನ ನಿವಾಸಿಗಳಾಗಿದ್ದಾರೆ. ಈ ಪೈಕಿ ಯುವತಿಯ ಕುಟುಂಬವು ಚಿಕ್ಕಪ್ಪ ಶ್ರೀನಿವಾಸ್ ರೆಡ್ಡಿ ಮನೆ ಮುಂದೆ ವಾಸವಾಗಿತ್ತು. ಮೋಜು ಮಸ್ತಿ ಮಾಡಲು ಹಣದ ಕೊರತೆ ಇದ್ದಿದ್ದರಿಂದ ಕಳ್ಳತನಕ್ಕಾಗಿ ಸ್ನೇಹಿತರ ಅಣತಿಯಂತೆ ಯುವತಿಯು ಕಳೆದ ಜನವರಿಯಿಂದಲೇ ಹಂತ-ಹಂತವಾಗಿ ಮನೆಯಲ್ಲಿದ್ದ ಚಿನ್ನಾಭರಣ ಕಳವು ಮಾಡಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕದ್ದ ಚಿನ್ನಾಭರಣ ಸ್ವೀಕರಿಸಿದ ಮೂವರು ಆರೋಪಿಗಳು ಚಿನ್ನದ ಗಟ್ಟಿಯಾಗಿ ಮಾರ್ಪಡಿಸಿ ಅದನ್ನು ಚಿಕ್ಕಪೇಟೆಯ ಆಭರಣದ ಅಂಗಡಿಯೊಂದರಲ್ಲಿ ಮಾರಾಟ ಮಾಡಿದ್ದರು. ಬಂದ ಹಣದಿಂದ ಗೋವಾಗೆ ತೆರಳಿ ಮೋಜು ಮಸ್ತಿ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.