Kannada NewsKarnataka NewsLatest

ಬೆಳಗಾವಿ ಪೊಲೀಸರ ಭರ್ಜರಿ ಭೇಟೆ

ನಾಲ್ವರು ಸರಗಳ್ಳರ ಬಂಧನ; 9 ಲಕ್ಷ ರೂ. ಆಭರಣ ವಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಖಡೇಬಜಾರ ಉಪ-ವಿಭಾಗದ ಪೊಲೀಸರು ನಾಲ್ವರು ಸರಗಳ್ಳರನ್ನು ಬಂಧಿಸಿ, ಒಟ್ಟು 9 ಪ್ರಕರಣಗಳನ್ನು ಬಯಲಿಗೆಳೆದಿದ್ದಾರೆ. 3 ಬೈಕ್ ಸಮೇತ ಸುಮಾರು 8.98 ಲಕ್ಷ ರೂ. ಮೌಲ್ಯದ ಬಂಗಾರದ ಆಭರಣಗಳನ್ನು ಜಪ್ತು ಮಾಡಿದ್ದಾರೆ.

ಕಳೆದ ಮೇ 11 ರಂದು ಬೆಳಗಾವಿ ನಗರದ ದೇಶಪಾಂಡೆ ಚಾಳದ ವಿಮಲಾ ಸೀತಾರಾಮ ಶಿಂಧೆ  ಚಿತ್ರಾ ಟಾಕೀಜ ಸಂತೋಷ-ನಿರ್ಮಲ ಟಾಕೀಜ ಬೋಳನಲ್ಲಿ ಹೊರಟಾಗ ಬೈಕ್‌ಗಳ ಮೇಲೆ ಸರಗಳ್ಳರು ಬಂದು ಒಂದು ಬೈಕ್‌ನವರು ಅಜ್ಜಿ ಅಜ್ಜಿ ಎಂದು ಕರೆದಂತೆ ಮಾಡಿ ತಿರುಗಿ ಆ ಕಡೆಗೆ ನೋಡುವಷ್ಟರಲ್ಲಿ ಇನ್ನೊಂದು ಬೈಕ್ ಮೇಲಿದ್ದ ಸರಗಳ್ಳರು ಅವರ ಕೊರಳಲ್ಲಿದ್ದ ಸುಮಾರು 32 ಸಾವಿರ ರೂ. ಮೌಲ್ಯದ 12 ಗ್ರಾಂ ತೂಕದ ಹಾರವನ್ನು ಕಿತ್ತುಕೊಂಡು ಹೋಗಿದ್ದರು.

ಈ ಬಗ್ಗೆ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ ಖಡೇಬಜಾರ ಠಾಣೆಯ ಪೊಲೀಸರು ಆರೋಪಿತರ ಜಾಡು ಹಿಡಿದು ಮಾಹಿತಿ ಕಲೆ ಹಾಕಿ ಖಚಿತ ಮಾಹಿತಿಯನ್ನಾಧರಿಸಿ ಖಡೇಬಜಾರ ಮತ್ತು ಉದ್ಯಮಬಾಗ ಠಾಣೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ  ಜಂಟಿ ಕಾರ್ಯಾಚರಣೆ ನಡೆಸಿದರು.

ದೀಪಕ ಸುರೇಶ ಅಗಸಿಮನಿ (21), ದೇವರಾಜ ಯಲ್ಲಪ್ಪ ಪೂಜಾರಿ (21),  ನಾಗರಾಜ ಚಿದಾನಂದ ತಳವಾರ (20),  ಅಸ್ಲಂ ಮೌಲಾಸಾಬ ಶೇರೆಗಾರ (20), (ಎಲ್ಲರೂ ಎಕೆಪಿ ಫೌಂಡ್ರಿ ರೋಡ, ಲಕ್ಷೀ ನಗರ, ಉದ್ಯಮಬಾಗ) ಇವರನ್ನು ವಶಕ್ಕೆ ಪಡೆದುಕೊಂಡು ಕುಲಂಕಷವಾಗಿ ವಿಚಾರಣೆ ನಡೆಸಿದರು.

ನಾಲ್ಕೂ ಜನರು ಬೆಳಗಾವಿ ನಗರ ವಿವಿಧ ಠಾಣೆಗಳಾದ ಖಡೇಬಜಾರ-1, ಟಿಳಕವಾಡಿ-1, ಉದ್ಯಮಬಾಗ-4, ಮಾಳಮಾರುತಿ-2 ಮತ್ತು ಅಂಕಲಗಿ ಗ್ರಾಮದಲ್ಲಿ -1 ಹೀಗೆ ಒಟ್ಟು 9 ಜಬರಿ ಕಳ್ಳತನಗಳನ್ನು ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾರೆ.
ಆರೋಪಿತರಿಂದ ಎಲ್ಲ ಪ್ರಕರಣಗಳಲ್ಲಿ ಕಳ್ಳತನ ಮಾಡಿದ ಒಟ್ಟು 184 ಗ್ರಾಂ ಬಂಗಾರದ ಆಭರಣಗಳನ್ನು ಹಾಗೂ ಅಪರಾಧ ಕೃತ್ಯಗಳಿಗೆ ಬಳಸಿದ 2 ಪಲ್ಸರ ಮತ್ತು 1 ಹೀರೋ ಹೋಂಡಾ ಒಟ್ಟು 3 ಬೈಕ್‌ಗಳು ಹೀಗೆ ಆರೋಪಿತರಿಂದ ಒಟ್ಟು ರೂ. 8.98 ಲಕ್ಷ ರೂ. ಮಾಲನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
9 ಪ್ರಕರಣಗಳಲ್ಲಿ ಭಾಗಿಯಾಗಿ ಅಮಾಯಕ ಮಹಿಳೆಯರಿಂದ  ಕಳ್ಳತನ ಮಾಡುತ್ತಿದ್ದ  ಆರೋಪಿತರನ್ನು ಸೂಕ್ಷ್ಮ ಮಾಹಿತಿ ಕಲೆ ಹಾಕಿ ಬಂಧಿಸುವಲ್ಲಿ ಯಶಸ್ವಿಯಾದ ಡಿ. ಬಿ. ಶಿಂಧೆ ಪಿಐ ಖಡೇಬಜಾರ,  ಎಸ್.ಸಿ ಪಾಟೀಲ ಪಿಐ ಉದ್ಯಮಬಾಗ ಹಾಗೂ ಅವರ ತಂಡದ ಸಿಬ್ಬಂದಿ ಖಡೇಬಜಾರ ಠಾಣೆಯ  ಎಸ್.ಸಿ ಶಿಂಧೆ,   ವಾಯ್.ಬಿ ಹತ್ತರವಾಟ,   ಶಿವಪ್ಪ,   ಸನದಿ,  ಮಹಾಂತೇಶ ಹನಗಂಡಿ ಮತ್ತು ಉದ್ಯಮಬಾಗ ಠಾಣೆಯ  ಕೆ. ಕೆ. ಸವದತ್ತಿ,   ಸಿ. ಎಸ್. ಹಂಚಿನಾಳ,  ಜೆ.ಎಫ್ ಹಾದಿಮನಿ,   ಅಜೀತ ಶಿಪ್ಪೂರೆ,   ಎಸ್. ಐ ಗೌಡರ ರವರ ಈ ಕಾರ್ಯವನ್ನು  ಪೊಲೀಸ್ ಆಯುಕ್ತರು,  ಮತ್ತು ಡಿಸಿಪಿ (ಕಾ-ಸು), ಡಿಸಿಪಿ (ಅ -ಸಂ) ಹಾಗೂ ಎಸಿಪಿ ಮಾರ್ಕೆಟ ಮತ್ತು ಖಡೇಬಜಾರ     ಶ್ಲಾಘಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button