National

*ವಿಮಾನ ನಿಲ್ದಾಣದಲ್ಲಿ ನಾಲ್ವರು ಐಸಿಸ್ ಉಗ್ರರ ಬಂಧನ*

ಪ್ರಗತಿವಾಹಿನಿ‌ ಸುದ್ದಿ: ಶ್ರೀಲಂಕಾ ಮೂಲದ ನಾಲ್ವರು ಶಂಕಿತ ಐಸಿಸ್ ಉಗ್ರರನ್ನು ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಎಟಿಎಸ್‌ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಲು ಉಗ್ರರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಎಟಿಎಸ್‌, ವಿಮಾನ ನಿಲ್ದಾಣದಲ್ಲಿ ಬಂಧಿಸಲಾದ ನಾಲ್ವರು ಶಂಕಿತ ಉಗ್ರರು ಶ್ರೀಲಂಕಾದ ಪ್ರಜೆಗಳು. ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಅವರು ಯಾಕೆ ಬಂದಿದ್ದರು ಎಂದು ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಎಂದು ತಿಳಿಸಿದೆ.

ಭಯೋತ್ಪಾದಕರು ಶ್ರೀಲಂಕಾದಿಂದ ಚೆನ್ನೈ ಮೂಲಕ ಅಹಮದಾಬಾದ್‌ಗೆ ಬಂದಿದ್ದರು. ಬಂಧಿತರನ್ನು ಮೊಹಮ್ಮದ್ ನುಸ್ರತ್, ಮೊಹಮ್ಮದ್ ನಫ್ರಾನ್, ಮೊಹಮ್ಮದ್ ಫಾರಿಸ್ ಮತ್ತು ಮೊಹಮದ್ ರಫೀನ್ ಎಂದು ಗುರುತಿಸಲಾಗಿದೆ. ಅವರು ಪಾಕಿಸ್ತಾನಿ ಉಗ್ರರೊಂದಿಗೆ ಸಂಪರ್ಕದಲ್ಲಿದ್ದರು ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ. ಘಟನೆ ಬಳಿಕ ವಿಮಾನ ನಿಲ್ದಾಣದಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಈ ಪ್ರಕರಣ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಡೆಪ್ಯುಟಿ ಜನರಲ್ ಆಫ್ ಪೊಲೀಸ್‌ ವಿಕಾಸ್ ಸಹಾಯ್, ನಾಲ್ವರು ಭಯೋತ್ಪಾದಕರು ಶ್ರೀಲಂಕಾ ಮೂಲದವರು ಮತ್ತು ಇಸ್ಲಾಮಿಕ್ ಸ್ಟೇಟ್ ಸಿದ್ಧಾಂತದಿಂದ ತೀವ್ರಗಾಮಿಗಳಾಗಿದ್ದಾರೆ. ಅವರು ಕೇವಲ ತಮಿಳು ಮಾತ್ರ ಮಾತನಾಡುತ್ತಾರೆ ಮತ್ತು ಹಿಂದಿ ಅಥವಾ ಇಂಗ್ಲಿಷ್ ಅರ್ಥವಾಗುವುದಿಲ್ಲ ಎಂದು ಹೇಳಿದರು.

ಐಸಿಸ್ ಉಗ್ರರು ಮೊದಲು ಕೊಲಂಬೊದಿಂದ ಚೆನ್ನೈಗೆ ಆಗಮಿಸಿ, ನಂತರ ಮೇ 19 ಭಾನುವಾರ ರಂದು ಅಹಮದಾಬಾದ್‌ ತಲುಪಿದ್ದಾರೆ ಎನ್ನಲಾಗಿದೆ. ನಾಲ್ವರು ಭಯೋತ್ಪಾದಕರು ಮೇ 18 ಅಥವಾ 19 ರಂದು ರೈಲು ಅಥವಾ ವಿಮಾನದ ಮೂಲಕ ಅಹಮದಾಬಾದ್ ತಲುಪಲಿದ್ದಾರೆ ಎಂಬ ಮಾಹಿತಿ ನಮಗೆ ಮೊದಲ ಬಂದಿತ್ತು. ಇದರಿಂದ ಎಚ್ಚೆತ್ತು ವಿವಿಧ ತಂಡಗಳನ್ನು ರಚಿಸಿ ತಂತ್ರವನ್ನು ರೂಪಿಸಲಾಗಿತ್ತು ಎಂದು ಹೇಳಿದ್ದಾರೆ.

ಐಪಿಎಲ್ ನ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯಗಳಿಗಾಗಿ ಮೂರು ಐಪಿಎಲ್ ತಂಡಗಳು ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದ ಸಂದರ್ಭದಲ್ಲೇ ಶಂಕಿತ ಉಗ್ರರ ಬಂಧನವಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

Related Articles

Back to top button