CrimeKannada NewsKarnataka NewsLatest

*ನಿರ್ಮಾಣ ಹಂತದ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ದುರಂತ*: *ಒಂದೇ ಕಾರಿನಲ್ಲಿದ್ದ ನಾಲ್ವರು ಯುವಕರು ಸಾವು*

ಪ್ರಗತಿವಾಹಿನಿ ಸುದ್ದಿ: ರಾತ್ರಿ ಪ್ರಯಾಣಕ್ಕೆ ಹೊರಟಿದ್ದ ನಾಲ್ವರು ಯುವಕರ ಬದುಕು ರಸ್ತೆ ಅಪಘಾತದಲ್ಲಿ ದುರಂತ ಅಂತ್ಯ ಕಂಡಿದೆ. ನಿರ್ಮಾಣ ಹಂತದ ಎಕ್ಸ್‌ಪ್ರೆಸ್‌ವೇಯಲ್ಲಿ ವೇಗವಾಗಿ ಬಂದ ಕಾರು ರಸ್ತೆ ಬದಿಯ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಲಿಂಗೇರಿ ತಾಂಡಾದ ಓರ್ವ ಯುವಕ ಹಾಗೂ ಮಲ್ಹಾರ್ ತಾಂಡಾದ ಮೂವರು ನಿವಾಸಿಗಳು ಕಲಬುರಗಿ ಜಿಲ್ಲೆಯ ಜೇವರ್ಗಿಯಿಂದ ಯಾದಗಿರಿ ಕಡೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಶುಕ್ರವಾರ ರಾತ್ರಿ ಸುಮಾರು 11.30ರ ವೇಳೆಗೆ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಗೋಡೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಜಖಂಗೊಂಡಿದ್ದು, ಅದರಲ್ಲಿದ್ದ ನಾಲ್ವರೂ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

ಗುರುರಾಜ್ ಚವ್ಹಾಣ್, ರೆಡ್ಡಿ ರಾಠೋಡ್, ಗೋವಿಂದ ಚವ್ಹಾಣ್ ಮತ್ತು ಕುಮಾರ್ ರಾಠೋಡ್ ಮೃತಪಟ್ಟ ಯುವಕರು. ಅಪಘಾತದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ದುರ್ಘಟನೆ ನಡೆದಿರುವುದು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಇಬ್ರಾಹಿಂ ಡಿಬಿಎಲ್ ಕ್ಯಾಂಪ್ ಸಮೀಪ.

ಇನ್ನು, ಮತ್ತೊಂದು ಅಪಘಾತದಲ್ಲಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಬೈಕ್ ಸವಾರನೊಬ್ಬ ಮೃತಪಟ್ಟಿದ್ದಾನೆ. ಬೆಂಗಳೂರಿನ ವಿಜಯನಗರ ನಿವಾಸಿ ಪ್ರವೀಣ್, ನೆಲಮಂಗಲದ ಖಾಸಗಿ ಕಂಪನಿಯಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದರು. ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಮಾದನಾಯಕನಹಳ್ಳಿ ಬಳಿ ಬೈಕ್ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ಪರಿಣಾಮ ತಲೆಗೆ ಗಂಭೀರ ಗಾಯವಾಗಿ ಪ್ರವೀಣ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸುತ್ತಿದ್ದದ್ದು ಅಪಘಾತದ ವೇಳೆ ಅಪಾಯ ಹೆಚ್ಚಿಸಿರಬಹುದು ಎಂದು ತಿಳಿದುಬಂದಿದೆ. ಚಿಕ್ಕಬಾಣಾವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ನೆಲಮಂಗಲದ ಶವಾಗಾರಕ್ಕೆ ರವಾನಿಸಿದ್ದಾರೆ.

Related Articles

Back to top button