ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಡಾ.ಸುಧಾಮೂರ್ತಿ ಹೆಸರು ಬಳಸಿ ವಂಚನೆ ಮಾಡಿದ ಆರೋಪಿಯನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಜಾಜಿನಗರ ನಿವಾಸಿ ಅರುಣ ಸುದರ್ಶನ್(40) ಬಂಧಿತ. ಅಮೆರಿಕದಲ್ಲಿ ನಡೆಯುವ ಕಾರ್ಯಕ್ರಮವೊಂದಕ್ಕೆ ಸುಧಾಮೂರ್ತಿ ಅವರು ಮುಖ್ಯ ಅತಿಥಿಯಾಗಿ ಬರಲಿದ್ದಾರೆ ಎಂದು ಸುಳ್ಳು ಹೇಳಿ 40 ಡಾಲರ್ ಪಡೆದು ಟಿಕೆಟ್ ಮಾರಾಟ ಮಾಡಿ ವಂಚಿಸಿದ ಆರೋಪದಡಿ ಲಾವಣ್ಯ, ಶೃತಿ ಎಂಬುವವರ ವಿರುದ್ಧ ಸುಧಾಮೂರ್ತಿ ಅವರ ಕಾರ್ಯನಿರ್ವಾಹಕ ಸಹಾಯಕಿ ಮಮತಾ ಸಂಜಯ್ ದೂರು ಸಲ್ಲಿಸಿದ್ದರು. ಈ ದೂರನ್ನಾಧರಿಸಿ ತನಿಖೆ ಕೈಗೊಂಡ ಪೊಲೀಸರು ಸುದರ್ಶನ್ ನನ್ನು ಬಂಧಿಸಿದ್ದು ವಿಚಾರಣೆಗೆ ಗುರಿಪಡಿಸಿದ್ದಾರೆ.
ಅರುಣ ಹಾಗೂ ಶೃತಿ ಅವರ ಪತಿ ಸಂಬಂಧಿಗಳಾಗಿದ್ದು ದಶಕದಿಂದ ಸಂಬಂಧ ಕಡಿದುಕೊಂಡಿದ್ದರು. ಇದರಿಂದ ಕುಪಿತನಾಗಿದ್ದ ಅರುಣ ಅವರ ಮಾನ ಹರಾಜು ಹಾಕಲು ಕಾಯುತ್ತಲೇ ಇದ್ದ. ಏತನ್ಮಧ್ಯೆ ಶೃತಿ ಹಾಗೂ ಅವರ ಪತಿ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ವತಿಯಿಂದ ಅಮೆರಿಕದ ಸೇವಾ ಮಿಲಿಟಸ್ ನಲ್ಲಿ ಕಳೆದ ಸೆ.26ರಂದು ಡಾ. ಸುಧಾಮೂರ್ತಿ ಅವರೊಂದಿಗೆ ಸಂದರ್ಶನ ಕಾರ್ಯಕ್ರಮಕ್ಕೆ ಸುಧಾಮೂರ್ತಿ ಅವರನ್ನು ಮುಖ್ಯ ಅತಿಥಿಯಾಗಿ ಸಂಪರ್ಕಿಸಿ ಕರೆತರಲು ಶೃತಿ ಹಾಗೂ ಅವರ ಪತಿ ಅರುಣ ಬಳಿ ಕೋರಿದ್ದರು. ಅರುಣ ಇದಕ್ಕೆ ಒಪ್ಪಿಗೆ ಸೂಚಿಸಿದ್ದ.
ಅರುಣನನ್ನು ನಂಬಿದ ದಂಪತಿ ಭಾರಿ ಪ್ರಚಾರದೊಂದಿಗೆ ಸುಧಾಮೂರ್ತಿಯವರ ಸಂದರ್ಶನ ಕಾರ್ಯಕ್ರಮ ಆಯೋಜಿಸಿ ತಲಾ 40 ಡಾಲರ್ ಟಿಕೆಟ್ ಕೂಡ ಇರಿಸಿ ಮಾರಾಟ ಮಾಡಿದ್ದರು. ಇದನ್ನು ಗಮನಿಸಿದ್ದ ಮಮತಾ ಸಂಜಯ್ ಈ ಕುರಿತು ವಿಚಾರಿಸಿ ಸಮ್ಮತಿ ಇಲ್ಲದೆ ಕಾರ್ಯಕ್ರಮ ಆಯೋಜಿಸಿ ಪ್ರಚಾರ ಮಾಡಿದ್ದಕ್ಕೆ ದೂರು ಸಲ್ಲಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ