*ಆಂಧ್ರದಲ್ಲೂ ಫ್ರೀ ಬಸ್ ಯೋಜನೆ: ಸಿಎಂ ಸಿದ್ದರಾಮಯ್ಯ ಜೊತೆ ಸಭೆ ನಡೆಸಿದ ಆಂಧ್ರ ಸಚಿವರು*
ಪ್ರಗತಿವಾಹಿನಿ ಸುದ್ದಿ : ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಲ್ಲೊಂದಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆ ಆಂಧ್ರ ಪ್ರದೇಶದಲ್ಲೂ ಜಾರಿಗೆ ತರಲು ಅಲ್ಲಿನ ಸರ್ಕಾರ ಮುಂದಾಗಿದೆ.
ಈ ಕುರಿತು ಮಾಹಿತಿ ಪಡೆಯಲು ಇಂದು ಆಂಧ್ರದ ಸಾರಿಗೆ ಸಚಿವ ರಾಮ್ ಪ್ರಸಾದ್ ರೆಡ್ಡಿ ಆಂಧ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಸಂಧ್ಯಾರಾಣಿ, ಗೃಹ ಸಚಿವೆ ವಿ.ಅನಿತಾ ಅವರ ನಿಯೋಗವು ಸಿಎಂ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿತು.
ವಿಧಾನಸೌಧದಲ್ಲಿ ಆಂಧ್ರ ನಿಯೋಗಕ್ಕೆ ಸಿಎಂ ಹಾಗೂ ರಾಮಲಿಂಗಾ ರೆಡ್ಡಿ ಅವರು ಶಕ್ತಿ ಯೋಜನೆ ಬಗ್ಗೆ ವಿವರಿಸಿದರು. ಆಂಧ್ರದ ಸಿಎಂ ಚಂದ್ರಬಾಬು ನಾಯ್ಡು ಸೂಚನೆ ಮೇರೆಗೆ ಆಂಧ್ರ ಸಚಿವರ ತಂಡ ಭೇಟಿ ನೀಡಿದ್ದು, ಸದ್ಯದಲ್ಲೇ ಆಂಧ್ರದಲ್ಲೂ ಮಹಿಳೆಯರಿಗೆ ಫ್ರೀ ಬಸ್ ಜಾರಿ ಮಾಡಲು ನಾಯ್ಡು ಸರ್ಕಾರ ಆಸಕ್ತಿ ತೋರಿದೆ ಎಂದು ತಿಳಿದುಬಂದಿದೆ.
ಇನ್ನು ಶಕ್ತಿ ಯೋಜನೆ ಬಗ್ಗೆ ಹಾಗೂ ಟಿಕೆಟ್ ದರ ಏರಿಕೆ ಕುರಿತು ಈಗಾಗಲೇ ರಾಜ್ಯ ಬಿಜೆಪಿಯು ಸರ್ಕಾರವನ್ನು ಟೀಕಿಸುತ್ತಿರುವಾಗಲೇ, ಎನ್‌ಡಿಎ ಮೈತ್ರಿ ಪಕ್ಷ ಟಿಡಿಪಿ ನೇತೃತ್ವದ ಆಂಧ್ರ ಸರ್ಕಾರ ಕಾಂಗ್ರೆಸ್ ಯೋಜನೆಯನ್ನು ಅನುಸರಿಸಲು ಮುಂದಾಗಿರುವುದು ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ