Kannada NewsKarnataka NewsLatestPolitics

ಕೆಎಲ್ಇಯಿಂದ ಉಚಿತ ವೈದ್ಯಕೀಯ ಸಲಕರಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೆಎಲ್‌ಇ ಸಂಸ್ಥೆಯ ಸ್ತ್ರೀಶಕ್ತಿ ಸಂಘವು ಸಾಮಾಜಿಕ ಕಳಕಳಿಯಿಂದ ಅನೆಕ ಕಾರ‍್ಯಗಳನ್ನು ಮಾಡುತ್ತಿದ್ದು, ಅವಶ್ಯವಿರುವ ರೋಗಿಗಳಿಗೆ ವೈದ್ಯಕೀಯ ಸಲಕರಣೆಗಳನ್ನು ನೀಡಲು ಮುಂದೆ ಬಂದಿದೆ.

ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಆವರಣದಲ್ಲಿರುವ ನರ್ಸಿಂಗ್ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ಸಲಕರಣೆ ವಿತರಣಾ ಘಟವನ್ನು ಪ್ರಾರಂಭಿಸಿದ್ದು, ಇಂದು ಸ್ತ್ರೀಶಕ್ತಿ ಸಂಘದ ಅಧ್ಯಕ್ಷೆ ಆಶಾ ಕೋರೆ ಜನಸೇವೆಗೆ ಅರ್ಪಿಸಿದರು.
ನಂತರ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆಯಿಂದ ಗುಣಮುಖರಾಗಿ ಮನೆಗೆ ಮರಳಿದಾಗ ಅಲ್ಲಿಯೂ ಕೂಡ ಆರೈಕೆ ಅತೀ ಮುಖ್ಯವಾಗಿರುತ್ತದೆ. ಆದರೆ ಆಸ್ಪತ್ರೆಯಲ್ಲಿರುವ ಸಲಕರಣೆಗಳು ಲಭ್ಯವಿರುವುದಿಲ್ಲ. ಅದರಲ್ಲಿಯೂ ವೃದ್ದರ ಆರೈಕೆಗೆ ಅಗತ್ಯವಾದ ವೈದ್ಯಕೀಯ ಸಲಕರಣೆಗಳು ಬೇಕಾಗುತ್ತವೆ. ಅವು ಕೆಲವೇ ದಿನಗಳವರೆಗೆ ಅವಶ್ಯವಿರುವುದರಿಂದ ಕುಟುಂಬ ಸದಸ್ಯರಿಗೆ ಖರ್ಚು ಹೊರೆಯಾಗುವ ಸಂಭವ ಅಧಿಕವಾಗಿರುತ್ತದೆ. ಆದ್ದರಿಂದ ಇದನ್ನು ಮನಗಂಡು ಈ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಈ ಘಟಕದಲ್ಲಿ ವಾಕರ್, ಏರ್‌ಬೆಡ್, ಐವಿ (ಸಲಾಯಿನ್) ಸ್ಟ್ಯಾಂಡ್, ವೀಲಚೇರ್, ಅಡ್ಜಸ್ಟೆಬಲ್ ಬೆಡ್ ಸೇರಿದಂತೆ ವಿವಿಧ ಮನೆಯಲ್ಲಿ ಆರೈಕೆಗೆ ಅವಶ್ಯವಿರುವ ಸಾಮಗ್ರಿಗಳನ್ನು ರಿಫಂಡೇಬಲ್ ಡಿಪಾಸಿಟ್ ( ಮುಂಗಡ ಹಣ) ಪಡೆದು ನೀಡಲಾಗುತ್ತದೆ. ಸಾಮಗ್ರಿ ಮರಳಿಸಿದ ನಂತರ ನೀಡಿದ ಹಣವನ್ನು ಮರಳಿಸಲಾಗುತ್ತದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಸಂಯೋಜಕರಾದ ಡಾ. ಪ್ರೀತಿ ದೊಡವಾಡ, ಡಾ. ಅಲ್ಕಾ ಕಾಳೆ, ಸುಜಾತಾ ಜಾಲಿ, ಡಾ. ಸುಧಾ ರೆಡ್ಡಿ, ಡಾ. ನೇಹಾ ಧಡೇದ, ಡಾ. ಹರಪ್ರೀತ ಕೌರ, ಡಾ. ಸ್ನೇಹಾ ಧರ‍್ಮಾಯತ, ಡಾ. ಆರತಿ ಮಹಿಶಾಳೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ವೈದ್ಯಕೀಯ ಸಾಮಗ್ರಿಗಳು ಅವಶ್ಯವಿದ್ದವರು ಮೊ. ೯೪೪೮೩೦೫೪೧೩/೯೬೩೨೮೨೨೬೨೨ ಇಲ್ಲಿಗೆ ಸಂಪರ್ಕಿಸಲು ಕೋರಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button