ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಕೊರೊನಾ ವೈರಸ್ಸಿನಿಂದ ಲಾಕ್‌ಡೌನ್ ಸಂದರ್ಭದಲ್ಲಿ ಕೆಎಮ್‌ಎಫ್‌ನಿಂದ ಏ-೩ರಿಂದ ೧೪ರ ವರೆಗೆ ಪ್ರತಿದಿನ ೭.೫೦ ಲಕ್ಷ ಲೀಟರ್ ಹಾಲನ್ನು ಸರ್ಕಾರ ಖರೀದಿಸಿಕೊಂಡಿದ್ದು, ಮತ್ತೆ ಬಡಜನರ ಹಿತಕ್ಕಾಗಿ ಒಂದು ವಾರಕಾಲ ಇದನ್ನು ವಿಸ್ತರಿಸಲಾಗಿದೆ.
ಸೋಮವಾರದಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಗೃಹಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ ಕೆಎಮ್‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಲಾಕ್‌ಡೌನ್ ಮತ್ತೆ ವಿಸ್ತರಣೆಯಾಗುವ ಸಂಭವವಿರುವುದರಿಂದ ತಾವೇ ಸ್ವತ: ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಹೈನೋದ್ಯಮವನ್ನೇ ನಂಬಿರುವ ರೈತರ ಬಾಳಿಗೆ ಬೆಳಕಾಗಲು ನಂದಿನಿ ಹಾಲನ್ನು ಖರೀದಿಸಿ ರಾಜ್ಯದ ಬಡವರಿಗೆ ಸಹಾಯ ಮಾಡುವಂತೆ ವಿನಂತಿಸಿಕೊಂಡಿರುವುದಾಗಿ ಅವರು ಹೇಳಿದರು.
ಏ-೩ರಿಂದ ೧೪ರ ವರೆಗೆ ಒಟ್ಟು ೧೨ ದಿನಗಳಲ್ಲಿ ನಂದಿನಿ ಹಾಲನ್ನು ರಾಜ್ಯ ಸರ್ಕಾರ ನಮ್ಮಿಂದ ಖರೀದಿಸಿಕೊಂಡು ಕೊರೊನಾ ಹಿನ್ನೆಲೆಯಲ್ಲಿ ಬಡವರಿಗೆ ಪ್ರತಿದಿನ ಉಚಿತವಾಗಿ ನೀಡುತ್ತಿದೆ. ಇದಕ್ಕಾಗಿ ಸುಮಾರು ೩೯ಕೋಟಿ ರೂಗಳನ್ನು ಕೆಎಮ್‌ಎಫ್‌ಗೆ ಸರ್ಕಾರ ಪಾವತಿಸಿದೆ. ಮತ್ತೆ ಒಂದು ವಾರಕಾಲ ಪ್ರತಿದಿನ ೭.೫೦ ಲಕ್ಷ ಲೀಟರ್ ಹಾಲನ್ನು ಖರೀದಿಸಲು ಮುಂದಾಗಿರುವ ಸರ್ಕಾರ ಇದಕ್ಕಾಗಿ ೧೭.೫೦ ಕೋಟಿ ರೂಗಳನ್ನು ನೀಡಬೇಕಾಗಿದೆ. ಈ ಹಣವನ್ನು ಪಾವತಿ ಮಾಡುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಆದೇಶಿಸಿದ್ದಾರೆಂದು ಅವರು ಹೇಳಿದರು.
ರೈತಪರ ಹೋರಾಟಗಾರರಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಹಾಲು ಖರೀದಿಯಿಂದ ರಾಜ್ಯದಲ್ಲಿರುವ ೧೩ಲಕ್ಷ ರೈತ ಕುಟುಂಬಗಳಿಗೆ ಯಾವುದೇ ತೊಂದರೆಯಾಗದಂತೆ ಆಸರೆಯಾಗಿ ನಿಂತಿದ್ದಾರೆ. ಸಂಕಷ್ಟದ ಸಮಯದಲ್ಲಿ ಪ್ರತಿನಿತ್ಯ ಉಳಿಯುತ್ತಿರುವ ಹಾಲನ್ನು ಖರೀದಿಸಿ ಕೆಎಮ್‌ಎಫ್‌ಗೆ ನೆರವಾಗಿರುವ ಸಿಎಮ್ ಯಡಿಯೂರಪ್ಪ ಅವರಿಗೆ ರಾಜ್ಯದ ಎಲ್ಲ ಜಿಲ್ಲಾ ಹಾಲು ಒಕ್ಕೂಟಗಳು, ರೈತರು, ಬಡಜನತೆ ಹಾಗೂ ಗ್ರಾಹಕರ ಪರವಾಗಿ ಬಾಲಚಂದ್ರ ಜಾರಕಿಹೊಳಿ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ, ಸಿಎಮ್ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ, ಮಾಜಿ ಶಾಸಕ ಎಮ್.ಯು.ನಾಗರಾಜ ಅವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ