
ಪ್ರಗತಿವಾಹಿನಿ ಸುದ್ದಿ: ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಮಹತ್ವದ ಬೆಳವಣಿಗೆಯೊಂದರ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದಾರೆ. ವಿಶ್ವದ ಪ್ರಮುಖ ತೈಲ ಸಾಗಾಣಿಕಾ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿ ನಾಳೆ ಬೆಳಗ್ಗೆಯಿಂದ ಸಂಪೂರ್ಣವಾಗಿ ತೆರೆಯಲಿದೆ ಎಂದು ಅವರು ಘೋಷಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಟ್ರಂಪ್, ಜಲಸಂಧಿ ಮುಕ್ತವಾದ ಬಳಿಕ ಅಪಾರ ಪ್ರಮಾಣದ ಕಚ್ಚಾತೈಲ ಮಾರುಕಟ್ಟೆಗೆ ಹರಿದುಬರಲಿದೆ. ಇದರಿಂದ ಪೆಟ್ರೋಲ್ ಸೇರಿದಂತೆ ಇಂಧನ ದರಗಳಲ್ಲಿ ಗಣನೀಯ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ಅಲ್ಲದೇ, ವಾಹನದ ಟ್ಯಾಂಕ್ ಸಂಪೂರ್ಣ ಖಾಲಿಯಾಗುವವರೆಗೆ ಪೆಟ್ರೋಲ್ ತುಂಬಿಸಿಕೊಳ್ಳದಂತೆ ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ. ಮುಂದಿನ ಶುಕ್ರವಾರ ಅಥವಾ ಗರಿಷ್ಠ ಸೋಮವಾರದ ವೇಳೆಗೆ ಅಮೆರಿಕದಲ್ಲಿ ಪೆಟ್ರೋಲ್ ದರ ಗ್ಯಾಲನ್ಗೆ 2.50 ಡಾಲರ್ವರೆಗೆ ಇಳಿಯಬಹುದು ಎಂದು ಟ್ರಂಪ್ ಅಂದಾಜಿಸಿದ್ದಾರೆ.
ಹಾರ್ಮುಜ್ ಜಲಸಂಧಿಯು ಜಾಗತಿಕ ಕಚ್ಚಾತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವುದರಿಂದ, ಅದು ಸಂಪೂರ್ಣವಾಗಿ ಮುಕ್ತವಾದರೆ ತೈಲ ಪೂರೈಕೆ ಹೆಚ್ಚಾಗುವ ಸಾಧ್ಯತೆಯಿದೆ.
ಇದರ ಪರಿಣಾಮವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಹಾಗೂ ಇಂಧನ ಬೆಲೆಗಳು ಇಳಿಕೆಯಾಗಬಹುದು ಎಂಬ ಚರ್ಚೆ ಇದೀಗ ಆರಂಭವಾಗಿದೆ.
ಜಾಗತಿಕ ಇಂಧನ ಬಿಕ್ಕಟ್ಟಿನ ನಡುವೆಯೇ ಟ್ರಂಪ್ ನೀಡಿರುವ ಈ ಹೇಳಿಕೆ ತೈಲ ಮಾರುಕಟ್ಟೆಯಲ್ಲಿ ಕುತೂಹಲ ಮೂಡಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




