
ಪ್ರಗತಿವಾಹಿನಿ ಸುದ್ದಿ: ವಿಶ್ವವಿಖ್ಯಾತ ಮೈಸೂರು ದಸರಾ 2026ರ ಸಂಭ್ರಮಕ್ಕೆ ಮತ್ತಷ್ಟು ಮೆರುಗು ಬರಲಿದೆ. ಮೈಸೂರಿನಲ್ಲಿ ಭಾರತೀಯ ವಾಯುಪಡೆಯ ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡದ ವೈಮಾನಿಕ ಪ್ರದರ್ಶನ ನಡೆಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮನವಿಗೆ ಸ್ಪಂದಿಸಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸೂರ್ಯ ಕಿರಣ್ ತಂಡದ ಪ್ರದರ್ಶನಕ್ಕೆ ಹಸಿರು ನಿಶಾನೆ ನೀಡಿದ್ದಾರೆ. ಅಕ್ಟೋಬರ್ 18ರಿಂದ 20ರವರೆಗೆ ಮೈಸೂರಿನಲ್ಲಿ ಈ ವಿಶೇಷ ವೈಮಾನಿಕ ಪ್ರದರ್ಶನ ನಡೆಯಲಿದೆ.
ಮೈಸೂರು ದಸರಾ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ ಭಾರತೀಯ ವಾಯುಪಡೆಯ ಸಾಹಸ ಮತ್ತು ಕೌಶಲ್ಯವನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆ. ಆಕಾಶದಲ್ಲಿ ಸೂರ್ಯ ಕಿರಣ್ ತಂಡದ ವಿಮಾನಗಳು ನಡೆಸುವ ವೈವಿಧ್ಯಮಯ ಕಸರತ್ತುಗಳು ದಸರಾ ಸಂಭ್ರಮಕ್ಕೆ ಮತ್ತಷ್ಟು ಆಕರ್ಷಣೆ ನೀಡಲಿವೆ.
ಈ ಬಾರಿ ಸೂರ್ಯ ಕಿರಣ್ ತಂಡದ ಜೊತೆಗೆ ಸಾರಂಗ್ ಹೆಲಿಕಾಪ್ಟರ್ ಏರೋಬ್ಯಾಟಿಕ್ ತಂಡದ ಪ್ರದರ್ಶನಕ್ಕೆ ಅವಕಾಶ ಸಿಕ್ಕಿಲ್ಲ. ಪೂರ್ವನಿಗದಿಯಾಗಿರುವ ಕಾರ್ಯಕ್ರಮಗಳ ಕಾರಣದಿಂದ ಸಾರಂಗ್ ತಂಡವನ್ನು ಮೈಸೂರಿಗೆ ನಿಯೋಜಿಸಲು ಸಾಧ್ಯವಾಗುವುದಿಲ್ಲ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಸೂರ್ಯ ಕಿರಣ್ ತಂಡದ ಪ್ರದರ್ಶನಕ್ಕೆ ಅಗತ್ಯವಿರುವ ಸಮನ್ವಯ ಹಾಗೂ ಇತರೆ ವ್ಯವಸ್ಥೆಗಳನ್ನು ಭಾರತೀಯ ವಾಯುಪಡೆಯೊಂದಿಗೆ ಚರ್ಚಿಸಿ ಕೈಗೊಳ್ಳುವಂತೆ ರಕ್ಷಣಾ ಸಚಿವರು ಸೂಚಿಸಿದ್ದಾರೆ.
ಮೈಸೂರು ದಸರಾ ಸಂದರ್ಭದಲ್ಲಿ ಎರಡೂ ಏರೋಬ್ಯಾಟಿಕ್ ತಂಡಗಳ ಪ್ರದರ್ಶನಕ್ಕೆ ಅವಕಾಶ ನೀಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 6ರಂದು ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಮುಖ್ಯಮಂತ್ರಿಯ ಮನವಿಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ ಇದೀಗ ಸೂರ್ಯ ಕಿರಣ್ ತಂಡಕ್ಕೆ ಅನುಮತಿ ನೀಡಿದೆ. ಹೀಗಾಗಿ ದಸರಾ ದಿನಗಳಲ್ಲಿ ಮೈಸೂರಿನ ಆಕಾಶದಲ್ಲಿ ನಡೆಯಲಿರುವ ಈ ವೈಮಾನಿಕ ಪ್ರದರ್ಶನ ಪ್ರವಾಸಿಗರು ಹಾಗೂ ಸ್ಥಳೀಯರಿಗೆ ಪ್ರಮುಖ ಆಕರ್ಷಣೆಯಾಗುವ ನಿರೀಕ್ಷೆಯಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



